ಕಪ್ಪು ತಲೆ ಹುಳುವಿನಿಂದ ಸೊರಗುತಿದೆ ದಾವಣಗೆರೆ ತೆಂಗು

ಕಪ್ಪು ತಲೆ ಹುಳುವಿನಿಂದ ಸೊರಗುತಿದೆ ದಾವಣಗೆರೆ ತೆಂಗು

ತೆಂಗಿನ ಮರ ಪ್ರಕೃತಿಯ ಮೂಸೆಯಲ್ಲಿ ಮೂಡಿಬಂದ ಅದ್ಭುತ ಸಸ್ಯ.  ಅನಾದಿ ಕಾಲದಿಂದಲೂ ತೆಂಗನ್ನು ಮಾನವ ಉಪಯೋಗಿ ಸುತ್ತಾ ಬಂದಿದ್ದಾನೆ. ತೆಂಗನ್ನು ನೇರವಾಗಿ ಆಹಾರದಲ್ಲಿ ಸೇವಿಸುವುದಲ್ಲದೆ ಎಣ್ಣೆ, ನಾರು, ಹಗ್ಗ, ಛಾವಣಿ, ಮುಂತಾದವುಗಳಲ್ಲಿ ಉಪಯೋಗಿಸಲಾಗುವುದು. ಸೋಪ್, ಶೃಂಗಾರ ಸಾಧನಗಳು ಮತ್ತು ಔಷಧಿಗಳಲ್ಲಿಯೂ ಬಳಕೆಯಲ್ಲಿದೆ. ತೆಂಗಿನಿಂದ ವಿವಿಧ ಸಿಹಿ ತಿನಿಸುಗಳಲ್ಲದೆ ಸ್ವಾದಿಷ್ಟ ಭಕ್ಷ್ಯಗಳನ್ನು ತಯಾರಿಸಲಾಗುವುದು.

ತೆಂಗಿನ ಮರ :  ಏಕದಳ ಸಸ್ಯಗಳ ಗುಂಪಿಗೆ ಸೇರಿರುವ ತೆಂಗನ್ನು ಸಸ್ಯಶಾಸ್ತ್ರೀಯವಾಗಿ ಕೊಕಸ್ ನ್ಯುಸಿಫೆರಾ ಎಂದು ಕರೆಯುವರು. ದಾವಣಗೆರೆಯಲ್ಲಿ ಪ್ರಮುಖವಾಗಿ ಅಡಿಕೆಯನ್ನು ಬೆಳೆಯುತ್ತಿದ್ದರೂ ತೆಂಗಿನ ಮರವನ್ನು ತೋಟಗಾರಿಕೆ ಬೆಳೆಯಾಗಿ ಸದ್ಯಕ್ಕೆ 12900 ಹೆಕ್ಟೇರ್ ಜಾಗದಲ್ಲಿ ಬೆಳೆಯಲಾಗುತ್ತಿದೆ.  

ಕೀಟ ಬಾಧೆ: ಈ ಸಸ್ಯಕ್ಕೆ ಹಲವಾರು ಕೀಟ-ರೋಗ ಬಾಧೆಗಳಿದ್ದು ಪ್ರಮುಖವಾಗಿ ಕಪ್ಪು ತಲೆ ಕಂಬಳಿ ಹುಳು   ವಿನಾಶಕಾರಿಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಇದು ಆತಂಕಕಾರಿ ಉಪದ್ರವ ತೀವ್ರವಾಗಿದ್ದು, ಹಲವು ತೋಟಗಳಲ್ಲಿ ಶೇ.70 ರಷ್ಟು ಮರಗಳು ಹಾನಿಯಾಗಿವೆ. ವರ್ಷ ಪೂರ್ತಿ ತೆಂಗಿನ ಮರಗಳಿಗೆ ಹುಳು ಬಾಧೆ ಇದ್ದರೂ ಬೇಸಿಗೆ ಕಾಲದಲ್ಲಿ ಹೆಚ್ಚಿನ ತೊಂದರೆ ಕಂಡುಬರುತ್ತದೆ.

ಪ್ರತಿ ಎಲೆಯಲ್ಲಿ ಒಣಗಿದಂತಹ ಮಚ್ಚೆಗಳು ಕಂಡುಬರುತ್ತವೆ. ಸುಳಿಯ ಮಧ್ಯದಲ್ಲಿರುವ ಮೂರು-ನಾಲ್ಕು ಎಲೆಗಳು ಮಾತ್ರ ಹಸಿರಾಗಿರುತ್ತವೆ. ಒಣಗಿದ ಎಲೆಗಳನ್ನು ಬಿಡಿಸಿ ನೋಡಿದರೆ ಬಿಳಿ ಕೂದಲಿನ ತರಹದ ಅಥವಾ ಬಿಳಿಪುಡಿ ಉದುರಿರುವಂತೆ ಕಾಣು ತ್ತದೆ.  ತೀವ್ರವಾಗಿ ತೊಂದರೆಗೊಳಗಾಗಿರುವ ತೋಟ ದಲ್ಲಿ ಗಿಡಗಳ ಗರಿಗಳು ಬೆಂಕಿಗೆ ಸುಟ್ಟಂತೆ ಕಾಣುತ್ತದೆ. ಕಾಯಿಗಳ ಮೇಲೂ ಕಂದು ಬಣ್ಣದ ಕಲೆಗಳನ್ನು ಕಾಣಬಹುದು. ಸಸ್ಯದ ಬೆಳವಣಿಗೆಗೆ ಅಗತ್ಯವಿರುವ ಎಲೆಗಳು ನಾಶವಾಗುವುದರಿಂದ ಗಿಡದ ಇಳುವರಿ ಗಮನಾರ್ಹವಾಗಿ ಕಡಿಮೆಯಾಗುತ್ತದೆ. 

ಪೀಡೆಕಾರಕ ಕೀಟ: ಇದು ಒಂದು ಪತಂಗದ ಪ್ರಭೇದ. ತನ್ನ ಜೈವಿಕ ಚಕ್ರದ ಎರಡನೇ ಹಂತವೇ ಹಾನಿಕಾರಕ ಹಂತ – ಕಂಬಳಿಹುಳು. ಇದು ಹಸಿರು-ಮಿಶ್ರಿತ ಕಂದು ಬಣ್ಣವಿದ್ದು ಕಡು-ಕಂದು ಬಣ್ಣದ ತಲೆಯಿರುವುದು.  ಕುತ್ತಿಗೆ ಮಧ್ಯಭಾಗ ಕೆಂಪು ಬಣ್ಣವಿದ್ದು ದೇಹದ ಮೇಲೆ ಕಂದು ಪಟ್ಟಿಗಳನ್ನು ಕಾಣಬಹುದು. ಇವುಗಳು ತೆಂಗಿನ ಎಲೆಗಳ ಕೆಳಭಾಗಲ್ಲಿ ಎಲೆಯ ಅಂಗಾಂಶಗಳನ್ನು ತಿನ್ನುತ್ತವೆ. ಈ ಹುಳುಗಳು 30ರಿಂದ 40 ದಿನಗಳವರೆಗೆ ಎಲೆಗಳನ್ನು ತಿನ್ನುತ್ತಾ ಇರುತ್ತವೆ. ಈ ಪತಂಗದ ಜೀವನಚಕ್ರ ಪೂರ್ತಿಯಾಗಲು ಎರಡರಿಂದ ಎರಡೂವರೆ ತಿಂಗಳು ಬೇಕಾಗುತ್ತದೆ.

ಸಮಗ್ರ ಪೀಡೆ ನಿಯಂತ್ರಣ : ಕಪ್ಪು-ತಲೆ ಹುಳುವಿನ ನಿಯಂತ್ರಣಕ್ಕೆ ಹಲವಾರು ವಿಧಾನಗಳನ್ನು ಸೂಚಿಸಲಾಗಿದೆ. ಅಕ್ಟೋಬರ್‍ನಿಂದ ಮೇ ತಿಂಗಳವರೆಗೆ ಬಿಸಿಲು ಹೆಚ್ಚಾದಂತೆ ಕೀಟಬಾಧೆ ಉಲ್ಭಣಗೊಳ್ಳುವುದು. ಹಾಗಾಗಿ ಆದಷ್ಟು ಬೇಗನೆ ಕೀಟವನ್ನು ಪತ್ತೆ ಮಾಡುವುದು ಮುಂಜಾಗ್ರಾತ ಕ್ರಮಗಳಲ್ಲೊಂದು.  

