ತ್ಯಜಿಸಿ ತಂಬಾಕು – ಉಜ್ವಲವಾಗುವುದು ಬದುಕು

ತ್ಯಜಿಸಿ ತಂಬಾಕು – ಉಜ್ವಲವಾಗುವುದು ಬದುಕು

ವಿಶ್ವ ಆರೋಗ್ಯ ಸಂಸ್ಥೆಯು  ಪ್ರತೀ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವಾಗಿ ಆಚರಿಸುತ್ತಿದೆ. ತಂಬಾಕಿನಿಂದ ಬರುವ ಅನಾರೋಗ್ಯವನ್ನು ತಪ್ಪಿಸಲು , ಜನರಲ್ಲಿ ಈ ಕುರಿತು ಜಾಗೃತಿ    ಮೂಡಿಸಲು ಈ ದಿನವನ್ನು ಆಚರಿಸಲಾಗುವುದು.

“ವಿಶ್ವ ಆರೋಗ್ಯ ಸಂಸ್ಥೆ”ಯು ಸೂಚಿಸಿರುವ  2021 ನೇ ವರ್ಷದ  “ತೊರೆಯಲು ಬದ್ದರಾಗಿ”  (Commit to quit ) ಎಂಬ ಘೋಷಣೆಯನ್ನು , ಭಾರತೀಯ ದಂತ ವೈದ್ಯಕೀಯ ಸಂಘವು ” ನಾನು ಮಾಡಬಹುದು, ನಾನು ಮಾಡುತ್ತೇನೆ, ನಾನು ಮಾಡಿಯೇ ತೀರುತ್ತೇನೆ” –  ( I can, I will, I must) ಎಂಬ ಘೋಷಣೆಯನ್ನಾಗಿ  ಅಳವಡಿಸಿಕೊಂಡಿದೆ.

ಕೆಡುಕಿಗೆ ಆಕರ್ಷಣೆ ಹೆಚ್ಚು. ಬೀಡಿ, ಸಿಗರೇಟು ಸೇರಿದಂತೆ ತಂಬಾಕನ್ನು ಬೇರೆ ಬೇರೆ ರೂಪಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ಸಾರ್ವಜನಿಕ ಆರೋಗ್ಯದ ದೊಡ್ಡ ಬೆದರಿಕೆಗಳಲ್ಲಿ ತಂಬಾಕು ಸೇವನೆಯೂ ಒಂದಾಗಿದೆ. ಇದು ಕೇವಲ ಜೀವನ ನಷ್ಟವಷ್ಟೇ ಅಲ್ಲ, ಆರ್ಥಿಕ ನಷ್ಟವನ್ನೂ ತರುತ್ತದೆ ಎಂದು ಪದೇ ಪದೇ ಜಾಗೃತಿ ಮೂಡಿಸಿದರೂ ಧೂಮಪಾನ  ಮಾಡುವವರ ಸಂಖ್ಯೆಯಲ್ಲೇನು ಕಡಿಮೆಯಾಗಿಲ್ಲವೆಂಬುದು ವಿಷಾದದ ಸಂಗತಿ.

ತಂಬಾಕಿನಲ್ಲಿ ಸೈನೈಡ್, ಬೆಂಜೈನ್, ಫಾರ್ಮಾಲ್ಡೀಹೈಡ್, ಮೆಥನಾಲ್, ಆಸಿಟಿಲಿನ್, ಅಮೋನಿಯಮ್ ಎಂಬ ರಾಸಾಯನಿಕಗಳಿರುತ್ತವೆ. ಅವುಗಳಲ್ಲಿರುವ ಟಾರ್, ವಿಷಕಾರಕ ಅನಿಲಗಳು ದೇಹವನ್ನು ಸೇರಿ ನಮ್ಮ ದೇಹದಲ್ಲಿ ಸಂಗ್ರಹವಾಗುತ್ತಾ ಹೋಗುತ್ತದೆ. ತಂಬಾಕು ಸೇವನೆಯಿಂದ ಕೇವಲ ಗಂಟಲು, ಶ್ವಾಸಕೋಶ ಮಾತ್ರವಲ್ಲದೆ ಅಡಿಯಿಂದ- ಮುಡಿಯವರೆಗೆ ನಮ್ಮ ದೇಹದ ಪ್ರತಿಯೊಂದು ಜೀವಕೋಶದ ಮೇಲೆ ಅದು ಮಾರಕ ಪರಿಣಾಮವನ್ನುಂಟು ಮಾಡುತ್ತದೆ.

