ಮಳೆಯಿಲ್ಲ, ಭದ್ರಾ ಕಾಲುವೆಯಲ್ಲಿ ನೀರಿಲ್ಲ ಎಂದು ಕಂಗಾಲಾಗಿದ್ದ ರೈತರ ನಡುವೆ ಹೊಳೆಸಿರಿಗೆರೆಯ ಯುವ ರೈತ ದಂಪತಿ ಬಟನ್ ರೋಸ್ ಕೃಷಿಯಿಂದ ಖುಷಿ ಕಂಡುಕೊಂಡಿದ್ದಾರೆ. ಯುವ ರೈತ ದಂಪತಿ ನಾವೀನ್ಯ ಆವಿಷ್ಕಾರ ಮಾಡಿ ಸಂತೃಪ್ತಿಯಿಂದ ಬೀಗುತ್ತಿದ್ದಾರೆ.
ಹೊಳೆಸಿರಿಗೆರೆ ಗ್ರಾಮದ ಐಗೂರು ಶಿವಕುಮಾರ್ ಮತ್ತು ರೂಪಾ ದಂಪತಿ ತಮ್ಮ 30 ಗುಂಟೆ ಜಮೀನಿನಲ್ಲಿ ಅಡಿಕೆ ಸಸಿಗಳನ್ನು ನಾಟಿ ಮಾಡಿ ಎರಡೂವರೆ ವರ್ಷಗಳಾಗಿವೆ.
ಅಡಿಕೆ ಸಸಿಗಳ ಉದ್ದ ಸಾಲಿನಲ್ಲಿ ಒಂದು ಅಡಿಕೆ ಗಿಡದಿಂದ ಮತ್ತೊಂದು ಅಡಿಕೆ ಗಿಡದ ನಡುವೆ ಎರಡರಂತೆ ಬಟನ್ ರೋಸ್ (ಮೇರಾ ಬುಲ್ ರೋಸ್) ನಾಟಿ ಮಾಡಿ ಬೆಳೆಸಿದ್ದಾರೆ.
ಇದು ನಾಟಿ ಮಾಡಿದ ಎರಡು ತಿಂಗಳಿಗೆ ಹೂ ಬಿಡಲು ಪ್ರಾರಂಭಿಸಿತು. ಮುಕ್ಕಾಲು ಎಕರೆಗೆ ವಾರ್ಷಿಕ ಲಕ್ಷಕ್ಕೂ ಅಧಿಕ ಲಾಭವನ್ನು ನೀಡುತ್ತಿದ್ದು, ಲಾಭದಾಯಕ ಕೃಷಿಯಾಗಿದೆ. ದಿನವೊಂದಕ್ಕೆ ಕನಿಷ್ಠ 15 ರಿಂದ 20 ಕೆಜಿ ಹೂವು ಸಿಗುತ್ತದೆ.
ಮಾರುಕಟ್ಟೆಯಲ್ಲಿ ಕೆಜಿಗೆ 80 ರಿಂದ 100 ರೂ.ವರೆಗೆ ದರ ಇರುತ್ತದೆ. ಹಬ್ಬ ಹರಿದಿನಗಳಲ್ಲಿ ಹೆಚ್ಚಿನ ದರ ಸಿಗುತ್ತದೆ ಎಂದು ಯುವ ರೈತ ಮಹಿಳೆ ರೂಪಾ ತಿಳಿಸಿದರು.
