ನನ್ನ ಆಲೋಚನೆಯ ಸದಾಶಯ ದಂತೆ ಕನ್ನಡದ ಪ್ರಾಧ್ಯಾಪಕ ಅಂದರೆ ಸಹೃದಯತೆ, ಸರಳತೆ, ಸಜ್ಜನಿಕೆ ಈ ಎಲ್ಲದರ ಸಭ್ಯತೆಯ ಮೊತ್ತ. ಖರೇವಂದ್ರ ಅಂತಹ ಕೆಲವು ಸೂಕ್ಷ್ಮತೆಗಳ ಮೊತ್ತದ ಹೆಸರೇ ದಾವಣಗೆರೆಯ ಡಾ. ಎಂ. ಜಿ. ಈಶ್ವರಪ್ಪ.
ನಮ್ಮ ಈಶ್ವರಪ್ಪ ಮಾಸ್ತರರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಹಾಡೋಹಳ್ಳಿ. ಎಂ. ಜಿ. ಅಂದರೆ ಮಾಳಿಗೆ ಗೌಡರ ಮನೆತನದ ಈಶ್ವರಪ್ಪರ ಹತ್ತಿರ ಯಾವತ್ತೂ ಗೌಡಿಕೆಯ ಗತ್ತು ಗೈರತ್ತು ಸುಳಿದ ನೆನಪು ಯಾರೂ ಎಂದೂ ಕಂಡಿಲ್ಲ. ಅಷ್ಟಕ್ಕೂ ಅವರ ಪೂರ್ವಜರು ನಮ್ಮ ಕಲ್ಯಾಣ ಕರ್ನಾಟಕದ ಸಗರನಾಡಿನವರು. ಅದು ಅವರ ಮನೆತನದ ಹೆಳವರು ಹೇಳುವ ಹೊತ್ತಿಗೆ ಕಥನವಂತೆ. ನಮ್ಮ ಸಗರನಾಡಿನ ಮಾಳಿಗೆ ಮನೆಗಳು ಚಾರಿತ್ರ್ಯಕವಾಗಿ ಪುರಾತನವಾದವು. ಆದರೆ ಮಲೆನಾಡಿನಲ್ಲೂ ಈಶ್ವರಪ್ಪರ ಹಿರೀಕರು ಅದೇ ಮಾಳಿಗೆ ಮನೆ ಗೌಡರು.
ವರ್ತಮಾನದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲ, ಒಟ್ಟು ಸಾಮಾಜಿಕ ಸಂರಚನೆಯಲ್ಲಿ ಈ ಮೇಲೆ ನಾನು ಪ್ರಸ್ತಾಪಿಸಿದ ಸಭ್ಯಶೀಲ ಮೌಲ್ಯಿಕ ಮೊತ್ತಗಳೇ ಕಣ್ಮರೆಯಾಗುತ್ತಲಿವೆ. ಇಂತಹ ದುರಿತಕಾಲದ ತುಟ್ಟಿ ದಿನಗಳಲ್ಲಿ ಡಾ. ಎಂ. ಜಿ. ಈಶ್ವರಪ್ಪರಂಥ ನಿಸ್ಪೃಹ ಜೀವಿಗಳು ನಮ್ಮ ನಡುವೆ ಇದ್ದುದು ಪ್ಲಸ್ ಪಾಯಿಂಟ್ ಅಂತಲೇ ಭಾವಿಸಬೇಕು. ಅಜಾತಶತ್ರು ಅನ್ನುವ ಪದವು ಅವರಿಗೆ ಅಕ್ಷರಶಃ ಅಪ್ಲಿಕೇಬಲ್ ಆಗುವ ಪದ. ನೋಡಿದೊಡನೆ ಎಂಥವರಿಗೂ ಅವರ ಬಗ್ಗೆ ಸಹೃದಯ ಪ್ರೀತಿ, ಅಪರೂಪದ ಅನುಭೂತಿ ಹುಟ್ಟಿ ಬಿಡಬೇಕು. ಅಂತಹದ್ದೊಂದು ಕಾಲಧರ್ಮದ ಮತ್ತು ಸ್ಮಾರ್ಟ್ ವ್ಯಕ್ತಿತ್ವದ ಸಮ್ಮೋಹಕ ಪ್ರಸ್ತುತತೆ ಅವರದಾಗಿತ್ತು.