ತಂಬಾಕು ಸೇವನೆಯು ಇಂದು ವಿಶ್ವದಾದ್ಯಂತ ವರ್ಷಕ್ಕೆ 8 ದಶಲಕ್ಷಕ್ಕೂ ಹೆಚ್ಚು ಜನರನ್ನು ಕೊಲ್ಲುತ್ತಿದೆ. ತಂಬಾಕಿನ ಬಳಕೆ ಎರಡು ರೂಪಗಳಲ್ಲಿವೆ. ಹೊಗೆ ಸಹಿತ (ಸ್ಮೋಕ್), ಹೊಗೆರಹಿತ (ಸ್ಮೋಕ್ ಲೆಸ್). ಪ್ರತ್ಯಕ್ಷ ಧೂಮಪಾನ ಮಾಡುವವರಿಗಿಂತ ಪರೋಕ್ಷ ಧೂಮಪಾನಕ್ಕೆ ಬಲಿಯಾಗಿ 1.2 ದಶಲಕ್ಷ ಜನರು ಮರಣ ಹೊಂದುತ್ತಿದ್ದಾರೆ. ಭಾರತದಲ್ಲಿ ಸುಮಾರು 10 ಲಕ್ಷ ಜನರು ಬೀಡಿ, ಸಿಗರೇಟ್, ತಂಬಾಕಿನ ನೇರ ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಹಾಗು ಇತರೆ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಇದರ ಪ್ರಮಾಣ ಸರಿಸುಮಾರು 8 ಸಾವಿರ. ತಂಬಾಕು ಸೇವನೆಯಿಂದ ಪ್ರತಿದಿನ 2700 ಮಂದಿ ಸಾವನ್ನಪ್ಪುತ್ತಿದ್ದಾರೆ. 

ತಂಬಾಕು ಸೇವನೆಯು, ಹೇಗೆ ಅಮೂಲ್ಯ ಮಾನವ ಸಂಪತ್ತನ್ನು ನುಂಗಿ ನೊಣೆಯುತ್ತದೆ ಎಂಬುದನ್ನು ತೋರಿಸುತ್ತದೆ. ಚಟಕ್ಕೆ ಜೋತು ಬಿದ್ದು ಬಹು ಬೇಗ ಸಾವು ತಂದುಕೊಳ್ಳುವವರು ತಮ್ಮ ಕುಟುಂಬಗಳನ್ನು ಅನಾಥರನ್ನಾಗಿಸುತ್ತಾರೆ ಹಾಗು ಚಿಕಿತ್ಸೆಗೆಂದು ಸಾವಿರಾರು ರೂಪಾಯಿಗಳನ್ನು ವ್ಯಯ ಮಾಡುವುದರ ಮೂಲಕ ಕುಟುಂಬವನ್ನು ಚೇತರಿಸಿಕೊಳ್ಳಲಾರದ ಆರ್ಥಿಕ ಸಂಕಷ್ಟಕ್ಕೆ ದೂಡಿರುತ್ತಾರೆ. ಅಚ್ಚರಿಯ ವಿಷಯವೆಂದರೆ ಪ್ರತೀ ವರ್ಷ ಧೂಮಪಾನದ ಚಟಕ್ಕೆ ಬಹು ಬೇಗ ಒಲಿಯುವವರ ವಯಸ್ಸಿನಲ್ಲಿ ತೀವ್ರ ಇಳಿತವಾಗುತ್ತಿದೆ. ಯುವಕ- ಯುವತಿಯರು ಸಿಗರೇಟ್ ಸೇದುವುದು ಸ್ಟೈಲ್ ಎಂದು ಭಾವಿಸಿ, ಅವುಗಳಿಗೆ ದಾಸರಾಗುತ್ತಿದ್ದಾರೆ. ತಮ್ಮ ಆರೋಗ್ಯದ ಜೊತೆಗೆ ಇನ್ನಿತರರ ಆರೋಗ್ಯವನ್ನೂ ಹಾಳು ಮಾಡುತ್ತಿದ್ದಾರೆ. ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ (ನ್ಯಾಷನಲ್ ಕ್ಯಾನ್ಸರ್ ರಿಜಿಸ್ಟ್ರಿ) ಪ್ರಕಾರ ದೇಶದಲ್ಲಿ ಶೇಕಡ 60 ರಷ್ಟು ಮಂದಿಯ ಕ್ಯಾನ್ಸರ್ ಅನ್ನು ಸುಲಭವಾಗಿ ತಡೆಯಬಹುದು.  

