ಪಡೆದ ಜ್ಞಾನವನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಪಡೆದ ಜ್ಞಾನವನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಯುಬಿಡಿಟಿ ಎಂಜಿನಿಯರಿಂಗ್‌ ಕಾಲೇಜಿನ ಚೈತ್ರ 2024ರ ಸಮಾರೋಪದಲ್ಲಿ ರಂಗನಾಥ್ ಭಾರದ್ವಾಜ್

ದಾವಣಗೆರೆ, ಮೇ 26 – ನಗರದ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚೈತ್ರ – 2024ರ ಸಮಾರೋಪ ಸಮಾರಂಭವು ನಿನ್ನೆ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತರೂ, ಟಿವಿ 9 ಕನ್ನಡ ಕರ್ನಾಟಕ ಪ್ರೈವೇಟ್ ಲಿಮಿಟೆಡ್ ಹಿರಿಯ ನಿರ್ಮಾಪಕರೂ ಆದ ರಂಗನಾಥ ಎಸ್. ಭಾರದ್ವಾಜ್ ಅವರು ಮಾತನಾಡಿ, ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಎಲ್ಲಾ ರಂಗಗಳಲ್ಲಿಯೂ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಉದಾಹರಣೆ ಮೂಲಕ ಹೇಳಿದರು.

ಹಿರಿಯ ನಟ ಅನಂತ್ ನಾಗ್ ಅವರನ್ನು ತಾವು ಸಂದರ್ಶನ ಮಾಡಿದ ಸಂದರ್ಭವನ್ನು ಮೆಲುಕು ಹಾಕಿದ ಭಾರದ್ವಾಜ್, ಅನಂತನಾಗ್ ಅವರ ಆದರ್ಶಗಳನ್ನು ಕೊಂಡಾಡಿದರು. 

ರಾಜೇಶ್ವರಿ ಚಟರ್ಜಿ ಅವರು ಭಾರತದ ಮೊದಲ ಮಹಿಳಾ ಇಂಜಿನಿಯರ್ ಆಗಿದ್ದರು. ಮೊದಲ ಮಹಿಳಾ ಸಿವಿಲ್ ಇಂಜಿನಿಯರ್ ಆದ ಶಕುಂತಲಾ ಜೋಶಿ ಅವರನ್ನು 1993ರಲ್ಲಿ ವರ್ಷದ ಇಂಜಿನಿಯರ್ ಎಂದು ಭಾರತ ಸರ್ಕಾರದ ವತಿಯಿಂದ ಸನ್ಮಾನಿಸಲಾಯಿತು. ಇವರು ಭಾರತವು ಸೇರಿದಂತೆ ಜರ್ಮನಿ, ಲಂಡನ್, ಅಮೇರಿಕಾ ದೇಶಗಳಲ್ಲಿ ಅನೇಕ ಡ್ಯಾಮ್ ಗಳನ್ನು ನಿರ್ಮಿಸಿರುವುದನ್ನು ಅವರು ಶ್ಲ್ಯಾಘಿಸಿದರು.

ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಅವರ ಸಾಧನೆಗಳನ್ನು ಸ್ಮರಿಸಿದ ಅವರು, ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ಅವರ ಆದರ್ಶಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.  ಈಗ ನಮ್ಮ ದೇಶದಲ್ಲಿ ಪ್ರತಿವರ್ಷ 15 ಲಕ್ಷ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರ ಬರುತ್ತಿದ್ದಾರೆ. ವಿದ್ಯಾರ್ಥಿಗಳು ತಾವು ಓದುವಾಗ ಪಡೆದ ಜ್ಞಾನವನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