ಇದು ಹೊಗಳಿಕೆ ಅಲ್ಲ, ಅವರ ಮೇಲಿನ ಗುರುಭಕ್ತಿಯಿಂದ ನಾನು ಈ ಮಾತುಗಳನ್ನು ಹೇಳುತ್ತಿಲ್ಲ. ಅಷ್ಟಕ್ಕೂ ನಾನೇನು ಅವರ ಶಿಷ್ಯನಲ್ಲ. ತರಗತಿಗಳಲ್ಲಿ ಕುಂತು ಅವರ ಪಾಠ, ಪ್ರವಚನಗಳನ್ನು ಕೇಳಿದ ವಿದ್ಯಾರ್ಥಿಯಂತೂ ಅಲ್ಲವೇ ಅಲ್ಲ. ಪರಂತು ಮೂರ್ನಾಲ್ಕು ದಶಕಗಳ ಕಾಲ ಅವರ ಸಾಂಸ್ಕೃತಿಕ ಒಡನಾಟದಲ್ಲಿ ಇದೆಲ್ಲ ಕಂಡು ಕೊಂಡಿದ್ದೇನೆ. ಹಾಗೆ ನೋಡಿದರೆ ನಮ್ಮ ಸ್ನೇಹಶೀಲ ತಿತೀಕ್ಷೆಯೆದುರು ಎಲ್ಲಾ ನಿರ್ಲಿಪ್ತತೆಗಳು ಸೋತು ಹೋಗುತ್ತವೆ. ಯಾವತ್ತೂ ಮಣಿ ಯನೆಣಿಸಿ ದಿನಗಳೆದವರಲ್ಲ. ನಂಬಲರಿತ ನಿಜಕ್ಷಣದ ನೆನಪುಳ್ಳವರು. ಅನಗತ್ಯ ಪದಗಳ ಬಳಕೆಗಳಿಲ್ಲದ ಅವರ ಹತ್ತು ಹಲವು ಅಚ್ಚುಕಟ್ಟಾದ ಮತ್ತು ಕಾಲೋಚಿತ ಭಾಷಣಗಳನ್ನು ಕೇಳಿದ್ದೇನೆ. ಅಂತೆಯೇ ಅವರು ಪಥ್ಯದ ಮಾತು ಪ್ರೀತಿಗಳ ಸಭಾನುರಾಗಿ ಭಾಷಣಕಾರರಾಗಿದ್ದರು.
ಕೆಲವು ಕಾಲ ದಾವಣಗೆರೆ ಪ್ರತಿಮಾ ಸಭಾ ಮುನ್ನಡೆಸಿದ ಮತ್ತು ಅದರ ಸಮೃದ್ಧಿಗೆ ಈಶ್ವರಪ್ಪ ಮಾಸ್ತರರ ಮಹತ್ತರ ಶ್ರಮವಿತ್ತು. ರಂಗಭೂಮಿ ಮತ್ತು ಜಾನಪದ ಎರಡರಲ್ಲೂ ಅವರದು ತಲಸ್ಪರ್ಶಿ ಅಧ್ಯಯನ. ಲಂಕೇಶರ ಸಂಕ್ರಾಂತಿಯಲ್ಲಿ ಚೆಂದದ ಅಭಿನಯ. ಬಂಗಾರ ಕೂದಲ ಜೈರಾಣಿ ಸೇರಿದಂತೆ ಜಾನಪದ ಮತ್ತು ರಂಗಭೂಮಿ ಕುರಿತು ಕೆಲವು ಕೃತಿಗಳ ನಿರ್ಮಾತೃ.
ಒಂದು ಕಾಲಕ್ಕೆ ದಾವಣಗೇರಿಯ
ವಿದ್ಯಾನಗರ ಎಂದ ಕೂಡಲೇ ಸಂಸ್ಕೃತಿ ಚಿಂತಕರು, ಕಾಲೇಜು ಮಾಸ್ತರರು ಮಾತ್ರವಲ್ಲ, ಪ್ರಿನ್ಸಿಪಾಲರುಗಳು, ಸರಸ್ವತಿ ಪುತ್ರರ ಓಣಿಯೆಂಬ ಹೆಸರಿನ ಖ್ಯಾತಿ. ಪ್ರೊ. ಬಿ. ಜಿ. ನಾಗರಾಜ್, ಪ್ರೊ. ಎಸ್. ಎಚ್. ಪಟೇಲ್, ಪ್ರೊ. ಬಿ. ವಿ. ವೀರಭದ್ರಪ್ಪ. ಪ್ರೊ. ಹಾಲಪ್ಪ ಹೀಗೆ ಅದೇ ಸಾಲಿನ ಸುಶೀಲ ಸಂಪನ್ನತೆಯ ಪ್ರಾಚಾರ್ಯರಾಗಿದ್ದವರು ಎಂ. ಜಿ. ಈಶ್ವರಪ್ಪ ಅವರು. ವಿದ್ಯಾನಗರದ ಅವರ ಮನೆಯ ಹೆಸರು ಮುಗುಳು ಮಲ್ಲಿಗೆ. ಅದು ಅವರ ಮೃದು ಮುಗಳುನಗೆಯಷ್ಟೇ ಮಧುರವಾದ ಹಸಿರು ತುಂಬಿದ ಹೆಸರು.