ತಂಬಾಕಿನಿಂದಾಗುವ / ಧೂಮಪಾನದ ದುಷ್ಫರಿಣಾಮಗಳು

ತಂಬಾಕಿನ ಬಳಕೆಯಿಂದ ತಲೆಯಿಂದ ಪಾದದವರೆಗೆ ಯಾವ ಬಗೆಯ ಅಪಾಯಗಳು ಕಂಡುಬರುತ್ತವೆಯೆಂದು ವಿಂಗಡಿಸಿ, ಅರ್ಥಮಾಡಿಕೊಳ್ಳಬಹುದು.

  • ಬೀಡಿ , ಸಿಗರೇಟ್ ನ ಹೊಗೆಯಲ್ಲಿ ಕ್ಯಾನ್ಸರ್ ರೋಗಕ್ಕೆ ಮೂಲ ಕಾರಣವಾದ ವಿಷವಸ್ತುವಿರುತ್ತದೆ. ಆದ್ದರಿಂದ ಧೂಮಪಾನಿಗಳಿಗೆ ಪ್ರಮುಖವಾಗಿ ಗಂಟಲು ಕ್ಯಾನ್ಸರ್ ಸಂಭವಿಸುವ ಅವಕಾಶ ಹೆಚ್ಚಾಗಿರುತ್ತದೆ.
  • ಧೂಮಪಾನ ಮಾಡುವುದರಿಂದ ದೇಹಕ್ಕೆ ಆಮ್ಲಜನಕದ ಕೊರತೆಯುಂಟಾಗಿ ಮೆದುಳಿಗೆ ಹಾನಿ ತಟ್ಟುವುದು, ಹಸಿವು ಮುಚ್ಚಿಹೋಗುವುದು ಮತ್ತು ನಿದ್ರಾಹೀನತೆಯಿಂದ ಬಳಲುವರು
  • ಧೂಮಪಾನದ ಹೊಗೆ ಬಿಡುವುದರಿಂದ ಜ್ನಾನೇಂದ್ರಿಯಗಳ ಸಂವೇದನಾ ಶಕ್ತಿ ಕುಗ್ಗುವುದು
  • ತಂಬಾಕಿನಲ್ಲಿರುವ ನಿಕೋಟಿನ್ ಎಂಬ ವಿಷವಸ್ತುವಿನ ಪ್ರಭಾವದಿಂದ ಜಠರದಲ್ಲಿ ಆಮ್ಲದ ಉತ್ಪತ್ತಿ ಹೆಚ್ಚುವುದು. ಇದರ ದೆಸೆಯಿಂದ ಹೊಟ್ಟೆಹುಣ್ಣು  ಕಾಣಿಸಿಕೊಳ್ಳುವುದು.
  • ಧೂಮಪಾನ ಮಾಡುವುದರಿಂದ ರಕ್ತನಾಳಗಳು ಗಾತ್ರದಲ್ಲಿ ಕುಗ್ಗುತ್ತವೆ. ಇದರಿಂದ ವ್ಯಕ್ತಿಯು ಅಧಿಕ ರಕ್ತದ ಒತ್ತಡದಿಂದ ನರಳುವ ಸಂಭವವುಂಟು.
  • ರಕ್ತದ ಒತ್ತಡ ಹೆಚ್ಚುವುದರಿಂದ ಹೃದಯದ ಕಾರ್ಯ ಕಠಿಣವಾಗುವುದು. ಆದುದರಿಂದ ಎದೆನೋವು ಕಾಣಿಸಿಕೊಳ್ಳುವುದು. ಈ ಪರಿಸ್ಥಿತಿ ಮೇರೆ ಮೀರಿದಾಗ ರಕ್ತ ಪರಿಚಲನೆಗೆ ಅಡ್ಡಿಯುಂಟಾಗಿ ವ್ಯಕ್ತಿಯು ಮರಣ ಹೊಂದುವ ಸಾಧ್ಯತೆಯುಂಟು.
  • ಧೂಮಪಾನದಿಂದ ಉಂಟಾಗುವ ಪ್ರಮುಖ ಅಪಾಯಗಳೆಂದರೆ ಹೃದಯಾಘಾತಗಳು, ಪಾರ್ಶ್ವವಾಯು, ಕ್ರಾನಿಕ್ ಅಬ್ಸ್ಟ್ರಾಕ್ಟಿವ್ ಪಲ್ಮನರಿ ಡಿಸೀಸ್( ಶ್ವಾಸಕೋಶದ ತೊಂದರೆ), ಶ್ವಾಸಕೋಶದ ಕ್ಯಾನ್ಸರ್ ಮತ್ತು ಬಾಯಿಯ ಕ್ಯಾನ್ಸರ್ ಹಾಗು ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್.

