ಅಂಜಲಿ ಕೊಲೆ ಆರೋಪಿ ದಾವಣಗೆರೆಯಲ್ಲಿ ಸೆರೆ

ಅಂಜಲಿ ಕೊಲೆ ಆರೋಪಿ ದಾವಣಗೆರೆಯಲ್ಲಿ ಸೆರೆ

ಮಾಯಕೊಂಡ ಬಳಿ ರೈಲಿನಲ್ಲಿ ಮಹಿಳೆಗೆ ಚಾಕು ಇರಿದ ಆರೋಪಿ ಗಿರೀಶ ಸಾವಂತ ಚಲಿಸುತ್ತಿದ್ದ ರೈಲಿನಿಂದ ಜಿಗಿದು ಚಿಗಟೇರಿ ಜಿಲ್ಲಾಸ್ಪತ್ರೆ ಸೇರಿ, ಪೊಲೀಸರ ಅತಿಥಿಯಾದ

ದಾವಣಗೆರೆ, ಮೇ 17- ಹುಬ್ಬಳ್ಳಿಯಲ್ಲಿ ಅಂಜಲಿ ಎಂಬ ಯುವತಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಗಿರೀಶ್‌ ಸಾವಂತನನ್ನು ಗುರುವಾರ ತಡರಾತ್ರಿ ದಾವಣಗೆರೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನಿಂದ ಬೆಳಗಾವಿಗೆ ದಾವಣಗೆರೆ ಮಾರ್ಗವಾಗಿ ತೆರಳು ತ್ತಿದ್ದ ವಿಶ್ವಮಾನವ ರೈಲಿನಲ್ಲಿ ಬರುತ್ತಿ ದ್ದ ಗಿರೀಶ್, ಮಾಯಕೊಂಡದ ಬಳಿ  ಶೌಚಾಲಯಕ್ಕೆ ತೆರಳಿದ್ದ ಗದಗ ಜಿಲ್ಲೆಯ ಮುಳಗುಂದ ನಿವಾಸಿ ಲಕ್ಷ್ಮೀ ಅವರೊಂದಿಗೆ ಕಿರಿಕ್ ಮಾಡಿ ಚಾಕು ಹಾಕಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆಗೆ ಗಾಯವಾಗಿದ್ದು, ಮಹಿಳೆಯ ಸಂಬಂಧಿಕರು ಹಾಗೂ ಸಹ ಪ್ರಯಾಣಿಕರು ಗಿರೀಶ್‌ನಿಗೆ ಥಳಿಸಿದ್ದಾರೆ ಎನ್ನಲಾಗಿದೆ.

ಆರೋಪಿಯು ಮಾಯ ಕೊಂಡ ಸಮೀಪ ಚಲಿಸುವ ರೈಲಿನಿಂದ ಕೆಳಗೆ ಜಿಗಿದು ಹಳಿ ಪಕ್ಕ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದಾನೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಆಂಬ್ಯುಲೆನ್ಸ್ ಮೂಲಕ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.

ಆರೋಪಿ ಚಾಕುವಿನಿಂದ ಗಾಯಗೊಂಡಿದ್ದ ಮಹಿಳೆಯೂ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದಗ ಇಬ್ಬರು ಮುಖಾಮುಖಿಯಾಗಿ ತನಗೆ ಚಾಕು ಇರಿದಿದ್ದು ಈ ವ್ಯಕ್ತಿಯೇ ಎಂದು ಗಿರೀಶನನ್ನು ತೋರಿಸಿದ್ದಾಳೆ. ಆಗ ಆಸ್ಪತ್ರೆಯ ಉಪ ಠಾಣೆ ಪೊಲೀಸರು ಘಟನೆ ರೈಲಿನಲ್ಲಿ ನಡೆದ ಹಿನ್ನೆಲೆಯಲ್ಲಿ ರೈಲ್ವೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆಗ ಆಸ್ಪತ್ರೆಗೆ ದಾವಣಗೆರೆ ರೈಲ್ವೆ ಠಾಣೆ ಪೊಲೀಸರು ಆಗಮಿಸಿ, ಇಬ್ಬರಿಂದ ಹೇಳಿಕೆ ಪಡೆದು ವಾಪಸ್ ಹೋಗಿದ್ದಾರೆ. ಗಿರೀಶನಿಗೆ  ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು, ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಲಕ್ಷ್ಮೀ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದರು. ಇಲ್ಲಿಯ ವರೆಗೂ ಚಿಕಿತ್ಸೆ ಪಡೆಯುತ್ತಿರುವ ಗಿರೀಶ್ ಅಂಜಲಿಯನ್ನ ಕೊಂದಿರುವ ಆರೋಪಿ ಎಂಬುದು ಯಾರಿಗೂ ತಿಳಿದಿರಲಿಲ್ಲ.

ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಸಿಪಿಐ ಸಂತೋಷ್ ಪಾಟೀಲ್ ಅವರೊಂದಿಗೆ, ಆಸ್ಪತ್ರೆಗೆ ಭೇಟಿ ನೀಡಿ ಹೇಳಿಕೆ ಪಡೆದಿದ್ದ ಎಎಸ್‌ಐ ನಾಗರಾಜ್ ಮೊಬೈಲ್ ನೋಡುತ್ತಿದ್ದಾಗ, ಅಂಜಲಿ ಹತ್ಯೆ ಆರೋಪಿಯ ಫೋಟೋ ಸ್ಕ್ರೀನ್ ಮೇಲೆ ಬಂದಿದೆ. ಆಗ ತಾವು ಈಗ ಹೇಳಿಕೆ ಪಡೆದಿರುವ ವ್ಯಕ್ತಿಯೇ ಅಂಜಲಿ ಕೊಲೆ ಆರೋಪಿ ಎಂದು ತಿಳಿದು, ಮತ್ತೆ ಆಸ್ಪತ್ರೆಗೆ ಹೋಗಿ ಆತನ ಪೂರ್ವಪರ ವಿಚಾರಿಸಿ, ಆತನ ಫೋಟೋಗಳನ್ನು ಹುಬ್ಬಳ್ಳಿ ಪೊಲೀಸರಿಗೆ ಕಳುಹಿಸಿದ ಆಧಾರದ ಮೇಲೆ ಹುಬ್ಬಳ್ಳಿಯ ಎಸಿಪಿ ಬಸವರಾಜ್ ನೇತೃತ್ವದಲ್ಲಿ ಪೊಲೀಸರು ದಾವಣಗೆರೆಗೆ ಆಗಮಿಸಿ, ಆರೋಪಿಯನ್ನು ಬಂಧಿಸಿ ಹುಬ್ಬಳಿಗೆ ಕರೆದೊಯ್ದಿದ್ದಾರೆ.

ಅಂಜಲಿ ಹತ್ಯೆ ಆರೋಪಿ ವಿಶ್ವನಾಥ ಅಲಿಯಾಸ್ ಗಿರೀಶ್ ಸಾವಂತ್ ವಿರುದ್ಧ ದಾವಣಗೆರೆಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗದಗ ಜಿಲ್ಲೆಯ ಮುಳಗುಂದ ನಿವಾಸಿ ಲಕ್ಷ್ಮೀ ಅವರ ಹತ್ಯೆಗೆ ಯತ್ನಿಸಿದ ಹಾಗೂ ಅವರನ್ನು ಕಾಮುಕ ದೃಷ್ಟಿಯಿಂದ ನೋಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. 

ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ: ದಾವಣಗೆರೆಯಲ್ಲಿ ಪೊಲೀಸ್ ವಶಕ್ಕೆ ಪಡೆಯಲಾಗಿದ್ದ ಅಂಜಲಿ ಕೊಲೆ ಆರೋಪಿ ಗಿರೀಶ ಸಾವಂತಗೆ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗಿರೀಶನ ತಲೆ ಹಾಗೂ ಮುಖದ ಭಾಗಕ್ಕೆ ತೀವ್ರ ಗಾಯವಾಗಿದ್ದರಿಂದ, ಆಸ್ಪತ್ರೆಯಲ್ಲಿನ ಕೈದಿ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಠಡಿ ಸುತ್ತ ಪೊಲೀಸ್ ಭದ್ರತೆ ಹಾಕಲಾಗಿದೆ.

ಆರೋಪಿ ರೈಲಿನಿಂದ ಬಿದ್ದ ಕಾರಣ, ತಲೆ ಮತ್ತು ಮುಖದ ಮೇಲೆ ಗಂಭೀರ ಗಾಯಗಳಾಗಿವೆ. ಸರಿಯಾಗಿ ಮಾತನಾಡುವ ಸ್ಥಿತಿಯಲ್ಲಿಲ್ಲ. ವೈದ್ಯರು ಅವನ ಆರೋಗ್ಯ ಸುಧಾರಣೆ ಆಗಿರುವ ವರದಿ ನೀಡಿದ ನಂತರ, ಕೋರ್ಟ್‌ಗೆ ಒಪ್ಪಿಸುತ್ತೇವೆ. ನಂತರ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ಮುಂದುವರೆಸಲಾಗುವುದು ಎಂದು ಹುಬ್ಬಳ್ಳಿಯಲ್ಲಿ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಹೇಳಿದ್ದಾರೆ.

ಆರೋಪಿ ಕೃತ್ಯ ಎಸಗಿದ ನಂತರ ಮೈಸೂರಿಗೆ ಹೋಗಿದ್ದ. ಮಹಾರಾಷ್ಟ್ರ ಅಥವಾ ಗೋವಾದಲ್ಲಿ ತಲೆಮರೆಸಿಕೊಳ್ಳಬೇಕು ಎಂದುಕೊಂಡು ಯೋಜನೆ ರೂಪಿಸಿರುವುದು ತಿಳಿದು ಬಂದಿದೆ. ದಾವಣಗೆರೆ ಸಮೀಪ ರೈಲಿನಿಂದ ಬಿದ್ದು ಗಾಯಗೊಂಡಿದ್ದ. ರೈಲ್ವೆ ಪೊಲೀಸರ ಮಾಹಿತಿ ಪ್ರಕಾರ, ಸ್ಥಳೀಯ ಪೊಲೀಸರು ಅವನನ್ನು ವಶಕ್ಕೆ ಪಡೆದು ಹುಬ್ಬಳ್ಳಿಗೆ ಕರೆತಂದಿದ್ದಾರೆ  ಎಂದರು.

ಆರೋಪಿಯು ಅಂಜಲಿಯನ್ನು ಪ್ರೀತಿಸುತ್ತಿದ್ದು, ಅವಳು ಅವನ ನಂಬರ್ ಬ್ಲಾಕ್ ಮಾಡಿದ್ದಳು ಎನ್ನುವ ಮಾಹಿತಿಯಿದೆ. ಆ ಕುರಿತು ಇಬ್ಬರ ಮೊಬೈಲ್ ನಂಬರ್‌ಗಳನ್ನು ಸಿಡಿಆರ್‌ನಲ್ಲಿ ಸಂಗ್ರಹಿಸಿ, ವೈಜ್ಞಾನಿಕ ತನಿಖೆ ನಡೆಸಲಾಗುವುದು  ಎಂದು ಹೇಳಿದರು.

error: Content is protected !!