ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಕಡೆ ಇರಲಿ ಚಿತ್ತ : ಡಾ.ಚಂದ್ರಶೇಖರ್

ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಕಡೆ ಇರಲಿ ಚಿತ್ತ : ಡಾ.ಚಂದ್ರಶೇಖರ್

ದಾವಣಗೆರೆ, ಮೇ 24- ಕೇವಲ ಅಂಕ ಗಳಿಕೆಗೆ ಸೀಮಿತರನ್ನಾಗಿ ಮಾಡದೇ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಕಡೆಗೆ ಪೋಷಕರು ಮತ್ತು ಶಿಕ್ಷಕರು ಗಮನಹರಿಸುವಂತೆ ಹಾವೇರಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಡಾ.ಬಿ.ಪಿ. ಚಂದ್ರಶೇಖರ್ ಕರೆ ನೀಡಿದರು.

ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ `ಎತ್ನಿಕ್ ಡೇ-2024′ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕದೇ, ಕೇವಲ ಅಂಕ ಗಳಿಕೆಗೆ ಸೀಮಿತರನ್ನಾಗಿ ಮಾಡದೇ ಸರ್ವಾಂಗೀಣ ಅಭಿವೃದ್ಧಿಯತ್ತ ಇರಲಿ ಚಿತ್ತ ಎಂದರು.

ಆಧುನಿಕತೆಯ ಭರಾಟೆಯಲ್ಲಿ ಮತ್ತು ಒತ್ತಡದ ಬದುಕಿನಲ್ಲಿ ಪೋಷಕರು ಮೈಮರೆಯದೇ, ಮಕ್ಕಳ ಓದಿನ ಕಡೆ ಹೆಚ್ಚು ಗಮನಹರಿಸಬೇಕಾಗಿದೆ. ಮಕ್ಕಳಲ್ಲಿ ಯಾವುದೇ ರೀತಿಯ ಭಯವನ್ನು ಹುಟ್ಟಿಸದೇ, ಪ್ರತಿ ಹಂತದಲ್ಲೂ ಅವರಿಗೆ ಧೈರ್ಯ ತುಂಬುವ ಜೊತೆಗೆ ಉತ್ತೇಜನ ನೀಡುವಂತೆ ಮನವಿ ಮಾಡಿದರು.

ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದ್ದು, ಭಾರತೀಯ ಪರಂಪರೆ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಎತ್ನಿಕ್ ಡೇ ಕಾರ್ಯಕ್ರಮವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ. ಎತ್ನಿಕ್ ಡೇ ಎಂದರೆ ಕೇವಲ ಕಾರು, ಬೈಕ್‌ನಲ್ಲಿ ಆಧುನಿಕ ಉಡುಪುಗಳನ್ನು ಧರಿಸಿ ಬರುವುದಲ್ಲ. ಬದಲಿಗೆ ಗ್ರಾಮೀಣಾ ಸೊಗಡಿನ ಉಡುಪು ಧರಿಸಿ, ಎತ್ತಿನ ಬಂಡಿ, ಟ್ರ್ಯಾಕ್ಟರ್ ಗಳಲ್ಲಿ ಬಂದು ಮೆರಗು ಹೆಚ್ಚಿಸಬೇಕೆಂದರು.

ಭಾರತೀಯ ಪರಂಪರೆ, ಆಚರ ವಿಚಾರಗಳು, ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ, ಬೆಳೆಸುವಲ್ಲಿ ಇಂತಹ ಎತ್ನಿಕ್ ಡೇ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜನಪದ ಕಲೆಗಳನ್ನು ಆಸ್ವಾದಿಸಬೇಕೆಂದು ಸಲಹೆ ನೀಡಿದರು.

ಭಾರತ ಸಾವಿರಾರು ವರ್ಷಗಳ ಕಾಲ ಬ್ರಿಟೀಷರ ಆಳ್ವಿಕೆಯಲ್ಲಿದ್ದರೂ ಸಹ ಎಲ್ಲಿಯೂ ಕೂಡ ನಮ್ಮ ಸಂಸ್ಕೃತಿಯನ್ನು ಬಿಟ್ಟು ಕೊಟ್ಟಿಲ್ಲ. ಭಾರತ ಯಾವ ದೇಶದ ಮೇಲೂ ಆಕ್ರಮಣ ಮಾಡಿಲ್ಲ. ಬದಲಿಗೆ ಪ್ರವಚನಗಳ, ಉತ್ತಮ ಸಂದೇಶಗಳ ಮೂಲಕ ತಿದ್ದುವ ಕೆಲಸ ಮಾಡುತ್ತಾ ಬಂದಿದೆ ಎಂದರು.

ಮೆರಗು ತಂದ ಬೆಡಗಿಯರು: ಯುವತಿಯರು ಬಣ್ಣ ಬಣ್ಣದ ಸೀರೆ, ಲಂಗ ದಾವಣಿಯನ್ನುಟ್ಟು ಬಂದಿದ್ದರೆ, ಯುವಕರು ಬಿಳಿ ಪಂಚೆ, ಬಣ್ಣ ಬಣ್ಣದ ಅಂಗಿ, ಹೆಗಲ ಮೇಲೆ ಶಲ್ಯ ಹಾಕಿಕೊಂಡು ಬಂದು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬೆಂಗಳೂರಿನ ಎಸ್.ಜಿ. ಮಲ್ಲೇಶ್ ಕುಮಾರ್ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್‌ ಸದಸ್ಯರಾದ ರೂಪಾ ಮಂಜುನಾಥ್, ವಾಣಿಜ್ಯೋ ದ್ಯಮಿ ಮೀರಾ ರಘು, ಪ್ರಾಧ್ಯಾಪಕರೂ, ಡೀನ್ ಆದ ಡಾ. ಎಸ್. ಮಂಜಪ್ಪ, ಪ್ರಾಧ್ಯಾಪಕ ಡಾ. ಎಸ್.ಬಿ. ಮಲ್ಲೂರು ಸೇರಿದಂತೆ ಇತರರು ಭಾಗವಹಿಸಿದ್ದರು.

ರಂಗೋಲಿ ಸ್ಪರ್ಧೆಯಲ್ಲಿ ಎಂ.ಎ. ಚೈತ್ರಾ, ಚಿತ್ರಕಲೆಯಲ್ಲಿ ಆಕಾಂಕ್ಷ, ಸೋಲೋ ನೃತ್ಯದಲ್ಲಿ ಎನ್. ನೇಹಾ, ಮಿಮಿಕ್ರಿಯಲ್ಲಿ ಎಸ್.ಆರ್.ಶಮಂತ್, ಮೋನೋ ಆಕ್ಟಿಂಗ್‌ನಲ್ಲಿ ಎಂ.ಜಿ. ವೃಷಭ್, ಮೈಮ್ ಹಾಗೂ ಸ್ಕಿಟ್‌ನಲ್ಲಿ ಹೆಚ್.ಎಂ. ಗುರುಮೂರ್ತಿ ಮತ್ತು ತಂಡದವರು, ಮ್ಯಾಡ್ ಅಂಡ್ ಏಡ್ಸ್‌ನಲ್ಲಿ ಎಂ.ಭರತ್ ಕುಮಾರ್ ಮತ್ತು ತಂಡ, ಗುಂಪು ಗಾಯನದಲ್ಲಿ ಎಂ.ಎ. ಚೈತ್ತ ಮತ್ತು ತಂಡದವರು ಪ್ರಶಸ್ತಿ ಪಡೆದುಕೊಂಡರು.

error: Content is protected !!