ಬಟನ್ ರೋಸ್ ಎಂಬ ಗುಲಾಬಿ ತಳಿಯ ಗುಲಾಬಿ ಹೂಗಿಂತಲು ಸಣ್ಣದಾಗಿರುವ ಬಟನ್ ರೋಸ್ ನೋಡಲು ಆಕರ್ಷಕವಾಗಿವೆ. ಜನರು ಎಲ್ಲಾ ಸಭೆ- ಸಮಾರಂಭಗಳಿಗೆ ಅಲಂಕಾರಕ್ಕೆ ಈ ಹೂವುಗಳನ್ನು ಹೆಚ್ಚು ಖರೀದಿಸುತ್ತಾರೆ. ಹಾಗಾಗಿ ಈ ಬಟನ್ ರೋಸ್‌ಗೆ ಎಲ್ಲಾ ಕಡೆ ಬೇಡಿಕೆ ತುಂಬಾ ಇದೆ. ಪ್ರಮುಖವಾಗಿ ದಾವಣಗೆರೆ ಮಾರುಕಟ್ಟೆಯಲ್ಲಿ ಈ ಹೂವಿಗೆ ಹೆಚ್ಚಿನ ಬೇಡಿಕೆ ಇದ್ದು, ಮುಕ್ಕಾಲು ಎಕರೆಯಲ್ಲಿ ನಮ್ಮ ನಿರೀಕ್ಷೆ ಕನಿಷ್ಠ ಎರಡು ಲಕ್ಷ ರೂ. ಎನ್ನುತ್ತಾರೆ ಈ ಯುವ ದಂಪತಿ.
ಕಷ್ಟ ಪಟ್ಟು ದುಡಿದರೆ ಎಲ್ಲವೂ ಸಾಧ್ಯ. ಕಾಲಕ್ಕೆ ತಕ್ಕಂತೆ, ಮಾರುಕಟ್ಟೆಗೆ ತಕ್ಕಂತೆ ಬೆಳೆಗಳನ್ನು ಬೆಳೆದರೆ ಅದು ನಮಗೆ ಲಾಭ ನೀಡುತ್ತದೆ. ಹೂವುಗಳಿಗೆ ಎಲ್ಲಾ ಕಾಲಕ್ಕೂ ಬೇಡಿಕೆ ಇದೆ. ಹೀಗಾಗಿ ನಾನು ಬಟನ್ ರೋಸ್ ಕೃಷಿಗೆ ಮುಂದಾದೆ. ಈಗ ಅದೇ ಕೃಷಿ ಖುಷಿ ನೀಡಿದೆ.
– ಐಗೂರು ಶಿವಕುಮಾರ್, ಮಿಶ್ರ ಬೆಳೆಯ ರೈತ
ಇವರ ಕೃಷಿ ಉಳಿದ ರೈತರಿಗೆ ಮಾದರಿ. ತೋಟವನ್ನು ಸುಂದರ ವನವಾಗಿಸಿದ್ದಾರೆ. ಅಡಿಕೆ ಗಿಡಗಳಿಗೆ ರಕ್ಷಣೆ ಜೊತೆಗೆ ಲಾಭದಾಯಕ ಮಿಶ್ರ ಬೆಳೆ ಬೆಳೆಯುತ್ತಿದ್ದಾರೆ. ರೈತರು ಮಿಶ್ರ ಬೆಳೆಯ ಕಡೆಗೆ ಹೆಚ್ಚು ಗಮನ ಹರಿಸಿದಲ್ಲಿ ಜೀವನ ಸುಗಮತೆ ಹೊಂದುತ್ತದೆ.
– ಕುಂದೂರು ಮಂಜಪ್ಪ, ಪ್ರಗತಿಪರ ಕೃಷಿಕ, ಹೊಳೆ ಸಿರಿಗೆರೆ.
ಬೆಳೆಯುವ ವಿಧಾನ : ತೋಟಕ್ಕೆ ಟ್ರ್ಯಾಕ್ಟರ್‌ನಿಂದ ಮೂರು ಲೋಡ್ ಕೊಟ್ಟಿಗೆ ಗೊಬ್ಬರ ಹಾಕಿದ್ದೇವೆ. ಸುಮಾರು 1820 ಬಟನ್ ರೋಸ್ ಸಸಿಗಳನ್ನು ನಾಟಿ ಮಾಡಿದ್ದು, ಹದಿನೈದು ದಿನಗಳ ನಂತರ ಗಿಡಕ್ಕೆ ಎಲೆ ರೋಗ ಹಾಗೂ ನುಸಿ ರೋಗ ಬರುವ ಸಂಭವ ಹೆಚ್ಚಾಗಿರುತ್ತದೆ. ಹೀಗಾಗಿ ಹದಿನೈದು ದಿನಕ್ಕೊಮ್ಮೆ ಸಾಫ್ ಮತ್ತು ಮೊನೊಕ್ರೊಟೋಫಾಸ್ ದ್ರಾವಣವನ್ನು ಗಿಡಗಳಿಗೆ ಸಿಂಪಡಿಸಬೇಕು. ಇದಕ್ಕೆಲ್ಲಾ ಕನಿಷ್ಠ 1200 ರೂ. ಖರ್ಚು ಬರುತ್ತದೆ.
