ಮಹಾಸಭಾದಿಂದ ಪ್ರತಿಭಾ ಪುರಸ್ಕಾರಕ್ಕೆ ಕೋಟಿ ರೂ.

ಮಹಾಸಭಾದಿಂದ ಪ್ರತಿಭಾ ಪುರಸ್ಕಾರಕ್ಕೆ ಕೋಟಿ ರೂ.

ಬಸವ ಜಯಂತಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ಎಸ್ಸೆಸ್

ದಾವಣಗೆರೆ, ಮೇ 26- ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದಿಂದ ರಾಜ್ಯಾದ್ಯಂತ ಪ್ರತಿಭಾ ಪುರಸ್ಕಾರಕ್ಕಾಗಿ 1 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಶಾಸಕರೂ ಆದ ಶಾಮನೂರು ಶಿವಶಂಕರಪ್ಪ ಹೇಳಿದರು.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ನಗರದ ಬಿಐಇಟಿ ಕಾಲೇಜು ಆವರಣದಲ್ಲಿನ ಎಸ್.ಎಸ್. ಮಲ್ಲಿಕಾರ್ಜುನ್‌ ಸಾಂಸ್ಕೃತಿಕ ಕೇಂದ್ರ ಭವನದಲ್ಲಿ ಭಾನುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಪಡೆದು ಮತ್ತಷ್ಟು ಉತ್ತಮವಾಗಿ ವಿದ್ಯಾಭ್ಯಾಸ ಪಡೆದು, ಜೀವನ ಉಜ್ವಲಗೊಳಿಸಿಕೊಳ್ಳಲಿ, ನಾಡಿಗೆ ಕೀರ್ತಿ ತರಲಿ ಎಂಬ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ಹೇಳಿದರು.

ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರು ಸಮಾನತೆಗಾಗಿ ಶ್ರಮಿಸಿದರು. ಸಮಾಜವಾದ ಆಧಾರಿತ ವ್ಯವಸ್ಥೆ ಜಾರಿಗೆ ತರುವಲ್ಲಿ ಯಶಸ್ವಿ ಆಗಿದ್ದರು. ಮಹಿಳೆಯರಿಗೆ ಸಮಾನತೆ ನೀಡಿ ಅವರ ಗೌರವ ಹೆಚ್ಚಿಸಿದ ಕೀರ್ತಿ ಬಸವಣ್ಣನವರದ್ದು. ಇಂದಿನ ಸರ್ಕಾರ ಸಹ ಬಸವಣ್ಣನವರ ಮಾರ್ಗದರ್ಶನದಲ್ಲಿಯೇ ನಡೆಯುತ್ತಿದೆ ಎಂದು ಹೇಳಿದರು. ಅಂತಹ ಬಸವಣ್ಣನವರ ಜಯಂತಿಯನ್ನು ಆಚರಿಸುವ ಸೌಭಾಗ್ಯ ನಮ್ಮದಾಗಿದೆ ಎಂದು ಹೇಳಿದರು.

ಬಸವ ಮಾರ್ಗ ಸಂಪಾದಕ ವಿಶ್ವಾರಾಧ್ಯ ಸತ್ಯಂಪೇಟೆ ಅವರು, `ಬಸವತತ್ವ;ಅನುಷ್ಠಾನದ ಮಾದರಿಗಳು’ ಕುರಿತು ಉಪನ್ಯಾಸ ನೀಡುತ್ತಾ, ಬಸವ ತತ್ವವನ್ನು ಅನುಷ್ಠಾನಕ್ಕೆ ತರದೇ ನಾವು ದೇಶವನ್ನು ಗಂಡಾಂತರಕ್ಕೆ ತಳ್ಳುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಸ್ತುತ ದಿನಗಳಲ್ಲಿ ಸಮುದ್ರದ ಆಳಕ್ಕಿಳಿದು ನವಿಲುಗರಿ ನೆಟ್ಟು ಬರುವಂತಹ ಘಟನೆಗಳು ನಮ್ಮ ನಡುವೆ ನಡೆಯುತ್ತಿವೆ ಎಂದರೆ  ನಾವು ಅಜ್ಞಾನಿಗಳೋ ? ವಿಜ್ಞಾನಿಗಳೋ?  ಬಸವಾದಿ ಶರಣರ ಅನುಯಾಯಿಗಳೇ?ಎಂದು  ಯೋಚಿಸಬೇಕಿದೆ ಎಂದರು.

ನಮ್ಮದು ವೈಜ್ಞಾನಿಕ ಧರ್ಮ. ಸ್ವಾಮೀಜಿಗಳ ಅಥವಾ ಮಠಾಧೀಶರ ಧರ್ಮವಲ್ಲ. ಯಾರು ನಮಗೆ ಅರಿವು, ಅನ್ನ, ಶಿಕ್ಷಣ ನೀಡುತ್ತಾರೋ ಅವರೇ ನಮಗೆ ಸ್ವಾಮೀಜಿಗಳು ಎಂದರು. ಬಸವ ತತ್ವ ಆಚರಿಸುವ ಕೆಲವರಷ್ಟೇ ಉತ್ತಮ ಸ್ವಾಮೀಜಿಗಳ ಹೊರತಾಗಿ ಬಹುತೇಕ ಮಠಾಧೀಶರು ರಾಜಕಾರಣಿಗಳಿಗಿಂತ ಹೆಚ್ಚು ಕೆಟ್ಟವರಾಗಿದ್ದಾರೆ. ಅವರಿಗೆ ಇಷ್ಟಲಿಂಗ, ಷಟ್‌ಸ್ಥಲ, ಪಂಚಾಚಾರ, ಲಿಂಗಪೂಜೆಯ ಅರಿವೇ ಇಲ್ಲ ಎಂದರು.

