ಮಕ್ಕಳನ್ನು ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ರಕ್ಷಿಸಿ

ಮಕ್ಕಳನ್ನು ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ರಕ್ಷಿಸಿ

ತ್ತೀಚೆಗೆ ಯೂಟ್ಯೂಬ್‍ನಲ್ಲಿ ಒಂದು ವಿಡಿಯೋ ನನ್ನ ಗಮನ ಸೆಳೆಯಿತು.  ಆ ವೀಡಿಯೋದಲ್ಲಿ ಚಿಕ್ಕ ಬಾಲಕ ತನ್ನ ಮನಮೆಚ್ಚಿದ ಸಿನಿಮಾ ನಾಯಕರು ವಿಮಲ್ ತಿನ್ನುವ ಬಗೆಯನ್ನು ನೋಡಿ ತಾನು ತಿನ್ನಬೇಕೆಂದು ಅಂಗಡಿಗೆ ಹೋಗಿ ಕೊಂಡು ತರುತ್ತಾನೆ. ಅದನ್ನು ತಿಂದ ಬಳಿಕ ಆ ಬಾಲಕ ಅಸ್ವಸ್ಥನಾಗುತ್ತಾನೆ. ಇಂತಹ ಯೂಟ್ಯೂಬ್ ವಿಡಿಯೋಗಳು ಅದೆಷ್ಟು ಮುಗ್ದ ಮನಸ್ಸುಗಳನ್ನು ತಂಬಾಕಿನ ದುಶ್ಚಟಕ್ಕೆ ಗೀಳು ಮಾಡಿವೆಯೋ ಗೊತ್ತಿಲ್ಲ?………

ತಂಬಾಕು ಮನುಕುಲಕ್ಕೆ ಹೊಸತೇನಲ್ಲ. ಇದರ ಪರಿಚಯ ಕ್ರಿಸ್ತ ಪೂರ್ವ 600 ವರ್ಷಗಳ ಹಳೆಯದು. ತಂಬಾಕನ್ನು ಮೊಟ್ಟಮೊದಲ ಬಾರಿಗೆ ಕ್ರಿಸ್ಟೋಫರ್ ಕೊಲಂಬಸ್ ಯುರೋಪ್ ದೇಶಗಳಿಗೆ ಪರಿಚಯಿಸಿದರೆ, ಪೋರ್ಚುಗೀಸರು ಭಾರತಕ್ಕೆ ತಿಳಿಸಿದರು. ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಚರ್ಚೆಗಳು ನೂರಾರು ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು ಹಾಗು ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ ಜಹಾಂಗೀರ್‌ ಹದಿನಾರನೇ ಶತಮಾನದಲ್ಲಿಯೇ ಇದರ ಬಳಕೆಯನ್ನು ಭಾರತದಲ್ಲಿ ನಿಷೇಧಿಸಿದ್ದನು. ಸಿಖ್ಖರ ಗುರುಗಳಾದ ಗುರುಗೋವಿಂದ್‍ಸಿಂಗ್‍ರವರು ಕೂಡ ತಂಬಾಕು ಬಳಕೆಯನ್ನು ಸಿಖ್ಖ್ ಸಮುದಾಯದಲ್ಲಿ ನಿಷೇಧಿಸಿದ್ದರು. ಇತಿಹಾಸದಲ್ಲಿ ತಂಬಾಕು ನಿಷೇಧದ ಬಗ್ಗೆ ಹಲವಾರು ಉಲ್ಲೇಖಗಳಿದ್ದರೂ ಇಂದಿಗೂ ತಂಬಾಕು ಭೋಗದ ವಸ್ತುವಾಗಿ ಅಗ್ರ ಸ್ಥಾನ ಪಡೆದುಕೊಂಡಿದೆ.

