ಜನನ – ಮರಣ ಪತ್ರಗಳ ವಿತರಣೆಗೆ ಆನ್‌ಲೈನ್ ಏಕಿಲ್ಲ ?

ಮಾನ್ಯರೇ,

ಜನನ ಹಾಗೂ ಮರಣ ಪ್ರಮಾಣ ಪತ್ರಗಳಿಗೆ ಆನ್‌ಲೈನ್ ಮೂಲಕ ಅರ್ಜಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಜನರಿಗೆ ಅನುಕೂಲಕರ.

ಆದರೆ, ಈ ಪ್ರಮಾಣ ಪತ್ರಗಳನ್ನು ಪಡೆಯಲು ಇಲ್ಲವೇ ತಿದ್ದುಪಡಿ ಮಾಡಿಸಿಕೊಳ್ಳಲು ಸಂಬಂಧಿಸಿದ ಪಾಲಿಕೆ ಇಲ್ಲವೇ ಸರ್ಕಾರಿ ಸಂಸ್ಥೆಗಳ ಬಳಿಯೇ ಬರಬೇಕು ಎಂಬ ನಿಯಮ ಎಷ್ಟು ಸರಿ?

ಜನನ ಹಾಗೂ ಮರಣ ಪ್ರಮಾಣ ಪತ್ರಗಳಿಗೆ ಆನ್‌ಲೈನ್ ಮೂಲಕ ಪ್ರಮಾಣ ಪತ್ರ ಪಡೆಯಲಾಗುತ್ತದೆ. ಆದರೆ, ಅವುಗಳ ದೃಢೀಕೃತ ಪ್ರತಿಗಳನ್ನು ಪಡೆಯಲು ಪಾಲಿಕೆಯ ಆವರಣದಲ್ಲಿರುವ ಕಚೇರಿಗೆ ತೆರಳಬೇಕು.

ಈ ಪ್ರಮಾಣ ಪತ್ರಗಳ ದೃಢೀಕೃತ ಪ್ರತಿಗಳಿಗೆ ಎಷ್ಟು ದರ ಎಂಬುದನ್ನು ಕೌಂಟರ್‌ ಹೊರಗೆ ನಮೂದಿಸಿಲ್ಲ. ಅಲ್ಲದೇ, ದೃಢೀಕೃತ ಪ್ರತಿಗಳಿಗೆ ನೀಡುವ ಹಣಕ್ಕೆ ರಸೀದಿ ಪಡೆಯುವ ಪರಿಜ್ಞಾನವೂ ನಮ್ಮ ಜನರಿಗಿಲ್ಲ.

ನಾನು ಗಮನಿಸಿದ ಹಾಗೆ, ಈ ಪ್ರಮಾಣ ಪತ್ರಗಳ ಪ್ರತಿಗಳಿಗೆ ಪಡೆಯುವ ಹಣಕ್ಕೆ ರಸೀದಿಯನ್ನು ಕೊಡುವುದೂ ಇಲ್ಲ. 

ಎಲ್ಲವೂ ಆನ್‌ಲೈನ್‌ ಆಗಿರುವಾಗ, ದೃಢೀಕೃತ ಪ್ರತಿಗಳನ್ನು ಪಡೆಯಲು ಏಕೆ ಅಲೆದಾಡಬೇಕು? ಇವುಗಳು ಆನ್‌ಲೈನ್‌ ಮೂಲಕ ಜನರಿಗೆ ಪಿಡಿಎಫ್ ರೂಪದಲ್ಲಿ ಸಿಗುವಂತೆ ಮಾಡಬೇಕು. ಇದರಿಂದ ಜನರಿಗೆ ಅನುಕೂಲವಾಗಲಿದೆ. 


– ಗುರುನಾಥ್ ಕಾಮತ್‌, ದಾವಣಗೆರೆ.

error: Content is protected !!