ಜ್ಞಾನೇಂದ್ರೀಯಗಳ ಮೇಲಾಗುವ ದುಷ್ಫರಿಣಾಮಗಳು:

  • ತಲೆ/ಮೆದುಳು : ಸ್ಟ್ರೋಕ್ ಆಗುವುದು. ಮೆದುಳಿನಲ್ಲಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು. ಇದರಿಂದ ರಕ್ತ ಸಂಚಾರವಾಗದೇ ಮೆದುಳಿನ ಆ ಭಾಗಗಳು ನಿಷ್ಕ್ರಿಯಗೊಳ್ಳುವುದು. ಮೆದುಳಿನ ಆ ಭಾಗಗಳ ಹತೋಟಿಯಲ್ಲಿದ್ದ ಕ್ರಿಯೆ ಗಳು ನಿಷ್ಕ್ರಿಯಗೊಳ್ಳುವವು. ನೆನಪಿನ ಸಮಸ್ಯೆಗಳು ಉಲ್ಬಣಗೊಳ್ಳುವವು.
  • ಕಣ್ಣುಗಳು : ಕಣ್ಣಿನ ಪೊರೆ ಬರುವುದು. ಧೂಮಪಾನ ಮಾಡುವಾಗ ಹೊಗೆ ನೇರವಾಗಿ ಕಣ್ಣಿಗೆ ತೊಂದರೆಯುಂಟು ಮಾಡುವುದು ಮತ್ತು ಧೂಮಪಾನದಿಂದ ಅದರಲ್ಲಿನ ರಾಸಾಯನಿಕಗಳು ಶ್ವಾಸಕೋಶದ ರಕ್ತಕ್ಕೆ ಬೆರೆತು , ರಕ್ತದ ಮುಖಾಂತರ ಕಣ್ಣಿಗೆ ತಲುಪಿ ಹಾನಿಯುಂಟು ಮಾಡುವುದು.
  • ಮೂಗು : ಮೂಗಿನಲ್ಲಿರುವ ರೋಮಗಳು ಹೊರಗಿನ ವಾತಾವರಣದಲ್ಲಿನ ಕಲ್ಮಶ ಹಾಗು ರೋಗಾಣುಗಳಿಂದ ರಕ್ಷಣೆಗಿರುತ್ತದೆ. ಆದರೆ ಧೂಮಪಾನಿಗಳಲ್ಲಿ ಈ  ರೋಮಗಳು ಉಷ್ಣ ಹಾಗು ಹೊಗೆಯಿಂದ ಹಾಳಾಗುತ್ತವೆ ಮತ್ತು ಮೂಗಿನ ಒಳಗಿನ ಭಾಗ ಕೂಡ ಹಾಳಾಗುತ್ತದೆ. ಇದರಿಂದಾಗಿ ಅವರ ವಾಸನೆ ಗುರುತಿಸುವ ಸಾಮರ್ಥ್ಯ ಕ್ಷೀಣಿಸುತ್ತದೆ. ಇದಲ್ಲದೇ ಅವರು ಪದೇ ಪದೇ ವಿವಿಧ ರೀತಿಯ ರೋಗಾಣುಗಳಿಗೆ ತುತ್ತಾಗಿ ಶೀತ, ಸೈನಸೈಟೀಸ್ ತೊಂದರೆಗಳಿಂದ ಬಳಲುತ್ತಿರುತ್ತಾರೆ.