ಜಾನಪದ ಸಾಹಿತ್ಯದ ಮೇರು ಪರ್ವತವೇ ಆಗಿದ್ದ ಪ್ರೊ. ಜಿ. ಶಂ. ಪರಮಶಿವಯ್ಯನವರ ಪರಮ ಶಿಷ್ಯನಾಗಿ ಈಶ್ವರಪ್ಪ ಕೃಷಿ ಜಾನಪದದಲ್ಲಿ ಡಾಕ್ಟರೇಟ್ ಪದವಿ ಪಡೆದದ್ದು. ಅವರು ಮಾತಿಗೆ ನಿಂತರೆ ಹರಿಗಡಿಯದ ರುಚಿ ರುಚಿಯಾದ ವಾಙ್ಮಕ ಶಕ್ತಿಯ ಮಾತುಗಾರ. ಸಾಮಾಜಿಕ ಚಿಂತನೆಯ ಅವರ ಮಾತುಗಳಿಗೆ ಸಮನ್ವಯತೆಯ ಸಮತೂಕ. ಅವುಗಳಿಗೆ ಉದ್ದೇಶಿತ ಮತ್ತು ವಿನಾಕಾರಣದ ಒಣ ಸೈದ್ಧಾಂತಿಕ ನಿಲುವುಗಳ ಲೇಪವಿರದ ನುಡಿ ನಿಪುಣರಾಗಿದ್ದರು. ಎಂತಹದ್ದೇ ಗಹನವಾದ ಸಮಸ್ಯೆಗಳಿರಲಿ, ಸಂದರ್ಭಗಳಿರಲಿ ಅತ್ಯಂತ ನಯ ನಾಜೂಕಾಗಿ ಬೆಣ್ಣೆಯೊಳಗಿನ ಕೂದಲು ಎಳೆದು ತೆಗೆದಂತೆ ಅಗದಿ ಸುಲಲಿತವಾಗಿ ಮತ್ತು ಸಲೀಸಾಗಿ ತೆಗೆಯುವಲ್ಲಿ ಅವರು ಮಹಾ ಶ್ಯಾಣೇರು. ಅದನ್ನು ಸಾಮಯಿಕ ಪ್ರಜ್ಞೆಯ ಸಾಂಸ್ಕೃತಿಕ ಸಿದ್ದಿಯೆಂದೇ ತಿಳಿಯಬೇಕು. ಗುಡ್ಡ ಅಗೆದು, ಗಾಳಿಗೆ ಗುದ್ದಿ, ಬೆವರು ಖರ್ಚುಮಾಡಿ ವೃಥಾ ಹೈರಾಣಾಗುವ ಜಾಯಮಾನ ಅವರದಲ್ಲ.
ಈಶ್ವರಪ್ಪನವರ ಮಡದಿ ಬಸಮ್ಮ ವಿಶ್ರಾಂತ ಪ್ರಾಧ್ಯಾಪಕರು. ಇಬ್ಬರೂ ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆಯ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದವರು. ನೂರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರು. ಸದ್ವಿವೇಕ ಮತ್ತು ಸಾತ್ವಿಕತೆಗೆ ಅಕ್ಷರಶಃ ಹೇಳಿ ಮಾಡಿಸಿದಂಥ ಬಾಳಸಾಂಗತ್ಯ ಅವರದು. ಆರತಿಗೊಬ್ಬ ಮಗಳು ಪತ್ರಲೇಖ, ಕೀರುತಿಗೊಬ್ಬ ಮಗ ಪೃಥುವೈನ್ಯ. ಇಬ್ಬರು ಮಕ್ಕಳ ಚಿಕ್ಕ ಮತ್ತು ಚೊಕ್ಕದಾದ ಕುಟುಂಬ ಅವರದು. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಮಗನಿಗೆ ಉತ್ತರಾದಿ ಸಂಗೀತದಲ್ಲಿ ಅಪಾರ ಆಸ್ಥೆ. ಅಮೆರಿಕೆಯ ನಿವಾಸಿಯಾಗಿರುವ ಮಗಳ ಬಳಿ ಹತ್ತಾರು ತಿಂಗಳು ಕಳೆದು ಬಂದವರು ಈಶ್ವರಪ್ಪ. ಅವರ ಅಮೆರಿಕೆಯ ಅನುಭವಗಳನ್ನು ದಾಖಲಿಸಿದ್ದರೆ ಸುಂದರ ಅನುಭವ ಕಥನ ಕನ್ನಡ ಸಾಹಿತ್ಯಕ್ಕೆ ದೊರಕುತ್ತಿತ್ತು. ಅದು ಶಬ್ಧಲಂಕಾರರಹಿತ ಸರಳ ಸುಂದರ ಪ್ರವಾಸ ಕಥನವೂ ಆಗಿರುತ್ತಿತ್ತು. ದಾವಣಗೆರೆ ಸೀಮೆಯ
ಬಹುಪಾಲು ಸಮಾಜಗಳ ಎಲ್ಲರ ಸಹೃದಯ ಪ್ರೀತಿ, ಗೌರವಗಳಿಗೆ ಭಾಜನರಾಗಿದ್ದ ಅವರಿಗೆ ಕರ್ನಾಟಕ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು ಸ್ತುತ್ಯಾರ್ಹ.
– ಮಲ್ಲಿಕಾರ್ಜುನ ಕಡಕೋಳ, 9341010712