ಭರತ ಭೂಮಿ. ಇಂಥ ಪುಣ್ಯ ಸ್ಥಳದಲ್ಲಿ ಭಾರತಾಂಬೆ ಹಲವಾರು ಮಹಾನ್ ವೀರ ಪುರುಷರಿಗೆ, ವೀರಗೃಹಿಣಿಯರಿಗೆ, ಸಾಧಕರಿಗೆ, ಪುಣ್ಯವಂತರಿಗೆ ಜನ್ಮ ನೀಡಿದ್ದಾಳೆ. ಅಂತಹವರ ಸಾಲಿನಲ್ಲಿ, ಇತಿಹಾಸ ಮರೆಯಲಾರದ ವೀರ ಮಹಿಳೆಯರಲ್ಲಿ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅತ್ಯಂತ ಪ್ರಸಿದ್ಧ ರಾಣಿಯಾಗಿ, ಸಾಧ್ವಿಯಾಗಿ, ಸುಧಾರಕಳಾಗಿ, ಧರ್ಮನಿಷ್ಠಳಾಗಿ, ಉದಾರಚರಿತಳಾಗಿ ಸಾಧನೆ ಮಾಡಿದ ಅಗ್ರಗಣ್ಯ ಅಪ್ಪಟ ಮಹಿಳೆ.
ಅಹಲ್ಯಾ ಬಾಯಿ ಹೋಳ್ಕರ್ ಮಹಾರಾಷ್ಟ್ರದ ಚೌಂಡಿ ಗ್ರಾಮದಲ್ಲಿ (ಈಗಿನ ಅಹಮದ್ ನಗರ ಜಿಲ್ಲೆ) ಮಂಕೋಜಿ ಶಿಂಧೆ ಮತ್ತು ಸುಶೀಲಾ ಶಿಂಧೆ ಎಂಬುವರ ಮುದ್ದಿನ ಮಗಳಾಗಿ 31 ಮೇ 1725ರಲ್ಲಿ ಕೊಲ್ಲಾಪುರ ಮಹಾಲಕ್ಷ್ಮಿಯ ಕೃಪಾ ಕಟಾಕ್ಷದಿಂದ ಮರಾಠಿ ಹಿಂದೂ ಕುಟುಂಬದಲ್ಲಿ ಜನಿಸಿದಳು. ಬಾಲ್ಯದಿಂದಲೂ ಅಹಲ್ಯಾ ಬಾಯಿ ತುಂಬಾ ಜ್ಞಾನವಂತೆ ಮತ್ತು ಉದಾರಚರಿತಳೂ, ಧರ್ಮನಿಷ್ಠೆಯುಳ್ಳವಳೂ ಆಗಿದ್ದಳು. ಹೋಳ್ಕರ್ ವಂಶದ ಮಲ್ಲಾರ ರಾವ್ ಹೋಳ್ಕರ್‌ನ ಮಗ ಖಂಡೇರಾಯನ ಪತ್ನಿಯಾಗಿದ್ದಳು. ಖಂಡೇರಾಯ 1754ರಲ್ಲಿ ಕುಂಬೇರರ ಮುತ್ತಿಗೆಯಲ್ಲಿ ಸತ್ತಾಗ, ಧೈರ್ಯ, ಸಾಹಸಕ್ಕೆ ಹೆಸರುವಾಸಿಯಾಗಿದ್ದ ಅಹಲ್ಯಾ ಬಾಯಿಗೆ ಮಾವ ಮಲ್ಲಾರರಾವ್ ಮತ್ತು ಅತ್ತೆ ಗೌತಮಬಾಯಿ ರಾಜಕೀಯ ಮತ್ತು ಮೌಲ್ಯಯುತ ತತ್ವಗಳ ತರಬೇತಿಯನ್ನು ನೀಡಿ ಧೀರ ಮಹಿಳೆಯನ್ನಾಗಿಸಿದರು. ಸತಿ ಪದ್ಧತಿಯನ್ನು ವಿರೋಧಿಸಿ ಆತ್ಮಸ್ಥೈರ್ಯ ತುಂಬಿ ಅಹಲ್ಯಾಬಾಯಿಗೆ ಆಡಳಿತದ ಚುಕ್ಕಾಣಿಯನ್ನು ನೀಡಿದರು.