ನಾವು ಇದುವರೆಗೆ 20 ಸಾವಿರ ರೂ.ಗಳನ್ನು ಖರ್ಚು ಮಾಡಿದ್ದೇವೆ. ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಲಾಭವನ್ನು ಪಡೆದಿದ್ದೇವೆ. ಇನ್ನು ಎರಡು ವರ್ಷ ಇದರ ಲಾಭ ಸಿಗುತ್ತಲೇ ಇರುತ್ತದೆ.
ತೋಟಕ್ಕೆ ಹನಿ ನೀರಾವರಿ ಮೂಲಕ ಅಡಿಕೆ ಗಿಡಗಳಿಗೆ ನೀರುಣಿಸುತ್ತೇವೆ. ಹನಿ ನೀರಾವರಿ ತೇವಾಂಶದಿಂದಲೇ ಬಟನ್ ರೋಸ್ ಬೆಳೆಯುತ್ತವೆ ಎಂದು ರೈತ ಐಗೂರು ಶಿವಕುಮಾರ್ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಈ ಮಿಶ್ರ ಕೃಷಿಯಿಂದ ಇನ್ನೊಂದು ಲಾಭವಿದೆ. ಬಿಸಿಲಿನ ಧಗೆ ಅಡಿಕೆ ಗಿಡಗಳಿಗೆ ತಾಗುವುದಿಲ್ಲ. ಬಟನ್ ರೋಸ್ ಮತ್ತು ಟೊಮ್ಯಾಟೋ ಗಿಡಗಳು ಇರುವುದರಿಂದ ಭೂಮಿಯ ತೇವಾಂಶವನ್ನು ಹಿಡಿದಿಡುತ್ತದೆ. ಜೊತೆಗೆ ಹುಲ್ಲು ಬೆಳೆಯುವುದಿಲ್ಲ. ಬಟನ್ ರೋಸ್ ಎಲೆಗಳು, ಟೊಮ್ಯಾಟೋ ಎಲೆಗಳು ಉದುರಿ ಅಲ್ಲೇ ಕೊಳೆಯುವುದರಿಂದ ಭೂಮಿ ಫಲವತ್ತತೆ ಹೊಂದುತ್ತದೆ.
ಅಡಿಕೆಯ ಅಗಲ ಸಾಲುಗಳ ನಡುವೆ ಭಜರಂಗಿ ತಳಿಯ ಟೊಮ್ಯಾಟೋ ಸಸಿಗಳನ್ನು ನಾಟಿ ಮಾಡಿದ್ದಾರೆ. ಅದೂ ಸಹ ಕಾಯಿ ಬಿಡುವ ಹಂತಕ್ಕೆ ಬಂದಿದೆ. ಅದರ ಲಾಭದ ನಿರೀಕ್ಷೆಯೂ ಇದೆ. ಅಡಿಕೆ ಗಿಡಗಳಿಗೆ ಬಿಸಿಲು ತಾಕದಿರುವಂತೆ ಕಾಂಡಗಳಿಗೆ ಶೆಡ್ ನೆಟ್ ಅಥವಾ ಸುಣ್ಣ ಹಚ್ಚುವ ಖರ್ಚು ಬರುವುದಿಲ್ಲ. ಇದರಿಂದಾಗಿ ಅಡಿಕೆ ಗಿಡಗಳು ಹಚ್ಚ ಹಸಿರಾಗಿ ಕಂಗೊಳಿಸುತ್ತಿವೆ.
ತೋಟ ಸುಂದರ ವನದಂತಿದ್ದು, ಅರಳಿದ ಬಟನ್ ರೋಸ್‌ಗಳು ಕಣ್ಮನ ಸೆಳೆಯುತ್ತವೆ.
– ಜಿಗಳಿ ಪ್ರಕಾಶ್