ಶಾಲಾ ಪ್ರವೇಶಕ್ಕೆ ದಾಖಲೆ ಪಡೆಯಲು ನೂಕು-ನುಗ್ಗಲು

ಶಾಲಾ ಪ್ರವೇಶಕ್ಕೆ ದಾಖಲೆ ಪಡೆಯಲು ನೂಕು-ನುಗ್ಗಲು

ಹರಿಹರದಲ್ಲಿ ನಿರ್ವಹಣೆ ಇಲ್ಲದೆ ಸೊರಗಿರುವ ಆಧಾರ ಕೇಂದ್ರ

ಹರಿಹರ, ಮೇ 28- ವಿದ್ಯಾರ್ಥಿಗಳ ಶಾಲಾ ಪ್ರವೇಶಕ್ಕೆ ಅಗತ್ಯವಾಗಿರುವ ಆಧಾರ್, ಜಾತಿ ಮತ್ತು ಆದಾಯ  ಪ್ರಮಾಣ ಪತ್ರಗಳನ್ನು   ಪಡೆಯಲು ಪೋಷಕರು ಮತ್ತು ವಿದ್ಯಾರ್ಥಿಗಳು ಹರಸಾಹಸ ಪಡುತ್ತಿದ್ದಾರೆ.

ತಾಲ್ಲೂಕಿನಲ್ಲಿ ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಶಾಲೆ 226 ಮತ್ತು ಪ್ರೌಢಶಾಲೆ 65 ಇದ್ದು, ಒಂದರಿಂದ ಹತ್ತನೇ ತರಗತಿ   ವಿದ್ಯಾರ್ಥಿಗಳಿಗೆ ಶಾಲೆಗೆ ಸೇರುವುದಕ್ಕೆ   ಕಡ್ಡಾಯವಾಗಿ ಆದಾಯ, ಜಾತಿ, ಮತ್ತು ಆಧಾರ ಕಾರ್ಡ್ ಪಡೆಯುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.   ಎಸ್ಸಿ, ಎಸ್ಟಿ, ಓಬಿಸಿ, 3ಬಿ ಸೇರಿದಂತೆ ಇತರೆ ವರ್ಗದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್  ಹಾಗೂ ಇತರೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲೂ ಈ ದಾಖಲೆಗಳು ಬೇಕು.

ಹಾಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು   ಆದಾಯ, ಜಾತಿ  ಮತ್ತು ಆಧಾರ ಕಾರ್ಡನ್ನು ಪಡೆಯುವುದಕ್ಕೆ ತಾಲ್ಲೂಕು ಆಡಳಿತದ ಆವರಣದಲ್ಲಿರುವ  ಕೇಂದ್ರದ ಮುಂದೆ ಬೆಳಿಗ್ಗೆ ಯಿಂದ ಸಂಜೆಯವರೆಗೆ ಸುಡುವ ಬಿಸಿಲಿನ ತಾಪವನ್ನು ಲೆಕ್ಕಿಸದೆ, ಜೊತೆಗೆ ಮಲ ಮೂತ್ರ ದುರ್ವಾಸನೆ ಸಹಿಸಿಕೊಂಡು, ಕುಡಿಯುವ ನೀರಿಲ್ಲದೆ, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲದೇ ಇರುವಂತಹ  ಮತ್ತು ಕಟ್ಟಡದ ಮೇಲ್ಚಾವಣಿ ಸಂಪೂರ್ಣ ಹಾಳಾಗಿ ಸಿಮೆಂಟ್ ಕಾಂಕ್ರಿಟ್ ಗಾಳಿಯ ರಭಸಕ್ಕೆ ಮಕ್ಕಳ ಮೇಲೆ ಬೀಳುವಂತಹ ಪರಿಸ್ಥಿತಿ ಇದ್ದರೂ ಸಹ   ಸರತಿ ಸಾಲಿನಲ್ಲಿ ನಿಂತುಕೊಂಡು ಪಡೆಯವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ ಈ ಹಿಂದೆ ತಹಶೀಲ್ದಾರ್ ಕಚೇರಿ, ಅಂಚೆ ಕಚೇರಿ, ಬಿಎಸ್ಸೆನ್ನೆಲ್ ಕಚೇರಿ ಸೇರಿದಂತೆ, ಇತರೆ ಕಡೆಗಳಲ್ಲಿ ಸಾರ್ವಜನಿಕರು ಆಧಾರ್ ಕಾರ್ಡ್ ಪಡೆಯುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಆದರೆ ಈಗ ಬಿಎಸ್ಸೆನ್ನೆಲ್ ಕಚೇರಿ ಬಳಿ ಇರುವ ಕೇಂದ್ರದಲ್ಲಿ ಕೇವಲ 30 ರಿಂದ 40 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.  ಇನ್ನು ಅಂಚೆ ಕಚೇರಿಯ ಆವರಣದಲ್ಲಿದ್ದ   ಕೇಂದ್ರವನ್ನು ಸ್ಥಗಿತಗೊಳಿಸಲಾಗಿದೆ. 