ಮಾಳವದ ರಾಣಿಯಾದ ಅಹಲ್ಯಾಬಾಯಿ ಹೋಳ್ಕರ್ ನಾಗರಿಕ ಮತ್ತು ಮಿಲಿಟರಿ ತರಬೇತಿಯನ್ನು ಪಡೆದು ಅತ್ಯಂತ ದಕ್ಷತೆಯಿಂದ ಆಂತರಿಕ ಆಡಳಿತ ನಡೆಸಿ, ಶಾಂತಿ ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸಿದಳು. ಮಹಿಳಾ ಅಂಗರಕ್ಷಕ ಪಡೆಯನ್ನು ಹೊಂದಿದ್ದ ಅಹಲ್ಯಾಬಾಯಿಗೆ ಪ್ರಜಾ ಕಲ್ಯಾಣವೇ ಮುಖ್ಯ ಗುರಿಯಾಗಿತ್ತು. ದಂಗೆ ಎದ್ದ ವೈರಿ ಪಡೆಗಳನ್ನು ದಕ್ಷತೆಯಿಂದ ಎದುರಿಸಿ ಮಾಳವ ಪ್ರಾಂತ್ಯದಲ್ಲಿ ಎಂದೂ ಕಾಣದಂತಹ ಸುಖೀರಾಜ್ಯ ಸ್ಥಾಪನೆ ಮಾಡಿದ್ದಳು. ಬ್ರಿಟಿಷ್ ಅಧಿಕಾರಿಯಾದ ಸರ್ ಜಾನ್ ಮ್ಯಾಲ್‌ಕೋಮ್ ಎಂಬುವವರು ಅಹಲ್ಯಾಬಾಯಿ ಹೋಳ್ಕರ್ ಅತ್ಯಂತ ಪರಿಶುದ್ಧಳಾದ ಅತ್ಯಂತ ಆದರ್ಶ ಪ್ರಾಯವಾದ ರಾಜ್ಯಾಡಳಿತಗಾರಳು ಎಂದು ಇವಳನ್ನು ವರ್ಣಿಸಿದ್ದಾರೆ.
ಅಹಲ್ಯಾಬಾಯಿ ಹೋಳ್ಕರ್ ಅವರ ಸ್ವಂತ ರಾಜಧಾನಿ ನರ್ಮದಾ ನದಿಯ ದಡದಲ್ಲಿರುವ ಮಹೇಶ್ವರವಾಗಿತ್ತು. ಅವರ ಮಾಳ್ವಾದಲ್ಲಿ ಮೂಲ ಸೌಕರ್ಯವನ್ನು ಪ್ರಜೆಗಳಿಗಾಗಿ ಕಲ್ಪಿಸಿದಳು. ಅನೇಕ ಹಿಂದೂ ದೇವಾಯಲಯಗಳಿಗೆ ನಿಯಮಿತ ಪೂಜೆಗಾಗಿ ದೇಣಿಗೆ ನೀಡಿದರು. ಮಾಳವ ಹೊರಗೆ, ಹಿಮಾಲಯದಿಂದ ದಕ್ಷಿಣ ಭಾರತದ ಅನೇಕ ತೀರ್ಥ ಕ್ಷೇತ್ರಗಳವರೆಗೆೆ ಭಾರತದ ಉಪಖಂಡದಾದ್ಯಂತ ಹಲವಾರು ಹಿಂದೂ ದೇವಾಲಯಗಳನ್ನು, ಉದ್ಯಾನವನಗಳನ್ನು, ಬಾವಿಗಳನ್ನು, ಘಟ್ಟಗಳನ್ನು, ವಿಶ್ರಾಂತಿ ಗೃಹಗಳನ್ನು, ಧರ್ಮ ಶಾಲೆಗಳನ್ನು ನಿರ್ಮಿಸಿದಳು.
18ನೇ ಶತಮಾನದಲ್ಲಿ ಅಹಲ್ಯಾಬಾಯಿ ಹೋಳ್ಕರ ಲಿಂಗ-ತಾರಮ್ಯದ ವಿರುದ್ಧ ದನಿ ಎತ್ತಿದವರು. ಮಕ್ಕಳಿಲ್ಲದ ವಿಧವೆಯರ ಆಸ್ತಿ ಮುಟ್ಟುಗೋಲನ್ನು ವಿರೋಧಿಸಿದರು. ವ್ಯಾಪಾರಿಗಳು, ರೈತರು, ಶ್ರಮಿಕರನ್ನು ಬೆಂಬಲಿಸಿದರು. ವ್ಯಾಪಾರದಲ್ಲಿ ತೆರಿಗೆಯನ್ನು ಕಡಿತಗೊಳಿಸಿ, ವ್ಯಾಪಾರಾಭಿವೃದ್ಧಿ ಮಾಡಿದರು. ಗಡಿಗಳಿಗೆ ರಕ್ಷಣೆ ನೀಡಿದ್ದರು.