  • ಮೊದಲಿಗೆ ಕೀಟಬಾಧೆಗೆ ತುತ್ತಾಗಿರುವ ಎಲೆಗಳನ್ನು ಕಡಿದು ಸುಟ್ಟು ಹಾಕಬೇಕು.
  • ಕೀಟಬಾಧೆ ಕಡಿಮೆಯಿದ್ದಲ್ಲಿ ಪ್ರತಿ ಮರದ ಕೆಳಗಿನ 5 ರಿಂದ 6 ತೆಂಗಿನ ಗರಿಗಳನ್ನು ತೆಗೆದು ಸುಟ್ಟು ಹಾಕಬೇಕು. ಈ ರೀತಿ ಮಾಡುವುದರಿಂದ ಮೊಟ್ಟೆ ಮತ್ತು ಕಂಬಳಿ  ಹುಳುಗಳು ನಾಶವಾಗುವುವು.
  • ಹೆಚ್ಚು ಮರಗಳಿಗೆ ಹಾನಿಯಾಗಿದ್ದರೆ ಪ್ರಯೋಗಶಾಲೆಯಲ್ಲಿ ಬೆಳೆಸಿದ ಅತೀತ ಪರಾವಲಂಬಿ ಜೀವಿಗಳನ್ನು ತೋಟದಲ್ಲಿ ಬಿಡಬೇಕು. ಇದನ್ನು ಜೈವಿಕ ನಿಯಂತ್ರಣವೆನ್ನುವರು. ಕಂಬಳಿ ಹುಳುಗಳನ್ನು ಕೊಲ್ಲುವ ಜೀವಿಗಳಾದ ಬೆತೈಲಿಡ್, ಗೊನಿಯೊಜಸ್ ನೆಪಾನಟೈಡಿಸ್ ಮತ್ತು ಬ್ರಕೈಮೇರಿಯಾ ನೊಸಟೊಯ್  ಎನ್ನುವ ಪರೋಪಕಾರಿ ಜೀವಿಗಳನ್ನು ತೋಟದಲ್ಲಿ ಬಿಡಬೇಕು.  ಪ್ರತಿಯೊಂದು ಇಂತಹ ಜೀವಿಯ ಮೊಟ್ಟೆಗಳನ್ನು ಸಮೀಪದ ಕೃಷಿ ಇಲಾಖೆ ಅಥವಾ ಕೃಷಿ ವಿಶ್ವವಿದ್ಯಾಲಯದಿಂದ ಪಡೆಯಬಹುದು. 
  • ಬಹಳ ಹೆಚ್ಚು ಮರಗಳು ತೊಂದರೆಗೊಳಗಾಗಿದ್ದರೆ ಜೈವಿಕ ವಿಧಾನವಷ್ಟೇ ಸಾಲುವುದಿಲ್ಲ. ಆಗ ರಾಸಾಯನಿಕ ಕೀಟನಾಶಕದ ಬಳಕೆ ಅನಿವಾರ್ಯ.  ಎಲೆಗಳ ಕೆಳಭಾಗಕ್ಕೆ ಡೈಕ್ಲರೋವೊಸ್ 0.02%, ಅಥವಾ ಮ್ಯಾಲಥಯಾನ್ 0.05% ಅಥವಾ ಕ್ವಿನಾಲ್ ಫಾಸ್ 0.05%  ಅಥವಾ ಫಾಸಲೊನ್ 0.05% ಕೀಟನಾಶಕಗಳನ್ನು ಸಿಂಪಡಿ ಸಬೇಕು. ಮಾನೋಕ್ರೊಟೊಫಾಸ್ 60%  ನ್ನು ಕಾಂಡಕ್ಕೆ ಇಂಜೆಕ್ಷನ್ ಮೂಲಕ ಕೊಡುವ ವಿಧಾನ ವನ್ನು ಸಹ ಶಿಫಾರಸ್ಸು ಮಾಡಲಾಗಿದೆ. ಕೀಟ ನಾಶಕ ಗಳನ್ನು ಬೇರಿನ ಮೂಲಕವೂ ನೀಡಬಹುದು.
  • ಹತ್ತಿರದ ಕೃಷಿ ಇಲಾಖೆಯನ್ನು ಭೇಟಿ ಮಾಡಿ ಸೂಕ್ತ ಮಾರ್ಗದರ್ಶನವನ್ನು ಪಡೆಯಬೇಕು.

ಈ ರೀತಿ ಸಮಗ್ರ ಪೀಡೆ ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡರೆ ತೆಂಗಿನ ಮರದಲ್ಲಿ ಕಪ್ಪು-ತಲೆ ಕಂಬಳಿಹುಳು ಬಾಧೆಯನ್ನು ನಿಯಂತ್ರಿಸಿ ವರ್ಷಗಟ್ಟಲೇ ಆರೈಕೆ ಮಾಡಿದ ಮರಗಳನ್ನು ಉಳಿಸಿಕೊಳ್ಳಬಹುದು. ಇಲ್ಲಿ ರೈತರ ಸಾಮೂಹಿಕ ಪ್ರಯತ್ನ ಸಫಲತೆಯನ್ನು ಹೆಚ್ಚಿಸುತ್ತದೆ. ಅಂದರೆ ಅಕ್ಕ-ಪಕ್ಕದ ತೋಟದವರು ಪರಸ್ಪರ ಸಹಕಾರದಿಂದ ಸಮಗ್ರ ಕೀಟ ಹತೋಟಿ ಕ್ರಮಗಳನ್ನು ಜರುಗಿಸಿದರೆ ಮಾತ್ರ ಈ ರಕ್ಕಸ ಕೀಟವನ್ನು ತಹಬದಿಗೆ ತರಲು ಸಾಧ್ಯ. 


ಕಪ್ಪು ತಲೆ ಹುಳುವಿನಿಂದ ಸೊರಗುತಿದೆ ದಾವಣಗೆರೆ ತೆಂಗು - Janathavani– ಡಾ. ಎಸ್. ಶಿಶುಪಾಲ, ಪ್ರಾಧ್ಯಾಪಕರು, ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ. ಮೊ:8792674905, ಇಮೇಲ್: [email protected]

error: Content is protected !!