ರಾಮಕೃಷ್ಣ ಹೆಗಡೆ ನಗರದ ಜನರಿಗೆ ಮತ್ತೆ ಸಂಕಷ್ಟ

ರಾಮಕೃಷ್ಣ ಹೆಗಡೆ ನಗರದ  ಜನರಿಗೆ ಮತ್ತೆ ಸಂಕಷ್ಟ

ಮಳೆ – ಗಾಳಿಗೆ ಕುಸಿದ ಶೆಡ್‌ಗಳು, ಹೆಗಡೆ ನಗರದಲ್ಲೇ ಇರುತ್ತೇವೆ ಎಂದು ಪಟ್ಟು

ರಿಂಗ್ ರಸ್ತೆ ಜಾಗದಲ್ಲಿ ಶೆಡ್ ಕಟ್ಟಿಕೊಳ್ಳಲು ಸಿದ್ಧತೆ

ದಾವಣಗೆರೆ, ಮೇ 17 – ರಾಮಕೃಷ್ಣ ಹೆಗಡೆ ನಗರದಿಂದ ಸ್ಥಳಾಂತರಗೊಂಡವರ ತಾತ್ಕಾಲಿಕ ಮನೆಗಳು ಮಳೆಯಿಂದ ನೆಲಕಚ್ಚಿದ್ದು, ಜನರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಇದರಿಂದ ಆಕ್ರೋಶಗೊಂಡ ಜನರು, ನಮಗೆ ಶಾಶ್ವತವಾದ ಮನೆ ಕಟ್ಟಿಕೊಡುವವರೆಗೂ ರಾಮಕೃಷ್ಣ ಹೆಗಡೆ ನಗರದಲ್ಲೇ ಉಳಿದುಕೊಳ್ಳುವುದಾಗಿ ಹೇಳಿ, ಅಲ್ಲೇ ತಾತ್ಕಾಲಿಕ ಶೆಡ್ ಕಟ್ಟಿಕೊಳ್ಳಲು ಆರಂಭಿಸಿದ್ದಾರೆ.

ರಿಂಗ್ ರಸ್ತೆ ನಿರ್ಮಾಣಕ್ಕಾಗಿ ರಾಮಕೃಷ್ಣ ಹೆಗಡೆ ನಗರದಿಂದ ದೊಡ್ಡ ಬಾತಿ ಬಳಿ ಜನರನ್ನು ಸ್ಥಳಾಂತರಗೊಳಿಸಲಾಗಿತ್ತು. ಆದರೆ, ತಾತ್ಕಾಲಿಕ ಶೆಡ್‌ಗಳು ಮಳೆ ಹಾಗೂ ಗಾಳಿಗೆ ಸಿಲುಕಿ  ಹಾನಿಗೀಡಾಗಿವೆ. ಇದರಿಂದಾಗಿ ಸುಮಾರು 450 ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಈಗ ಅವರು, ರಿಂಗ್ ರಸ್ತೆಗೆ ಸೇರಿದ ಜಾಗದಲ್ಲೇ ಶೆಡ್ ಕಟ್ಟಿಕೊಳ್ಳುವ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಮೂರ್ನಾಲ್ಕು ತಿಂಗಳಲ್ಲೇ ಶಾಶ್ವತ ಸೂರು ಕಲ್ಪಿಸುವುದಾಗಿ ನಮಗೆ ಹೇಳಿ ಊರ ಹೊರಗೆ ಕಳಿಸಿದ್ದರು. ಆದರೆ, ಏಳು ತಿಂಗಳಾದರೂ ಇನ್ನೂ ವಸತಿ ವ್ಯವಸ್ಥೆಯಾಗಿಲ್ಲ. ತಾತ್ಕಾಲಿಕ ಶೆಡ್‌ಗಳು ಮಳೆ – ಗಾಳಿಗೆ ಮುರಿದು ಬಿದ್ದಿವೆ. ಜೀವ ಕೈಯಲ್ಲಿ ಹಿಡಿದು ಬದುಕುವ ಪರಿಸ್ಥಿತಿ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರ ಜೀವನ ಬೀದಿಗೆ ಬಿದ್ದಿದೆ. ಆದರೂ, ಜನಪ್ರತಿನಿಧಿಗಳು ಹಾಗೂ ಅಲ್ಪಸಂಖ್ಯಾತ ಸಮಾಜದ ಮುಖಂಡರು ನಮ್ಮ ಕಡೆ ಗಮನ ಹರಿಸು ತ್ತಿಲ್ಲ ಎಂಬ ಆಕ್ರೋಶವೂ ಜನರಿಂದ ವ್ಯಕ್ತವಾಯಿತು.