  • ಕಿವಿಗಳು : ಒಳಗಿನ ಕಿವಿಯ ರಕ್ತಸಂಚಾರ ಮಾಡುವ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ ವ್ಯಕ್ತಿಯ ಕಿವಿ ಕೇಳುವ ಸಾಮರ್ಥ್ಯ ಕಡಿಮೆಯಾಗುತ್ತದೆಯಲ್ಲದೇ, ವೇಗವಾಗಿ ಶ್ರವಣ ಸಾಮರ್ಥ್ಯ ಕಳೆದುಕೊಳ್ಳುತ್ತಾರೆ. ಧೂಮಪಾನ ಮಾಡುವ ವ್ಯಕ್ತಿಗಳಲ್ಲಿ ಮಧ್ಯ ಕಿವಿಯ ಸೋಂಕು ಬರುವ ಸಾಧ್ಯತೆಗಳು ಇತರೆ ಜನರಿಗಿಂತ ಮೂರು ಪಟ್ಟು ಹೆಚ್ಚಾಗಿರುತ್ತದೆ.
  • ಬಾಯಿ : ಧೂಮಪಾನದಿಂದ ಬಾಯಿಯ ಇಡೀ ವಾತಾವರಣ ಹದಗೆಡುತ್ತದೆ. ಬಾಯಿಯ ವಿವಿಧ ಭಾಗಗಳಾದ ಹಲ್ಲು, ವಸಡು, ನಾಲಿಗೆ, ಪ್ಯಾಲೇಟ್ ( ಬಾಯಿಯ ಮೇಲ್ಭಾಗ), ಕಿರುನಾಲಿಗೆ, ಕೆನ್ನೆಯ ಮತ್ತು ತುಟಿಯ ಒಳಭಾಗಗಳು ಅಕ್ಷರಶಃ ನರಳಾಡುತ್ತಿರುತ್ತವೆ. ಆಹಾರದ ರುಚಿ ಗೊತ್ತಾಗುವುದಿಲ್ಲ. ಸಮಯ ಕಳೆದ ಹಾಗೆ ಎಲ್ಲಾ ಆಹಾರವೂ ಕಾರವೆನಿಸಲಾರಂಭಿಸುತ್ತದೆ ಮತ್ತು ಬಾಯಲ್ಲೆಲ್ಲ ನೋವುಂಟಾಗುತ್ತದೆ. ಬಾಯಿಯಲ್ಲಿ ಬಿಳಿ ಮಚ್ಚೆಗಳು ಕಂಡುಬರುತ್ತವೆ. ಬಾಯಿಯಿಂದ ಯಾವಾಗಲೂ ದುರ್ಗಂಧ ಬರುತ್ತಿರುತ್ತದೆ. ಬಾಯಿಯಲ್ಲಿ ತಂಬಾಕು – ಗುಟ್ಕಾ ಇಟ್ಟುಕೊಳ್ಳುವುದರಿಂದ ಆ ಭಾಗಗಳಲ್ಲಿ ಹುಣ್ಣುಗಳಾಗುತ್ತವೆ. ಕೆಲವೊಮ್ಮೆ ರಕ್ತಸ್ರಾವವಾಗುತ್ತದೆ. ಸಮಯ ಕಳೆದ ಹಾಗೆ ಬಾಯಿಯನ್ನು ಪೂರ್ತಿಯಾಗಿ ತೆಗೆಯಲು ಸಾಧ್ಯವಾಗದ ಹಾಗೆ ಬದಲಾವಣೆಯಾಗುತ್ತದೆ. ಬಾಯಿಯ ವಿವಿಧ ಭಾಗಗಳಲ್ಲಿ ಕ್ಯಾನ್ಸರ್ ಉಂಟಾಗಲು ತಂಬಾಕಿನ ಬಳಕೆ ಮುಖ್ಯ ಕಾರಣವಾಗಿದೆ.

