ರಾಜ್ಯ ಸರ್ಕಾರದ ವಿರುದ್ಧ ಹರಿಹರ ಶಾಸಕ ಬಿ.ಪಿ. ಹರೀಶ್ ಗಂಭೀರ ಆರೋಪ
ಬಿತ್ತನೆ ಬೀಜಗಳ ಬೆಲೆ ಏರಿಕೆ ಖಂಡಿಸಿ, ಮಲೇಬೆನ್ನೂರಿನಲ್ಲಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಲೇಬೆನ್ನೂರು, ಮೇ 29- ರಾಜ್ಯ ಸರ್ಕಾರದ ಹಣವನ್ನು ಕಾಂಗ್ರೆಸ್‌ನವರು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ ಎಂದು ಶಾಸಕ ಬಿ.ಪಿ. ಹರೀಶ್ ಗಂಭೀರ ಆರೋಪ ಮಾಡಿದ್ದಾರೆ.
ಅವರು ಬುಧವಾರ ಪಟ್ಟಣದ ರೈತ ಸಂಪರ್ಕ ಕಛೇರಿ ಎದುರು ಬಿತ್ತನೆ ಬೀಜ, ಗೊಬ್ಬರ ಮತ್ತು ಔಷಧಿಗಳ ಬೆಲೆ ಏರಿಕೆ ಖಂಡಿಸಿ, ಬಿಜೆಪಿ-ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ಎಸ್ಸಿ-ಎಸ್ಟಿ, ಹಿಂದುಳಿದವರ ಹೆಸರು ಹೇಳಿ ಕೊಂಡು ಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದವರು ಎಸ್ಟಿ ಅಭಿವೃದ್ಧಿ ನಿಗಮದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿರುವುದು ಅಲ್ಲಿನ ಅಧಿಕಾರಿಯ ಆತ್ಮಹತ್ಯೆಯಿಂದ ಬಯಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರು ತತ್‌ಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ, ಹರೀಶ್ ಅವರು, ಎಸ್ಸಿ-ಎಸ್ಟಿ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ 11,500 ಕೋಟಿ ರೂ. ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವುದು ನ್ಯಾಯವೇ ? ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಅಧಿಕಾರಕ್ಕಾಗಿ ಏನೆಲ್ಲಾ ಮಾಡುತ್ತಿರುವ ರಾಜ್ಯ ಸರ್ಕಾರ ಜನರ ವಿರೋಧಿಯಾಗಿದ್ದು, ಅಭಿವೃದ್ಧಿ ಸಂಪೂರ್ಣವಾಗಿ ಕುಂಠಿತಗೊಂಡಿದೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂದು ಹೇಳುವ ಮುಖ್ಯಮಂತ್ರಿಗಳು ರೈತರಿಗೆ ಅವಶ್ಯವಾಗಿರುವ ಬಿತ್ತನೆ ಬೀಜಗಳ ದರವನ್ನೇಕೆ ಹೆಚ್ಚಿಸಿದ್ದಾರೆ ಎಂದು ಹರೀಶ್ ಪ್ರಶ್ನಿಸಿದ್ದಾರೆ. ಮಾರುಕಟ್ಟೆಯಲ್ಲಿ ಬಿತ್ತನೆ ಬೀಜ,ಗೊಬ್ಬರ, ಔಷಧಿಗಳ ಬೆಲೆ ಶೇ. 30ರಷ್ಟು ಹೆಚ್ಚಳ ಮತ್ತು ರೈತ ಸಂಪರ್ಕ ಕೇಂದ್ರದಲ್ಲಿ ಶೇ. 10ರಷ್ಟು ದರ ಹೆಚ್ಚಳ ಮಾಡಿರುವುದನ್ನು ಕೂಡಲೇ ಹಿಂಪಡೆಯುವಂತೆ ಶಾಸಕ ಹರೀಶ್ ಸರ್ಕಾರವನ್ನು ಒತ್ತಾಯಿಸಿದರು.
ಭದ್ರಾ ನೀರಾವರಿ ಕಛೇರಿಗಳಲ್ಲಿ ಇಂಜಿನಿಯರ್ ಮತ್ತು ನಾಲೆಗಳ ಮೇಲ್ವಿಚಾರಕರು ಇಲ್ಲ. ಅಲ್ಲದೇ, ದಿನಗೂಲಿ ನೌಕರರಿಗೆ ಸರಿಯಾದ ಸಂಬಳ ನೀಡದ ಕಾರಣ ಅವರೂ ಕೆಲಸಕ್ಕೆ ಬರುತ್ತಿಲ್ಲ. ಹೀಗಾದರೆ ನಾಳೆ ನಾಲೆಯಲ್ಲಿ ನೀರು ಬಿಟ್ಟಾಗ ನೀರಿನ ನಿರ್ವಹಣೆ ಮಾಡುವವರು ಯಾರೆಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಪ್ರಶ್ನಿಸಿದ ಹರೀಶ್ ಅವರು, ಕಳೆದ ವರ್ಷ ಸರಿಯಾಗಿ ಮಳೆಯಾಗದ ಕಾರಣ ರೈತರು ಕಂಗಾಲಾಗಿದ್ದು, ಭಗವಂತನ ದಯೆಯಿಂದ ಈ ವರ್ಷವಾದರೂ ಉತ್ತಮ ಮಳೆಯಾಗಿ ಭದ್ರಾ ಡ್ಯಾಂ ಸೇರಿದಂತೆ ನಾಡಿನ ಎಲ್ಲಾ ಜಲಾಶಯಗಳು ಭರ್ತಿ ಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ ಮಾತನಾಡಿ, ರೈತರು ಬರಗಾಲ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಬಿತ್ತನೆ ಬೀಜಗಳ ದರ ಏರಿಕೆ ಸರಿಯಲ್ಲ ಎಂದರು.
ಹರಿಹರ ತಾ. ಗ್ರಾ. ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಹರಿಹರ ನಗರ ಬಿಜೆಪಿ ಅಧ್ಯಕ್ಷ ಅಜಿತ್ ಸಾವಂತ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಐರಣಿ ಅಣ್ಣಪ್ಪ, ತಾ. ಬಿಜೆಪಿ ಕಾರ್ಯದರ್ಶಿಗಳಾದ ಆದಾಪುರ ವೀರೇಶ್, ಹುಗ್ಗಿ ಮಹಾಂತೇಶ್, ಪುರಸಭೆ ಸದಸ್ಯ ಬೆಣ್ಣೆಹಳ್ಳಿ ಸಿದ್ದೇಶ್, ಜಿಗಳೇರ ಹಾಲೇಶಪ್ಪ, ಪಾನಿಪೂರಿ ರಂಗನಾಥ್, ಬೆಣ್ಣೆಹಳ್ಳಿ ಬಸವರಾಜ್, ಉಡೇದರ ಸಿದ್ದೇಶ್, ಕಜ್ಜರಿ ಹರೀಶ್, ಭೋವಿ ಮಂಜಣ್ಣ, ಬಟ್ಟೆ ಅಂಗಡಿ ವಿಶ್ವ, ಆನಂದ ಚಾರ್, ಓ.ಜಿ. ಮಂಜುನಾಥ್, ಹರಳಹಳ್ಳಿ ಶ್ರೀನಿವಾಸ್, ನಿರಂಜನ್ ಪಿಂಟು, ಜಿಗಳಿಯ ಜಿ.ಪಿ. ಮಂಜು, ಕೊಮಾರನಹಳ್ಳಿ ಸುನೀಲ್ ಸೇರಿದಂತೆ ಇನ್ನೂ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಂತರ ನಾಡ ಕಛೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಯಿತು.