ಜಿಲ್ಲೆಯ ಕೃಷಿಗೂ ಬಂದ ನಮೋ ಡ್ರೋನ್ ದೀದಿ

ಜಿಲ್ಲೆಯ ಕೃಷಿಗೂ ಬಂದ ನಮೋ ಡ್ರೋನ್ ದೀದಿ

ದಾವಣಗೆರೆ, ಮೇ 20 -ಕೃಷಿ ವಲಯಕ್ಕೆ ಅಗತ್ಯವಿರುವ ಡ್ರೋನ್ ಸೇವೆಯನ್ನು ಸ್ವಸಹಾಯ ಸಂಘಗಳ ಮೂಲಕ ನೀಡುವ ನಮೋ ಡ್ರೋನ್ ದೀದಿ ಯೋಜನೆ ಈಗ ಜಿಲ್ಲೆಗೂ ಕಾಲಿರಿಸಿದೆ.

ಆವರಗೊಳ್ಳದ ಶ್ರೀ ವೆಂಕಟೇಶ್ವರ ಸ್ವಸಹಾಯ ಸಂಘಕ್ಕೆ ಈ ಯೋಜನೆಯ ಮೂಲಕ ಡ್ರೋನ್ ಒದಗಿಸಲಾಗಿದೆ. ಸಂಘದ ಪಿ. ಸುಜಾತ ಅವರು ಡ್ರೋನ್ ಪೈಲಟ್ ಆಗಿದ್ದಾರೆ.

ಬಾಪೂಜಿ ಬಿ – ಸ್ಕೂಲ್ಸ್‌ನಲ್ಲಿ ಬಿ.ಐ.ಹೆಚ್.ಟಿ. ವತಿಯಿಂದ ಆಯೋಜಿಸಲಾಗಿದ್ದ ಕೃತಕ ಬುದ್ಧಿವಂತಿಕೆ ಕುರಿತ ವಿಚಾರ ಸಂಕಿರಣದ ವೇಳೆ ಸುಜಾತ ಅವರು `ನಮೋ ಡ್ರೋನ್ ದೀದಿ’ ಯೋಜನೆಯ ಡ್ರೋನ್ ಪ್ರಾತ್ಯಕ್ಷಿಕೆ ನೀಡಿದರು.

ಬೆಳೆಗಳ ವೀಕ್ಷಣೆ, ರಸಗೊಬ್ಬರ ಸಿಂಪಡಣೆ ಸೇರಿದಂತೆ ಹಲವು ಕೃಷಿ ಉದ್ದೇಶಗಳಿಗೆ ಈ ಡ್ರೋನ್‌ ಬಳಕೆಯಾಗಲಿದೆ ಎಂದು ಸುಜಾತ ಹೇಳಿದರು.

ಸ್ವಸಹಾಯ ಸಂಘಕ್ಕೆ ಸಾಲದ ಮೂಲಕ ಡ್ರೋನ್‌ಗಳನ್ನು ವಿತರಿಸಲಾಗಿದೆ. ಈ ಡ್ರೋನ್ ಬಳಕೆ ಕುರಿತು ಮೈಸೂರಿನಲ್ಲಿ ಒಂದು ಸುತ್ತಿನ ತರಬೇತಿ ನೀಡಲಾಗಿದೆ. ಇನ್ನೊಂದು ಸುತ್ತಿನ ತರಬೇತಿ ನಂತರ ಡ್ರೋನ್ ಅನ್ನು ಕೃಷಿ ಉದ್ದೇಶಕ್ಕೆ ಬಳಸಲು ಸಾಧ್ಯವಾಗಲಿದೆ ಎಂದವರು ತಿಳಿಸಿದರು.

ಈ ಡ್ರೋನ್ 11 ಲೀಟರ್‌ಗಳಷ್ಟು ದ್ರವ ಗೊಬ್ಬರ ಇಲ್ಲವೇ ಕ್ರಿಮಿನಾಶಕವನ್ನು ಸಂಪಡಿಸುವ ಸಾಮರ್ಥ್ಯ ಹೊಂದಿದೆ. ಏಳು ನಿಮಿಷಗಳಲ್ಲೇ ಒಂದು ಎಕರೆ ವ್ಯಾಪ್ತಿಗೆ ಸಿಂಪಡಣೆ ಸಾಧ್ಯ. ಅಡಿಕೆ ಮರಗಳಿಗೆ ಔಷಧ ಸಿಂಪಡಿಸಲೂ ಡ್ರೋನ್ ಉಪಯುಕ್ತವಾಗಿದೆ ಎಂದು ಸುಜಾತ ಹೇಳಿದರು.