1990ರ ದಶಕದಲ್ಲಿ ನಮ್ಮ ದೇಶದೊಂದಿಗೆ ರಷ್ಯಾ ದೇಶವು ಉತ್ತಮ ಬಾಂಧವ್ಯವನ್ನು ಹೊಂದಿತ್ತು. ರಷ್ಯಾದ ಅಂದಿನ ಅಧ್ಯಕ್ಷ ಗೋರ್ಬಚೇವ್ ಅವರನ್ನು ಭಾರತ ದೇಶವು ಕ್ರಯೋಜನಿಕ್ ಎಂಜಿನ್ ತಂತ್ರಜ್ಞಾನವನ್ನು ನೀಡಲು ಕೋರಿತು. ಆದರೆ ಆಗ ಅಮೆರಿಕಾ ದೇಶವು ಅಡ್ಡಿಪಡಿಸಿತು. ಈ ಪರಿಸ್ಥಿತಿಯಲ್ಲಿ ನಮ್ಮ ದೇಶದ ಅಂದಿನ ಇಸ್ರೋ ಅಧ್ಯಕ್ಷ ಡಾ. ಯು. ಆರ್. ರಾವ್ ಅವರು ನಾವೇ ಏಕೆ ಕ್ರಯೋಜನಿಕ್ ಎಂಜಿನ್ ತಂತ್ರಜ್ಞಾನವನ್ನು ಮಾಡಬಾರದು ಎಂದು ಕೇಳಿ, ಕೇವಲ ಮೂರು ವರ್ಷಗಳಲ್ಲಿ ಈ ತಂತ್ರಜ್ಞಾನವನ್ನು ಮಾಡಿ ಯಶಸ್ವಿಯಾದರು. ಈಗ ಭಾರತದ ಶಕ್ತಿ ಗಗನಯಾನದಲ್ಲಿ ಉಪಗ್ರಹದ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದೆ ಎಂದು ತಿಳಿಸಿದರು. 

ಟಾಟಾ ಕಂಪನಿಯಲ್ಲಿ ಟಾಟಾ ಸುಮೋ ಎಂಬ ವಾಹನದ ಹೆಸರಿನ ಬಗ್ಗೆಯ ಘಟನೆಯನ್ನು ವಿವರಿಸಿದರು. ಸುಮಂತ್ ಗಾವಂಕರ್ ಎನ್ನುವವರು ಟಾಟಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಇವರು ಕೊಟ್ಟ ಸಲಹೆಯನ್ನು ಉಪಯೋಗಿಸಿ ನಿರ್ಮಿಸಿದ್ದರಿಂದ ಟಾಟಾ ಸುಮೋ  ಎಂದು ಆ ವಾಹನಕ್ಕೆ ಹೆಸರಿಡಲಾಯಿತು ಎಂದರು. ಈ ರೀತಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದಲ್ಲಿ ಮುಂದುವರೆಯ ಬೇಕೆಂದು ಸಲಹೆ ನೀಡಿದರು.

ವಿದ್ಯಾರ್ಥಿ ಸಂಘದ ಅಧಿಕಾರಿ ಡಾ. ಎಸ್. ಮಂಜಪ್ಪ ಅವರು ವಿದ್ಯಾರ್ಥಿ ಸಂಘದ ಚಟುವಟಿಕೆಗಳನ್ನು ವಿವರಿಸಿದರು.  ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾ ಚಾರ್ಯ ಡಾ. ಡಿ.ಪಿ. ನಾಗರಾಜಪ್ಪ ಅವರು ಕಾಲೇಜಿನ ಅಭಿವೃದ್ಧಿಯ ಬಗ್ಗೆ ವಿವರಿಸಿದರು.

ವಿದ್ಯಾರ್ಥಿಗಳಾದ ವಿನುತಾ ಪ್ರಾರ್ಥಿಸಿದರು. ದೀಪ  ಸ್ವಾಗತಿಸಿದರು. ಚೈತ್ರ ಕಾರ್ಯಕ್ರಮದ ವಿವರಣೆಯನ್ನು ದಿವ್ಯಶ್ರೀ ನೀಡಿದರು. ನಾಗಲಕ್ಷ್ಮಿ ಮತ್ತು ಭರತ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!