ನಿಸ್ವಾರ್ಥ, ಧೈರ್ಯ, ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು

ನಿಸ್ವಾರ್ಥ, ಧೈರ್ಯ, ನಾಯಕತ್ವದ  ಗುಣಗಳನ್ನು ಮೈಗೂಡಿಸಿಕೊಳ್ಳಬೇಕು

ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್

ದಾವಣಗೆರೆ, ಜೂ. 2- ಪ್ರತಿಯೊಬ್ಬರೂ ನಿಸ್ವಾರ್ಥ, ಧೈರ್ಯ ಮತ್ತು ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ನಾಯಕರಾಗಿ ಬೆಳೆಯಲು ಸಾಧ್ಯವಿದೆ ಎಂದು ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕರೂ, ನಿರ್ದೇಶಕರೂ ಆದ ಜಿ.ಬಿ. ವಿನಯ್ ಕುಮಾರ್ ಪ್ರತಿಪಾದಿಸಿದರು. 

ನಗರದ ಕುವೆಂಪು ಕನ್ನಡ ಭವನದಲ್ಲಿ ವಿನಯ ಮಾರ್ಗ ಟ್ರಸ್ಟ್, ಸ್ವಾಭಿಮಾನಿ ಬಳಗ ಹಾಗೂ ಇನ್‌ಸೈಟ್ಸ್  ಐಎಎಸ್ ಸಂಸ್ಥೆ ಸಹಯೋಗದಲ್ಲಿ ಇಂದು ಹಮ್ಮಿಕೊಂಡಿದ್ದ ಒಂದು ದಿನದ `ನಾಯಕತ್ವ ತರಬೇತಿ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭವಿಷ್ಯದ ಕನಸನ್ನು ಹೊತ್ತ ಇಂದಿನ ಯುವ ಜನಾಂಗ ನಾಯಕತ್ವದ ಗುಣಗಳನ್ನು ಮೈಗೂಡಿಸಿ ಕೊಂಡು, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ದಿಟ್ಟ ಹೆಜ್ಜೆಯನ್ನಿಡುವ ಬುದ್ದಿವಂತಿಕೆ ಹೊಂದಿರಬೇಕೆಂದು ಸಲಹೆ ನೀಡಿದರು.

ಗ್ರಾಮೀಣ ಮೂಲಭೂತ ಸಮಸ್ಯೆಗಳತ್ತ ಗಮನಹರಿಸಿ, ಪರಿಹರಿಸುವ ನಿಟ್ಟಿನಲ್ಲಿ ನಾಯಕರಾಗುವ ಯುವ ಜನರು ಕಂಕಣಬದ್ಧರಾಗಬೇಕು. ಆಸಕ್ತರಿಗೆ ಧ್ವನಿಯಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದರು.

ಚುನಾವಣೆಯನ್ನು ಸಮರ್ಥವಾಗಿ ಎದುರಿಸಬಲ್ಲೆ ಎಂದು ರಾಜಕೀಯ ರಂಗ ಪ್ರವೇಶ ಮಾಡಿದೆ. ಆದರೆ ಕಣಕ್ಕಿಳಿದಾಗಲೇ ಅದರ ಆಳ, ಅಗಲ ಅರ್ಥವಾಗಿದ್ದು. ಮತದಾನದ ಹಿಂದಿನ `ಕತ್ತಲ ರಾತ್ರಿ’ ಎಂಬ ಅನಿಷ್ಟ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಭ್ರಷ್ಟ ರಾಜಕಾರಣಿಗಳು ಸೃಷ್ಟಿರುವ ಈ ಪದ್ಧತಿ ನಿರ್ಮೂಲನೆಯಾಗದ ಹೊರತು ಸಾಮಾನ್ಯರು ರಾಜಕೀಯವಾಗಿ ಬೆಳೆಯಲು ಅಸಾಧ್ಯ ಎಂದು ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯೂ ಆಗಿದ್ದ ಅವರು ಚುನಾವಣೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.

ರಾಷ್ಟ್ರೀಯ ಪಕ್ಷಗಳ ಅಕ್ರಮವನ್ನು ನೋಡಿಯೂ ಸಹ ಮಾಧ್ಯಮಗಳು ಬಿತ್ತರಿಸದೇ ಮೌನವಹಿಸಿರುವುದು ನೋವಿನ ಸಂಗತಿ. ಮಾಧ್ಯಮಗಳು ಸಹ ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗುತ್ತಿವೆ ಎಂದರು.

ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪ್ರಸಾದ್ ಅವರು ಸೈಬರ್ ಅಪರಾಧಗಳು, ಪರಿಹಾರ ಕುರಿತು ಮಾತನಾಡಿದರು. ಬಾಗಲಕೋಟೆಯ ಯಲ್ಲಪ್ಪ ಹೆಗಡೆ ಪ್ರಸ್ತುತ ರಾಜಯಕೀಯ ಸ್ಥಿತಿಗತಿ ಕುರಿತು ವಿಷಯ ಪ್ರಸ್ತಾಪಿಸಿದರು. ಮಾಹಿತಿ ಹಕ್ಕು ಕುರಿತು ಜೆ.ಎಂ. ರಾಜಶೇಖರ್ ಮಾತನಾಡಿದರು. ನ್ಯಾಯಾಲಯದ ಪ್ರಕ್ರಿಯೆಗಳು ಹಾಗೂ ಮಹಿಳಾ ಸಬಲೀಕರಣ ಕುರಿತು ಸಿ.ಪಿ. ಅನಿತಾ ವಿಷಯ ಮಂಡಿಸಿದರು. ಮುದ್ರಣ ಮತ್ತು ದೃಶ್ಯ ಮಾಧ್ಯಮದ ಕುರಿತು ಮಾಲತೇಶ ಅರಸ್ ಮಾತನಾಡಿದರು.

ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ಅಂಜಿನಪ್ಪ ಲೋಕಿಕೆರೆ, ಶರಣಪ್ಪ ಶ್ಯಾಗಲೆ, ಹೆಗ್ಗೆರೆ ರಂಗಪ್ಪ, ಪುರಂದರ್ ಲೋಕಿಕೆರೆ, ಶೌಕತ್ ಜಾಗೃತಿ ಗೀತೆಗಳನ್ನಾಡಿದರು.

ನಿವೃತ್ತ ಶಿಕ್ಷಕ ವಿರೂಪಾಕ್ಷಪ್ಪ ಪಂಡಿತ್ ಸಂವಿಧಾನ ಪೀಠಕೆ ಬೋಧಿಸಿದರು. ಸ್ವಾಭಿಮಾನಿ ಬಳಗದ ಸಂಚಾಲಕ ರಾಜು ಮೌರ್ಯ, ಎಸ್.ಶರತ್ ಕುಮಾರ್, ರಂಗಸ್ವಾಮಿ, ಕರಿಬಸಪ್ಪ ಮಾದನಬಾವಿ, ಗೀತಾ ಮುರುಗೇಶ್, ರಂಗನಾಥ್, ಗಿರೀಶ್‌ ಬೂದಿಹಾಳ್, ಅನಂತ್, ಅಯ್ಯಣ್ಣ ಮತ್ತಿತರರಿದ್ದರು. 

error: Content is protected !!