ಹಲ್ಲು ಕಲೆಗಳಾಗುವುದು, ಹಳದಿ ಬಣ್ಣಕ್ಕೆ ತಿರುಗುವುದು, ಕಲ್ಮಶ ಪದರ ಬೆಳೆಯುವುದು, ಹಲ್ಲುಗಳು ಸಡಿಲಗೊಳ್ಳುವವು, ಹಲ್ಲುಗಳು ಕೊಳೆಯುವವು ಮತ್ತು ಬಿದ್ದು ಹೋಗುವವು.

  • ಒಸಡುಗಳು ಸೋಂಕಿಗೆ ಒಳಗಾಗುವುದು, ಒಸಡಿನ ನೋವುಗಳು ಹಾಗು ಒಸಡಿನಿಂದ ರಕ್ತಸ್ರಾವವಾಗುವುದು.
  • ನಾಲಿಗೆಗೆ ರುಚಿ ಗೊತ್ತಾಗದಿರುವುದು, ನಾಲಿಗೆಯ ಕ್ಯಾನ್ಸರ್, ಹುಣ್ಣುಗಳಾಗುವವು ಮತ್ತು ಸೋಂಕಿಗೆ ತುತ್ತಾಗುವರು.

ತಂಬಾಕು ತ್ಯಜಿಸುವುದರಿಂದ ಆಗುವ ದೈಹಿಕ ಲಾಭಗಳು:-

  • ಕ್ಯಾನ್ಸರ್ ಮತ್ತು ಹೃದಯರೋಗದ ಗಂಡಾಂತರ ಕಡಿಮೆಯಾಗುವುದು
  • ನಿಮ್ಮ ಪ್ರೀತಿಪಾತ್ರರು ನಿಮ್ಮಯ ಈ ದುಶ್ಚಟದಿಂದ ಅಪಾಯಕ್ಕೆ ಒಳಗಾಗುವುದಿಲ್ಲ
  • ನಿಮ್ಮ ಆರೋಗ್ಯ ಕೆಮ್ಮು ಮತ್ತು ಕಫ ಗಳಿಂದ ಮುಕ್ತವಾಗುವುದು ಮತ್ತು ಸುಧಾರಿಸುವುದು
  • ನಿಮ್ಮ ಹಲ್ಲುಗಳು ಬಿಳಿಯಾಗಿ ಮತ್ತು ಶುಚಿಯಾಗಿರುವವು
  • ನಿಮ್ಮ ಆರೋಗ್ಯ ವೃದ್ಧಿಸುವುದರ ಜೊತೆಗೆ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು.

ತಂಬಾಕು ತೊರೆಯುವುದು ಯಾವಾಗಲೂ ತಡವಲ್ಲ

  • ಚಿಕ್ಕ ವಯಸ್ಸಿನಲ್ಲಿಯೇ ತ್ಯಜಿಸಿದರೆ ಅಧಿಕ ಲಾಭವಾಗುವುದು.
  • ಸಿಗರೇಟು, ಪಾನ್‌ ಮತ್ತು ಜರದಾ ಸುಲಭವಾಗಿ ದೊರೆಯುವಂತೆ ಇರಬಾರದು.
  • ಚುಯಿಂಗ್ ಗಮ್, ಸಿಹಿ ಪೆಪ್ಪರ್ ಮೆಂಟ್ ಯಾವಾಗಲೂ ಬಾಯಿಯಲ್ಲಿರಲಿ. ಆಳವಾಗಿ ಉಸಿರು ಎಳೆದುಕೊಳ್ಳುವುದನ್ನು ಅಭ್ಯಾಸ ಮಾಡಿರಿ
  • ನಿಮಗೆ ಅತಿಯಾಗಿ “ಬೇಕು” ಎನಿಸಿದಾಗ, ನಿಮ್ಮ ಮಕ್ಕಳ ಬಗ್ಗೆ ಯೋಚಿಸಿರಿ.
  • ನಿಲ್ಲಿಸುವ  ದಿನ ನಿರ್ಧಾರ ಮಾಡಿ. ನಿಮ್ಮ ಮಾನಸಿಕ ಬೆಂಬಲಕ್ಕೆ ಒಬ್ಬರಿರಲಿ.
  • ಸಿಗರೇಟು, ಪಾನ್, ಜರದಾ ಇಲ್ಲದ ಮೊದಲ ದಿನಕ್ಕೆ ಯೋಜನೆ ಹಾಕಿಕೊಳ್ಳಿ
  • ಪ್ರತಿದಿನ ವಿಶ್ರಾಂತಿಯ ತಂತ್ರಗಳಾದ ಯೋಗ, ನಡೆಯುವುದು, ಧ್ಯಾನ, ನೃತ್ಯ, ಸಂಗೀತ ಇತ್ಯಾದಿ ಅಭ್ಯಾಸ ಮಾಡಿಕೊಳ್ಳಿ.
  • ಚುರುಕಾಗಿರುವ ಆರೋಗ್ಯ ಪೂರ್ಣ ಆಹಾರಕ್ಕೆ ನಿಮ್ಮ ಮೊದಲ ಆದ್ಯತೆಯಿರಲಿ.