ತಹಶೀಲ್ದಾರ್ ಕಚೇರಿ  ಆವರಣದಲ್ಲಿ ಇರುವ  ಕೇಂದ್ರದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಸುಮಾರು 80-90 ಜನರಿಗೆ ಮಾತ್ರ ಆಧಾರ ಕಾರ್ಡ್ ಮಾಡಲಾಗುತ್ತಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶ ಸೇರಿದಂತೆ ಎರಡು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ತಾಲ್ಲೂಕಿನಲ್ಲಿ ಒಂದೇ  ಕೇಂದ್ರದ ಮೂಲಕ ದಾಖಲೆ ಪಡೆದುಕೊಳ್ಳಲು ಹರ ಸಾಹಸ ಪಡುವಂತೆ ಆಗಿದೆ. ಆದ್ದರಿಂದ  ಇನ್ನೂ ಹೆಚ್ಚಿನ ಕೇಂದ್ರಗಳನ್ನು ತೆರೆಯುವ ಮೂಲಕ ಅನುಕೂಲ ಮಾಡಿಕೊಡಬೇಕಾಗಿದೆ.

ಈ ಸಂಬಂಧ ಆಗುತ್ತಿರುವ ತೊಂದರೆಗಳ ಬಗ್ಗೆ ತಹಶೀಲ್ದಾರ್ ಗುರುಬಸವರಾಜ್‌ ಅವರ ಗಮನಕ್ಕೆ ಸಾರ್ವಜನಿಕರು ತಂದಾಗ, ಆಧಾರ ಕೇಂದ್ರದ ನಿರ್ವಹಣೆ ನಮ್ಮ ಕಡೆಯಿಂದ ಆಗುತ್ತಿಲ್ಲ. 

ಅಟಲ್ ಜನಸ್ನೇಹಿ ಏಜೆನ್ಸಿಗಳವರು ನಿರ್ವಹಣೆ ಮಾಡುತ್ತಾರೆ. ಹಾಗಾಗಿ ನಾನು ಏನು ಮಾಡಲಿಕ್ಕೆ ಆಗೊಲ್ಲ ಎಂದು ಸಮಜಾಯಿಷಿ ಉತ್ತರ ನೀಡುತ್ತಿರುವುದು ಪೋಷಕರು ಮತ್ತು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. 

ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ರುವಂತಹ ಆಧಾರ ಕೇಂದ್ರದ ಬಳಿ ಪ್ರತಿನಿತ್ಯ ನೂರಾರು ಜನರು ಬರುತ್ತಾರೆ. ಇಲ್ಲಿನ ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು, ಮೂಲಭೂತ ಸೌಲಭ್ಯಗಳಿಲ್ಲದೇ ಬಹಳಷ್ಟು ತೊಂದರೆಗಳು ಇರುವುದರಿಂದ ಆಧಾರ ಕೇಂದ್ರವನ್ನು ಬೇರೆ ಕಟ್ಟಡಕ್ಕೆ ರವಾನಿಸುವುದಕ್ಕೆ ಮುಂದಾಗಬೇಕಿದೆ ಎಂದು ಹರಿಹರ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಪಿ.ಜೆ. ಮಹಾಂತೇಶ್ ಒತ್ತಾಯಿಸಿದ್ದಾರೆ.

ನಾವೂ ಸಹ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಪ್ರಯತ್ನ ಮಾಡು ತ್ತೇವೆ. ಇಲ್ಲಿನ ಕೇಂದ್ರವನ್ನು ಅಟಲ್ ಜನಸ್ನೇಹಿ ಏಜೆನ್ಸಿಯವರು ನಿರ್ವಹಣೆ ಮಾಡುತ್ತಿದ್ದು, ಕೇಂದ್ರದ ಖರ್ಚು ಹೆಚ್ಚಾಗಿದ್ದು,  ಸಿಬ್ಬಂದಿಗಳಿಗೆ ಸಂಬಳದ ಸಮಸ್ಯೆ ಇರುವು ದರಿಂದ ಇದನ್ನು ಮುಚ್ಚಬೇಕು ಎಂದು ತೀರ್ಮಾನ ಮಾಡಿದ್ದಾರೆ ಎನ್ನಲಾಗುತ್ತದೆ ಹಾಗೂ ಇಲ್ಲಿನ ಶಿಥಿಲ ವಾದ ಕಟ್ಟಡದಲ್ಲಿ ಕಳೆದ ಹಲವಾರು ವರ್ಷಗಳಿಂದ ಜನರಿಗೆ ಸೇವೆಯನ್ನು ಒದಗಿಸುತ್ತಾ ಬಂದಿದ್ದು, ಬೇರೆ ಕಟ್ಟಡದಲ್ಲಿ ವ್ಯವಸ್ಥೆ ಮಾಡುವಂತೆ ಅನೇಕ ಬಾರಿ ಅಧಿಕಾ ರಿಗಳಲ್ಲಿ ಮನವಿ ಮಾಡಿದ್ದರೂ ಸಹ ಇದುವರೆಗೂ ಯಾವುದೇ ರೀತಿಯ ಪ್ರಯೋಜನ ಆಗಿರುವುದಿಲ್ಲ ಎಂದು ಆಧಾರ ಕೇಂದ್ರದ ನಿರ್ವಾಹಕ ಚಂದ್ರು ಹೇಳುತ್ತಾರೆ.

error: Content is protected !!