ವೈಭವದ ಪೂಜೆ ಲಿಂಗಾಯತರಿಗೆ ಅಗತ್ಯವಿಲ್ಲ. ಹಣದಿಂದ ನಮ್ಮ ದೇವರನ್ನು ಮೆಚ್ಚಿಸಲು ಸಾಧ್ಯವಿಲ್ಲ. ಬಸವ ತತ್ವ ಆಚರಣೆಯಿಂದ  ಮಾತ್ರ ದೇವರನ್ನು ಮೆಚ್ಚಿಸಲು ಸಾಧ್ಯವಿದೆ. ವೇದ ಶಾಸ್ತ್ರಗಳನ್ನು ತಿರಸ್ಕರಿಸಿ ವಚನ ಪ್ರಜ್ಞೆಯಿಂದ ಮೇಲೇರಿದಾಗ ಮಾತ್ರ ನಾವು ಮನುಷ್ಯರಾಗುತ್ತೇವೆ ಎಂದು ಎಚ್ಚರಿಸಿದರು.

ವೇದ, ಶಾಸ್ತ್ರ, ಆಗಮ, ಪುರಾಣದಲ್ಲಿ ಹೆಣ್ಣು ಭೋಗದ ವ್ಯಕ್ತಿ ಎಂದು ಹೇಳಿದ್ದಾರೆ. ಸುಳ್ಳನ್ನೇ ವಿಜೃಂಭಿಸುವ ಸನಾತನ ಪರಂಪರೆಗೆ ನಾವೆಲ್ಲಾ ಧೈರ್ಯವಾಗಿ ಧಿಕ್ಕಾರ ಹೇಳಬೇಕಿದೆ. ಬಸವಣ್ಣನವರು ತಿಳಿಸಿಕೊಟ್ಟ ಸತ್ಯವನ್ನು ಹೇಳಲು ಆರಂಭಿಸಬೇಕು ಎಂದು ಕರೆ ನೀಡಿದರು.

ನಮ್ಮೊಳಗಿರುವ ಮನುವಾದಿ ಮನಸ್ಸಿನ ಕಾರಣ ಇಂದು ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಇತ್ತೀಚಿನ ಕೆಲ ಘಟನೆಗಳು ಇದಕ್ಕೆ ಕಾರಣ. ಮನುವಾದಿ ಮನಸ್ಸು ಸಾಯಬೇಕಾದರೆ ವಚನ ಸಾಹಿತ್ಯ ಓದಬೇಕು ಎಂದು ತಿಳಿಸಿದರು. ಬಸವಣ್ಣ ಎಂದರೆ ಒಬ್ಬ ವ್ಯಕ್ತಿ ಎಂಬುದೇ ಅನೇಕ ವರ್ಷಗಳ ಕಾಲ ಬಹಳ ಜನರಿಗೆ ಗೊತ್ತಿರಲಿಲ್ಲ. ಬಸವಣ್ಣ ಎತ್ತು ಎಂದು ನಂಬಿದ್ದರು. ಆದರೆ ವರ್ಷಗಳು ಕಳೆದಂತೆ ಬಸವಣ್ಣ ಎತ್ತಲ್ಲ, ಕೆಳಗೆ ಬಿದ್ದ ನಮ್ಮನ್ನೆಲ್ಲಾ ಎತ್ತಿದವರು ಎಂಬುದು ತಿಳಿಯಿತು ಎಂದರು.

ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಶಾಮನೂರು ಶಿವಶಂಕರಪ್ಪನವರು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದಾಗಿನಿಂದ ಮಹಾಸಭೆ ವ್ಯಾಪಕವಾಗಿ ಬೆಳೆದಿದೆ. ಎಸ್ಸೆಸ್ ಅವರು ಸಮಾಜಕ್ಕೆ ಶಕ್ತಿಯಾಗಿದ್ದಾರೆ. ಮಹಾಸಭಾದಿಂದ ಪ್ರತಿವರ್ಷವೂ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಯುಪಿಎಸ್‌ಸಿಯಲ್ಲಿ 101ನೇ ರಾಂಕ್ ಪಡೆದ ಕು.ಸೌಭಾಗ್ಯ ಎಸ್.ಬೀಳಗಿಮಠ, ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಮೊದಲ ರಾಂಕ್ ಪಡೆದ ಕು.ಹೆಚ್.ಜಿ. ಗಾನವಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

2021-22, 2022-23ನೇ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ 24ನೇ ಮಹಾ ಅಧಿವೇಶನದ ಯಶಸ್ಸಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಗೌರವ ಸಮರ್ಪಿಸಲಾಯಿತು.

ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನಿ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರುಗಳಾದ ಅಥಣಿ ವೀರಣ್ಣ, ಎಸ್.ಎಸ್. ಗಣೇಶ್, ಬಿಐಇಟಿ ನಿರ್ದೇಶಕ ವೈ.ವೃಷಭೇಂದ್ರಪ್ಪ ಉಪಸ್ಥಿತರಿದ್ದರು.

ಕಲರವ ಸಾಂಸ್ಕೃತಿಕ ವೇದಿಕೆಯ ಸಿದ್ಧರಾಮ ಕೇಸಾಪುರ ಹಾಗೂ ತಂಡ ಹಾಗೂ ಕದಳಿ ವೇದಿಕೆಯವರು ವಚನ ಗೀತೆ ಹಾಡಿದರು. ಜ್ಞಾನಶ್ರೀ ನಿರೂಪಿಸಿದರು.

error: Content is protected !!