ನಿನ್ನೆ ಉಂಟಾದ ಅವಘಡದಲ್ಲಿ ನಾಲ್ಕೈದು ಜನ ಗಾಯಗೊಂಡಿದ್ದಾರೆ. ಶಾಶ್ವತ ಮನೆಗಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಾವು ಮೊದಲಿದ್ದ ಜಾಗದಲ್ಲೇ ಬಂದಿರುತ್ತೇವೆ ಎಂದು ಎಸ್.ಕೆ. ಸಲಾಂ ಹೇಳಿದ್ದಾರೆ.

ತಾತ್ಕಾಲಿಕ ಶೆಡ್‌ಗಳು ಕುಸಿದು ಜೀವಕ್ಕೆ ತೊಂದರೆಯಾಗುವ ಪರಿಸ್ಥಿತಿಯಾಗಿದೆ. ಮೊದಲು ಜಾಗ ಕೊಟ್ಟು ನಂತರ ನಮ್ಮನ್ನು ಸ್ಥಳಾಂತರಿಸಬೇಕಿತ್ತು ಎಂದು ಹಜರತ್ ಅಲಿ ಹೇಳಿದ್ದಾರೆ.

ನಿನ್ನೆ ಕರೆಂಟ್ ಹೋದ ಹತ್ತು ನಿಮಿಷಗಳಲ್ಲೇ ಬಿರು ಗಾಳಿ ಹಾಗೂ ಮಳೆಗೆ ಶೆಡ್‌ಗಳು ಕುಸಿದಿದ್ದವು. ತಗಡುಗಳು ಬಟ್ಟೆಗಳಂತೆ ಹಾರಿ ಹೋಗಿವೆ. ಈ ನಡುವೆ, ಕರೆಂಟ್ ಕಂಬವೂ ಬಿದ್ದಿತ್ತು. ಅದೃಷ್ಟವಶಾತ್ ಆ ವೇಳೆ ಕರೆಂಟ್ ಇರಲಿಲ್ಲ. ಒಂದು ವೇಳೆ ಕರೆಂಟ್ ಇದ್ದಿದ್ದರೆ ಜೀವಗಳೇ ಹೋಗುತ್ತಿದ್ದವು ಎಂದು ಆಶಿಯಾ ಹೇಳಿದ್ದಾರೆ.

ಊರ ಹೊರಗಿನ ಜಾಗದಲ್ಲಿ ಹಾವು – ಚೇಳುಗಳ ಕಾಟ ಅತಿಯಾಗಿದೆ. ಬಸ್ ಸಂಪರ್ಕ, ನೀರು, ರಸ್ತೆ, ಶಿಕ್ಷಣ ಎಲ್ಲದರ ಕೊರತೆ ಇದೆ. ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ ಎಂದವರು ಹೇಳಿದ್ದಾರೆ.

ಮನುಷ್ಯತ್ವದಿಂದ ಒಂದು ಗಂಜಿ ಕೇಂದ್ರವನ್ನೂ ತೆರೆದಿಲ್ಲ. ಮಾನವೀಯತೆಯನ್ನೇ ತೋರದಿದ್ದ ಮೇಲೆ, ಅಧಿಕಾರಿಗಳನ್ನು ನಂಬುವುದೇ ಕಷ್ಟವಾಗಿದೆ ಎಂದು ಅಲ್ತಾಫ್ ಬೇಸರ ವ್ಯಕ್ತಪಡಿಸಿದ್ದಾರೆ.

ಪಾಲಿಕೆ ಆಯುಕ್ತೆ ರೇಣುಕ ಅವರು ಸ್ಥಳಕ್ಕೆ ಭೇಟಿ ನೀಡಿ ಜನರ ಮನವೊಲಿಸುವ ಪ್ರಯತ್ನ ನಡೆಸಿದರು. ಪಾಲಿಕೆಯಿಂದ ನೆರವಿಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

ಆದರೆ, ಸಮಾಧಾನಗೊಳ್ಳದ ಜನರು, ಮಾಗಾನಹಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಬಿರು ಮಳೆಯಲ್ಲೂ ಮಹಿಳೆಯರು ಪಟ್ಟು ಬಿಡದೇ ಪ್ರತಿಭಟನೆ ಮುಂದುವರೆಸಿದ್ದರು.

error: Content is protected !!