ನಾನು ಎಸ್.ಎಸ್.ಎಲ್.ಸಿ. ವರೆಗೆ ವ್ಯಾಸಂಗ ಮಾಡಿದ್ದೇನೆ. ಮೈಸೂರಿನಲ್ಲಿ ತರಬೇತಿ ನೀಡಿದವರು ಇಂಗ್ಲಿಷ್ ಹಾಗೂ ತಮಿಳು ಬಳಸುತ್ತಿದ್ದರು. ಹೀಗಾಗಿ ಸ್ವಲ್ಪ ಕಷ್ಟವಾಯಿತು. ನಂತರದಲ್ಲಿ ಕನ್ನಡದಲ್ಲೇ ಮಾಹಿತಿ ನೀಡಲಾಗುತ್ತಿದೆ. ಡ್ರೋನ್ ಬಳಸುವ ವಿಶ್ವಾಸ ಬಂದಿದೆ ಎಂದು ಡ್ರೋನ್ ಪೈಲಟ್ ಸುಜಾತ ತಿಳಿಸಿದರು.

ಡ್ರೋನ್‌ಗೆ ಬಳಸುವ ಬ್ಯಾಟರಿ ಹತ್ತು ನಿಮಿಷಗಳ ಕಾಲ ಕೆಲಸ ಮಾಡುತ್ತದೆ. ನಂತರ ಮತ್ತೆ ಬ್ಯಾಟರಿ ರೀಚಾರ್ಜ್ ಮಾಡಬೇಕು. ಹೀಗಾಗಿ ಹಲವು ಸೆಟ್‌ಗಳ ಬ್ಯಾಟರಿಗಳನ್ನು ಕಾಯ್ದಿರಿಸಿಕೊಳ್ಳಬೇಕು. ಆರಂಭದಲ್ಲಿ ಚಾರ್ಜ್ ಮಾಡುವುದೇ ಸಮಸ್ಯೆಯಾಗಿತ್ತು. ಈಗ ಅದಕ್ಕೆ ಪರಿಹಾರ ಕಂಡುಕೊಂಡಿದ್ದೇವೆ ಎಂದವರು ತಮ್ಮ ಅನುಭವ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಯಾಗರ ಕಂಪನಿಯ ಸೆಂಥಿಲ್ ಕುಮಾರ್, ಕೃತಕ ಬುದ್ಧಿವಂತಿಕೆ (ಎ.ಐ.) ಹಾಗೂ ಐ.ಒ.ಟಿ. (ಇಂಟರ್‌ನೆಟ್ ಆಫ್ ಥಿಂಗ್ಸ್) ತಂತ್ರಜ್ಞಾನ ದಿಂದ ಹೊಲಗಳಲ್ಲಿ ನೀರಾವರಿ ಬಳಕೆ ಸುಲಭ ವಾಗಲಿದೆ. ರೈತರು ಎಲ್ಲೇ ಇದ್ದರೂ ಮೊಬೈಲ್ ಮೂಲಕ ನೀರಿನ ಹರಿವು ಹಾಗೂ ಗೊಬ್ಬರದ ಪೂರೈಕೆ ನಿಯಂತ್ರಿಸಬಹುದು ಎಂದರು.

ಕೃತಕ ಬುದ್ಧಿವಂತಿಕೆ ನೀರಾವರಿ ವ್ಯವಸ್ಥೆ ಸಂಪೂರ್ಣ ಯಾಂತ್ರೀಕೃತವಾಗಿದೆ. ಇದರಲ್ಲಿ ಮಾನವ ಮಧ್ಯಪ್ರವೇಶದ ಅಗತ್ಯ ಬರುವುದಿಲ್ಲ. ಮೊಬೈಲ್ ಮೂಲಕ ರೈತರು ಎಲ್ಲೇ ಇದ್ದರೂ ಹೊಲಗಳಲ್ಲಿನ ನೀರಿನ ಹರಿವಿನ ಮೇಲೆ ನಿಯಂತ್ರಣ ಹೊಂದಿರಬಹುದು ಎಂದವರು ವಿವರಿಸಿದರು.

error: Content is protected !!