ಮಹೇಶ್ವರದಲ್ಲಿ ಅಹಲ್ಯಾಬಾಯಿ ಸಾಹಿತ್ಯ, ಸಂಗೀತ, ಕಲೆ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡಿ ಕಲೆಯ ನಗರವನ್ನಾಗಿಸಿದರು. ಪ್ರಸಿದ್ಧ ಮರಾಠಿ ಕವಿ ಮೋರೋಪಂತ್ ಮತ್ತು ಮಹರಾಷ್ಟ್ರದ ಶಾಹಿರ್ ಅನಂತಫಂಡಿಯಂತ ವಿದ್ವಾಂಸರನ್ನು ಹಾಗೂ ಸಂಸ್ಕೃತ ವಿದ್ವಾಂಸರಾದ ಖುಶಾಲಿರಾಮರನ್ನು ಪೋಷಿಸಿದರು. ಕುಶಲ-ಕರ್ಮಿಗಳು, ಶಿಲ್ಪಿಗಳು ಮತ್ತು ಕಲಾವಿದರು ಇವಳಿಂದ ಅಪಾರವಾಗಿ ಗೌರವಿಸಲ್ಪಟ್ಟರು. ಮಹೇಶ್ವರ ಜವಳಿ ಉದ್ಯಮದ ಪ್ರಸಿದ್ಧ, ಕ್ಷೇತ್ರವಾಯಿತು.
ಭವ್ಯ ಕಾಶಿ, ದಿವ್ಯ ಕಾಶಿ ಎಂದು ಪ್ರಸಿದ್ಧ ಪಡೆದಿರುವ ವಾರಾಣಸಿಯ ಕಾಶಿ ವಿಶ್ವನಾಥ ಮಂದಿರದ ಪುನರ್ ನಿರ್ಮಾಣಕ್ಕೆ ಕಾರಣರಾದ ವರು. ಇವರೇ ಅನೇಕ ಬಾರಿ ದಾಳಿಗೊಳಗಾಗಿದ್ದ ಕಾಶಿ ವಿಶ್ವನಾಥ ಮಂದಿರದ ಪುನರ್ ನಿರ್ಮಾಣ ಕಾರ್ಯ ಮಾಡಿದ ಕೆಲವರಲ್ಲಿ ಅಹಲ್ಯಾ ಬಾಯಿ ಹೋಳ್ಕರ್ ಅವರ ಪಾತ್ರ ಬಹು ಮುಖ್ಯವಾದದ್ದು.
ಇಂಥ ಮಹಾಸಾಧ್ವಿ ಗಂಡನನ್ನು, ಮಗನನ್ನು, ಮಗಳನ್ನು ಕಳೆದುಕೊಂಡು ಪ್ರಜಾ ಪಾಲನೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟು, ಜೀವನದ ಅಂತ್ಯದವರೆಗೂ ಕಲ್ಯಾಣ ಕೆಲಸದಲ್ಲಿ ಮಗ್ನಳಾಗಿದ್ದು, ಆತ್ಮಧೈರ್ಯದ ಒಡತಿಯಾಗಿದ್ದ ಅಹಲ್ಯಾಬಾಯಿ ಹೋಳ್ಕರ್‌ರವರು 12 ಆಗಸ್ಟ್ 1795ರಲ್ಲಿ ಮರ ಹೊಂದಿದರು. ಅವರು ಮರಣ ಹೊಂದಿರಬಹುದು, ಆದರೆ ಅವರ ಸಾಹಸ, ಕಾರ್ಯನಿಷ್ಠೆತೆ, ಉದಾರತೆ, ಧರ್ಮನಿಷ್ಠೆ, ಕೌಶಲ್ಯಗಳು ಇಂದಿಗೂ ಎಲ್ಲ ಮಹಿಳೆಯರಿಗೂ ಆದರ್ಶಪ್ರಾವಾಗಿವೆ. ಸ್ಫೂರ್ತಿದಾಯಕವಾಗಿವೆ.
ಅಂತಹ ಮಹಾವೀರ ವೀರಾಹೃಹಿಣಿಗೆ ನಮ್ಮದೊಂದು ನಮನ.
– ಸೌಭಾಗ್ಯ ಎಸ್.ಹಿರೇಮಠ, ಉಪನ್ಯಾಸಕರು, ಎಸ್.ಜೆ.ವಿ.ಪಿ. ಪಿಯು ಕಾಲೇಜು, ಹರಿಹರ