5ಜಿ, ಫೇಸ್‌ಬುಕ್‌, ರೀಲ್ಸ್‌ನಲ್ಲಿ ಕಳೆದುಹೋಗದಿರಿ

5ಜಿ, ಫೇಸ್‌ಬುಕ್‌, ರೀಲ್ಸ್‌ನಲ್ಲಿ ಕಳೆದುಹೋಗದಿರಿ

ಜಿ.ಎಂ. ವಿವಿಯಲ್ಲಿನ ಮಲ್ಲಿಕಾ 24.0 ಸಾಂಸ್ಕೃತಿಕ ಹಬ್ಬದಲ್ಲಿ ಹಾಸ್ಯಗಾರ್ತಿ ಸುಧಾ ಬರಗೂರು

ದಾವಣಗೆರೆ, ಮೇ 24  – ನಗರದ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಮಲ್ಲಿಕಾ 24.0 ಸಾಂಸ್ಕೃತಿಕ ಹಬ್ಬಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಎರಡು ದಿನಗಳ ಅಂತರ ಕಾಲೇಜು ಸ್ಪರ್ಧೆಯ ಉದ್ಘಾಟನಾ ಸಮಾರಂಭ ಜಿ.ಎಂ. ವಿಶ್ವವಿದ್ಯಾಲಯದ ಜಿ. ಮಲ್ಲಿಕಾರ್ಜುನಪ್ಪ ತೆರೆದ ಸಭಾಂಗಣದಲ್ಲಿ ನೆರವೇರಿತು.

ವೇದಿಕೆ ಕಾರ್ಯಕ್ರಮವನ್ನು ಹಾಸ್ಯ ಗಾರ್ತಿ ಸುಧಾ ಬರಗೂರು ಉದ್ಘಾಟಿಸಿ ಮಾತನಾಡಿ, ಕೇವಲ 5ಜಿ, ರೀಲ್ಸ್, ಫೇಸ್‌ಬುಕ್‌ನಲ್ಲಿ ಕಳೆದುಹೋಗದಿರಿ, ಜೀವನದಲ್ಲಿ ಏನನ್ನಾದರೂ ಸಾಧಿಸುವ ಮಹತ್ತರ ಕನಸು ಕಾಣಿ ಎಂದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ನಮ್ಮ ತಂದೆ ಜಿ.ಮಲ್ಲಿಕಾರ್ಜುನಪ್ಪ ಅವರಿಗೆ ಶಿಕ್ಷಣದ
ಬಗ್ಗೆ ಪ್ರೀತಿ ಇದ್ದುದರಿಂದ ಭೀಮಸಮುದ್ರದಲ್ಲಿ ಪ್ರೌಢಶಾಲೆ ತೆರೆದಿದ್ದರು. ನಾನೂ ಸಹ ಬಾಲವಿಕಾಸ ಶಾಲೆಯನ್ನು ಆರಂಭಿಸಿದೆ. ಇಂದು ಜಿಎಂಐಟಿ ಕಾಲೇಜಿನಲ್ಲಿ ಬಂದ ಗಳಿಕೆಯನ್ನು ಇಲ್ಲಿನ ಅಭಿವೃದ್ಧಿಗೆ ಬಿಟ್ಟಿದ್ದೇವೆ, ಮನೆತನಕ್ಕೆ ಬಳಸುತ್ತಿಲ್ಲ ಎಂದು ಹೇಳಿದರು.

ಶ್ರೀಶೈಲ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಜಿ.ಎಂ. ಪ್ರಸನ್ನಕುಮಾರ್ ಮಾತನಾಡಿ, ಕಾಲೇಜು ಹಂತದಲ್ಲಿ ನಾವು ವಿದ್ಯಾರ್ಥಿಗಳಿಗೆ ಏಣಿ ಹತ್ತಿಸಬಹುದು. ಆದರೆ ವಿದ್ಯಾರ್ಥಿ ಜೀವನದಲ್ಲಿ ಓದಿನ ಜತೆಗೆ ಶಿಸ್ತು ಮನನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಎಂ.ಐ.ಟಿ. ಪ್ರಾಂಶುಪಾಲ ಎಂ.ಬಿ. ಸಂಜಯ್ ಪಾಂಡೆ, ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳೂ ಮುಖ್ಯ. ಈ ದಿಸೆಯಲ್ಲಿ ಮಲ್ಲಿಕಾ ಸಾಂಸ್ಕೃತಿಕ ಹಬ್ಬದಲ್ಲಿ 22 ವಿಭಾಗಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಆಡಳಿತಾಧಿಕಾರಿ ವೈ.ಯು. ಸುಭಾಶ್ಚಂದ್ರ, ವಿ.ವಿ. ಕುಲಪತಿ ಶಂಖಪಾಲ್, ಉಪಕುಲಪತಿ ಹೆಚ್.ಡಿ. ಮಹೇಶಪ್ಪ, ರಿಜಿಸ್ಟ್ರಾರ್ ಬಿ.ಎಸ್.  ಸುನಿಲ್ ಕುಮಾರ್, ಜಿ.ಎಂ. ಪಾಲಿಟೆಕ್ನಿಕ್ ಪ್ರಾಂಶುಪಾಲ ಬಿ.ಆರ್. ಶ್ರೀಧರ್, ಜಿ.ಎಂ.ಐ.ಪಿ.ಎಸ್.ಆರ್. ಪ್ರಾಂಶುಪಾಲ ಗಿರೀಶ್ ಬೋಳಕಟ್ಟಿ, ಜಿ.ಎಂ.ಎಸ್. ಅಕಾಡೆಮಿ ಪ್ರಾಂಶುಪಾಲೆ ಶ್ವೇತ ಮರಿಗೌಡರ್, ಜಿ.ಎಂ. ಹಾಲಮ್ಮ ಪಿ.ಯು. ಕಾಲೇಜು ಪ್ರಾಂಶುಪಾಲ ಹೆಚ್.ಎಸ್. ಓಂಕಾರಪ್ಪ, ಜಿ.ಎಂ.ಯು. ವಿದ್ಯಾರ್ಥಿ ವಿಭಾಗದ ಕಾರ್ಯದರ್ಶಿ ಹೆಚ್.ಎಸ್. ಕಿರಣ್ ಕುಮಾರ್, ಸಹ ಪ್ರಾಧ್ಯಾಪಕ ಎಂ. ಸಂತೋಷ್ ಕುಮಾರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

error: Content is protected !!