ನಮ್ಮ ದೇಶದಲ್ಲಿ ತಂಬಾಕು ಧೂಮಯುಕ್ತ (ಸಿಗರೇಟ್, ಬೀಡಿ) ಮತ್ತು ಧೂಮರಹಿತ (ಗುಟ್ಕಾ, ಪಾನ್ ಮಸಾಲಾ) ರೂಪದಲ್ಲಿ ಬಳಕೆಯಾಗುತ್ತಿದೆ. ನಗರಗಳಲ್ಲಿ  ಸಿಗರೇಟ್ ಸೇವನೆ ಹೆಚ್ಚಾಗಿ ಕಂಡು ಬಂದರೆ, ಗ್ರಾಮೀಣ ಪ್ರದೇಶಗಳಲ್ಲಿ ಗುಟ್ಕಾ ಅತಿ ಹೆಚ್ಚು ಜನಪ್ರಿಯವಾಗಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ಪ್ರತಿ ವರ್ಷ ಎರಡು ಮಿಲಿಯನ್ ಹೊಸ ವ್ಯಸನಿಗಳು ಸೇರ್ಪಡೆಯಾಗುತ್ತಿದ್ದಾರೆ, ಯುವಪೀಳಿಗೆ ಇಲೆಕ್ಟ್ರಾನಿಕ್ ಸಿಗರೇಟ್‍ನತ್ತ ಆಕರ್ಷಿತವಾಗುತ್ತಿದೆ.  ದಿಗ್ಭ್ರಮೆಗೊಳಿಸುವ ಇಂತಹ ವರದಿಗಳಿಗೆ ಮೂಲ ಕಾರಣಗಳು ಕುಟುಂಬಗಳಲ್ಲಿ ತಂಬಾಕಿನ ಬಳಕೆ, ಸ್ನೇಹಿತರ ಪ್ರಭಾವ, ಕುತೂಹಲ, ನೆಚ್ಚಿನ ಹೀರೋಗಳ ಅನುಕರಣೆ, ಸುಲಭವಾಗಿ ಲಭ್ಯವಿರುವುದು, ಭಾವನಾತ್ಮಕ ಹಾಗು ಮಾನಸಿಕ ಸಮಸ್ಯೆಗಳು ಇತ್ಯಾದಿ. ನಮ್ಮ ದೇಶದ ಮಹಾನಗರಗಳಲ್ಲಿ ಕಾಣಸಿಗುವ ಬೀದಿ ಮಕ್ಕಳ ಅಂಧಕಾರದ ರಸ್ತೆ ಬಳಿಯ ಜೀವನ, ವಯಸ್ಸಿಗೆ ಮೀರಿದ ಕೆಲಸ, ನಿರಂತರ ಹಸಿವು, ಅಸಹಾಯಕತೆ ತಂಬಾಕಿನ ದುಶ್ಚಟಕ್ಕೆ ಬಲಿಯಾಗಿಸುತ್ತಿವೆ. ಪ್ರತಿ ಬಾರಿ ತಂಬಾಕು ಉಪಯೋಗಿಸಿದಾಗ ಇದರಲ್ಲಿರುವ ನಿಕೋಟಿನ್ ಅಂಶವು ಮೆದುಳನ್ನು ತಲುಪಿ ಆಹ್ಲಾದವನ್ನು ನೀಡುವ ಹಾರ್ಮೋನ್‍ಗಳನ್ನು ಉತ್ಪತ್ತಿ ಮಾಡಿ, ಮನಸ್ಸನ್ನು ಉಲ್ಲಾಸಗೊಳಿಸುವುದರ ಜೊತೆಗೆ ಹಸಿವು, ನಿದ್ರೆಯನ್ನು ಸಹ ನಿಯಂತ್ರಿಸುವುದರಲ್ಲಿ ಸಹಾಯ ಮಾಡುತ್ತವೆ. ಈ ಕಾರಣಗಳಿಂದಾಗಿ ಇಂತಹ ಮಕ್ಕಳು ಗುಟ್ಕಾವನ್ನು ಮನೋರಂಜನೆ ವಸ್ತುವಾಗಿ ಉಪಯೋಗಿಸುತ್ತಿರುವುದು ಶೋಚನೀಯ ಸಂಗತಿ.

ತಂಬಾಕು ಉತ್ಪಾದನಾ ಕಂಪನಿಗಳು ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರಂಗಳ ಮುಖಾಂತರ ಮಕ್ಕಳು ಮತ್ತು ಹದಿಹರೆಯದವರನ್ನು ತಂಬಾಕಿನತ್ತ ಸೆಳೆಯಲು ಪ್ರಯತ್ನಿಸುತ್ತಿವೆ. ತಂಬಾಕು ಉದ್ದಿಮೆದಾರರು ಲಾಭ ಗಳಿಸುವ ದುರಾಸೆಯಿಂದ ಆಕರ್ಷಕವಾದ ತಂಬಾಕು ಉತ್ಪನ್ನಗಳನ್ನು ಕೈಗೆಟಕುವ ಬೆಲೆಗೆ ಸುಲಭವಾಗಿ ದೊರೆಯುವತ್ತ ಲಕ್ಷ ಬೀರಿದ್ದಾರೆ. ಆದ್ದರಿಂದ ವಿಶ್ವ ತಂಬಾಕು ರಹಿತ ದಿನವಾದ ಇಂದು ವಿಶ್ವ ಸಂಸ್ಥೆಯು “ಮಕ್ಕಳನ್ನು ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ರಕ್ಷಿಸಿ” ಎನ್ನುವ ಘೋಷ ವಾಕ್ಯದೊಂದಿಗೆ ವಿಶ್ವಸಂಸ್ಥೆಯ ಸದಸ್ಯತ್ವ ದೇಶಗಳಿಗೆ ಪ್ರಸ್ತುತ ಮತ್ತು ಮುಂಬರುವ ಪೀಳಿಗೆಯನ್ನು ತಂಬಾಕಿನ ದುಶ್ಚಟಕ್ಕೆ ಬಲಿಯಾಗದಂತೆ ಜಾಗರೂಕರಾಗಿರಲು ಕರೆ ಕೊಟ್ಟಿದೆ.


– ಡಾ|| ಉಷಾ.ಜಿ.ವಿ., ಡಾ|| ಸಂಗೀತ್ ಎಸ್., ಪ್ರಾಧ್ಯಾಪಕರು, ಬಾಪೂಜಿ ದಂತ ವ್ಯೆದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ದಾವಣಗೆರೆ.

error: Content is protected !!