ತಂಬಾಕು ನಿಷೇಧಕ್ಕಾಗಿ ಕಟ್ಟುನಿಟ್ಟಿನ ಕ್ರಮದ ಅತ್ಯಗತ್ಯ :

ಬಸ್, ರೈಲು ನಿಲ್ದಾಣ, ಚಿತ್ರಮಂದಿರ, ಸರ್ಕಾರಿ ಆಸ್ಫತ್ರೆ, ಗ್ರಂಥಾಲಯ, ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇದ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ದಂಡದ ಮೊತ್ತ ಹೆಚ್ಚಿದರೆ ಧೂಮಪಾನಿಗಳು ಸಾರ್ವಜನಿಕವಾಗಿ ಸಿಗರೇಟ್ ಸೇದುವ ಸಾಧ್ಯತೆ ಕಡಿಮೆಯಾಗುತ್ತದೆ. ನಮ್ಮ ಕಾನೂನು ಜಾರಿ ಸಂಸ್ಥೆಗಳ ವೈಫಲ್ಯದಿಂದ ತಂಬಾಕು ಉತ್ಪನ್ನಗಳ ಸೇವನೆಗೆ ಕಡಿವಾಣ ಹಾಕಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಸುಧಾರಣೆಯಾಗಬೇಕು. ಇದೆಲ್ಲಕ್ಕಿಂತ ಮಿಗಿಲಾಗಿ ತಂಬಾಕು ಸೇವನೆ ವಿರುದ್ಧ ದೊಡ್ಡ ಮಟ್ಟದ ಅರಿವು ಮೂಡಿಸಬೇಕಾಗಿದೆ.

ಕಿವಿ ಮಾತು:

  • ಧೂಮಪಾನ ಮಾಡದಿರಿ; ಮಾಡಲೂ ಬಿಡದಿರಿ.
  • ಧೂಮಪಾನಿಗಳೇ… ಇಂದೇ ತಂಬಾಕು ತ್ಯಜಿಸಿ, ಕುಟುಂಬಕ್ಕೆ ಆಸರೆಯಾಗಿ. ಆದಷ್ಟೂ ಬೇಗ ದಂತ ವೈದ್ಯರ ಸಲಹೆ ಹಾಗೂ ಸೂಕ್ತವಾದ ಚಿಕಿತ್ಸೆಯನ್ನು ಪಡೆಯಿರಿ

– ಡಾ. ಪ್ರಮೊದ  ಜಿ.ವಿ. ಪ್ರೊಫೆಸರ್, ಓರಲ್ ಮೆಡಿಸಿನ್ ಮತ್ತು ರೇಡಿಯೋಲಜಿ ವಿಭಾಗ
– ಡಾ. ದೀಪಶ್ರೀ ಪ್ರಮೊದ ಗುಜ್ಜರ್ ಉಪನ್ಯಾಸಕಿ, ಓರಲ್ ಮತ್ತು ಮ್ಯಾಕ್ಸಿಲ್ಲೊಫೇಶಿಯಲ್ ಪೆಥಾಲಜಿ ವಿಭಾಗ, ಬಾಪೂಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ದಾವಣಗೆರೆ.

error: Content is protected !!