ಪಾಕ್ ಜಿಂದಾಬಾದ್ ಎಂದು ಅಪಪ್ರಚಾರ ಮಾಡಿದರೆ ಕ್ರಮ

ಪಾಕ್ ಜಿಂದಾಬಾದ್ ಎಂದು ಅಪಪ್ರಚಾರ ಮಾಡಿದರೆ ಕ್ರಮ

ಚನ್ನಗಿರಿ : ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಪರಮೇಶ್ವರ್ ಸಮರ್ಥನೆ

ಠಾಣೆ ಮೇಲಿನ ದಾಳಿ ಬಗ್ಗೆ ಸಿಸಿಟಿವಿ ಆಧರಿಸಿ ಕ್ರಮ

ದಾವಣಗೆರೆ, ಮೇ 30 – ಚನ್ನಗಿರಿಯಲ್ಲಿ ಆದಿಲ್ ಸಾವಿನ ಪ್ರಕರಣ ಹಾಗೂ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿ ಎರಡರ ಬಗ್ಗೆಯೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಚನ್ನಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಟ್ಕಾ ಆಡಿಸುತ್ತಿದ್ದ ವ್ಯಕ್ತಿ ಎಂದು ಠಾಣೆಗೆ ಕರೆದುಕೊಂಡು ಬಂದಾಗ ಸಾವು ಸಂಭವಿಸಿರುವುದು ಮತ್ತು ನಂತರ ಠಾಣೆಗೆ ನುಗ್ಗಿ ದಾಂಧಲೆ ಮಾಡಿ, ವಾಹನಗಳಿಗೆ ಹಾನಿ ಮಾಡಿರುವ ಎರಡೂ ಘಟನೆಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.

ಸಿ.ಸಿ.ಟಿ.ವಿ. ದೃಶ್ಯಗಳನ್ನು ಆಧರಿಸಿ ತಪ್ಪಿತಸ್ಥರು ಹಾಗೂ ಕಲ್ಲು ತೂರಾಟ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ವಿಚಾರಣೆ ನಡೆಸಿ ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂದು ಪರಮೇಶ್ವರ್ ಹೇಳಿದರು.

ಆದಿಲ್ ಸಾವಿನ ಬಗ್ಗೆ ಎಫ್.ಎಸ್.ಎಲ್. ವರದಿ ಸಹ ಪಡೆಯಲಾಗುತ್ತಿದೆ. ವರದಿ ಬಂದ ಮೇಲೆ ಸತ್ಯಾಂಶ ತಿಳಿಯಲಿದೆ ಎಂದೂ ಅವರು ಹೇಳಿದರು.

ಪೊಲೀಸ್ ಅಧಿಕಾರಿಗಳ ಅಮಾನತ್ತು ಕ್ರಮವನ್ನು ಸಮರ್ಥಿಸಿಕೊಂಡ ಸಚಿವ ಪರಮೇಶ್ವರ್, ಇದೆಲ್ಲಾ ಆಡಳಿತಾತ್ಮಕ ಪ್ರಕ್ರಿಯೆಯ ಭಾಗ ಎಂದು ಹೇಳಿದರು.

ಯಾವಾಗಲೂ ತನಿಖೆಗೆ ಮೊದಲೇ ಮೇಲ್ನೋಟಕ್ಕೆ ಕಂಡು ಬರುವ ಅಂಶಗಳನ್ನು ಆಧರಿಸಿ ಕ್ರಮ ತೆಗೆದು ಕೊಳ್ಳಲಾಗುತ್ತದೆ. ಇಲ್ಲೂ ಅದೇ ರೀತಿಯ ಕ್ರಮವಾಗಿದೆ. ತನಿಖೆಯ ನಂತರ ಏನೂ ತಪ್ಪಾಗಿಲ್ಲ ಎಂದಾ ದರೆ, ಮತ್ತೆ ಸೇವೆಗೆ ಕರೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಚನ್ನಗಿರಿ ಠಾಣೆ ಸೇರಿದಂತೆ ರಾಜ್ಯದೆಲ್ಲೆಡೆ ಪೊಲೀಸ್ ಸಿಬ್ಬಂದಿಯ ಕೊರತೆ ಇದೆ. ಕಳೆದ ನಾಲ್ಕು ವರ್ಷಗಳಲ್ಲಿ ನೇಮಕಾತಿ ಆಗದೇ ಇರುವುದೇ ಇದಕ್ಕೆ ಕಾರಣ. ಈಗ ನೇಮಕ ಪ್ರಕ್ರಿಯೆ ಆರಂಭಿಸಿದ್ದೇವೆ. ತರಬೇತಿ ಪೂರ್ಣಗೊಂಡ ತಕ್ಷಣ ಸಿಬ್ಬಂದಿ ಕಡಿಮೆ ಇರುವ ಠಾಣೆಗಳಿಗೆ ಪೊಲೀಸರನ್ನು ನಿಯೋಜನೆ ಮಾಡಲಾಗುವುದು ಎಂದರು.

ನಲ್ಲೂರಿನಲ್ಲಿ ಪೊಲೀಸ್ ಠಾಣೆಯ ಕುರಿತ ಪ್ರಸ್ತಾಪ ಬಂದಿದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸುವಾಗ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಲಾಗಿದೆ ಎಂಬ ಬಗ್ಗೆ ಸಾಕ್ಷಿಗಳಿದ್ದರೆ ಪೊಲೀಸರಿಗೆ ನೀಡಲಿ, ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪರಮೇಶ್ವರ್ ಹೇಳಿದರು.

ಆ ರೀತಿಯ ಸಾಕ್ಷಿಗಳಿಲ್ಲದೇ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾರೆ ಎಂಬ ಅಪಪ್ರಚಾರ ಮಾಡಿದರೆ, ಅಂಥವರ ವಿರುದ್ಧವೂ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಇದಕ್ಕೂ ಮುಂಚೆ ಚನ್ನಗಿರಿ ಠಾಣೆಗೆ ಭೇಟಿ ನೀಡಿದ ಪರಮೇಶ್ವರ್, ಠಾಣೆಯಲ್ಲಿನ ಕೆಲ ಲೋಪಗಳ ಬಗ್ಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಶಿವಗಂಗಾ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!