ನಡೆದಿದ್ದನ್ನು ಪದೇ ಪದೇ ಬರೆಯುವುದಕ್ಕಿಂತ ನಡೆಯಬೇಕಾದುದನ್ನು ಬರೆದು, ಜಾಗೃತಿ ಮೂಡಿಸಿ

ನಡೆದಿದ್ದನ್ನು ಪದೇ ಪದೇ ಬರೆಯುವುದಕ್ಕಿಂತ ನಡೆಯಬೇಕಾದುದನ್ನು ಬರೆದು, ಜಾಗೃತಿ ಮೂಡಿಸಿ

ಪ್ರೊ. ಬಿ.ಕೃಷ್ಣಪ್ಪ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬರಹಗಾರರಿಗೆ ನಾದಬ್ರಹ್ಮ ಹಂಸಲೇಖ ಮನವಿ

ಮಲೇಬೆನ್ನೂರು, ಮೇ 16 – ಈ ಹಿಂದೆ ನಡೆದಿರುವುದನ್ನೇ ಪದೇ ಪದೇ ಬರೆಯದೇ ಮುಂದೆ ನಡೆಯಬೇಕಾದುದನ್ನು ಪುಸ್ತಕ ರೂಪದಲ್ಲಿ ಜನರಿಗೆ ತಿಳಿಸುವ ಕೆಲಸ ಮಾಡಿ ಎಂದು ಖ್ಯಾತ ಸಂಗೀತ ನಿರ್ದೇಶಕ ಹಾಗೂ  ಗೀತ ರಚನೆಕಾರ, ನಾದ ಬ್ರಹ್ಮ ಹಂಸಲೇಖ ಅವರು ಬರಹಗಾರರಿಗೆ, ಸಾಹಿತಿಗಳಿಗೆ ಮನವಿ ಮಾಡಿದರು.

ಹನಗವಾಡಿ ಸಮೀಪ ಇರುವ ಪ್ರೊ. ಬಿ.ಕೃಷ್ಣಪ್ಪ ಸಾಂಸ್ಕೃತಿಕ ಭವನದಲ್ಲಿ ಪ್ರೊ. ಬಿ.ಕೃಷ್ಣಪ್ಪ ಟ್ರಸ್ಟ್ ಮಾನವ ಬಂಧುತ್ವ ವೇದಿಕೆ, ಸಿವಿಜಿ ದಾವಣಗೆರೆ ಹಾಗೂ ಕಾಂತಗಿರಿ ಟ್ರಸ್ಟ್ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾವಣಗೆೆರೆ ಇವರುಗಳ ಸಂಯುಕ್ತಾ ಶ್ರಯದಲ್ಲಿ ಕಳೆದ ವಾರ ಹಮ್ಮಿಕೊಂಡಿದ್ದ ಪ್ರೊ. ಬಿ.ಕೃಷ್ಣಪ್ಪ ಸಂಸ್ಮರಣೆ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಮತ್ತು ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾ ಪ್ರಭುತ್ವ ಇರುವಂತಹ ದೇಶದಲ್ಲಿ ರಾಜಪ್ರಭುತ್ವ ಇದೆ ಎಂದು ಚಿತ್ರ ನಟ ಹಾಗೂ ಚಿಂತಕ ಪ್ರಕಾಶ್ ರೈ ಅವರು ತಮ್ಮದೇ ಭಾಷೆಯಲ್ಲಿ `ಮಹಾಪ್ರಭು’ ಎಂದು ಕರೆಯುವುದರಲ್ಲಿ ವಾಸ್ತವತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳದೇ ಅವರ ಸರ್ವಾಧಿಕಾರತನವನ್ನು ಪ್ರಸ್ತಾಪಿಸಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದರು.

`ಸಿಎಎ’ ಎಂಬ ಪೌರತ್ವ ತಿದ್ದುಪಡಿ ಕಾಯ್ದೆ ದೇಶದ 90 ಕೋಟಿ ಜನರನ್ನು ತೂಗಾಡು ವಂತೆ ಮಾಡಲಿದ್ದು, ಅಷ್ಟೇ ಅಲ್ಲ ಜನರನ್ನು ಜೈಲಿನಲ್ಲಿಟ್ಟಂತೆ ಎಂದು ಎಚ್ಚರಿಸಿ ಹಂಸಲೇಖ ಅವರು, ಇಂತಹ  ವ್ಯವಸ್ಥಿತ ಸಂಚಿನ ಬಗ್ಗೆ ಜನ ರನ್ನು ಎಚ್ಚರ ಗೊಳಿಸುವ ಕೆಲಸ ಮಾಡಬೇಕಿದೆ ಎಂದು ಬರಹಗಾರರಿಗೆ ಹೇಳಿದರು.

ಬುದ್ಧ ಹೇಳಿದ ವಾಸ್ತವತೆಯನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ಡಾ. ಅಂಬೇಡ್ಕರ್, ಪ್ರೊ. ಬಿ.ಕೃಷ್ಣಪ್ಪ ಅವರಂತಹ ಅನೇಕ ಹೋರಾಟಗಾರರು ಮಾಡಿದ ಹೋರಾಟಗಳನ್ನು ನಾವು ಮುಂದುವರಿ ಸಬೇಕು. ಬಸವಣ್ಣರ ಸುಧಾರಣೆಗಳನ್ನು ಮೈಗೂಡಿಸಿಕೊಂಡು ನಾವು ಹೆಜ್ಜೆ ಇಡಬೇಕೆಂದು ಹಂಸಲೇಖ ಹೇಳಿದರು.

ಸನಾತನ ಇದ್ದರೆ ಇರಲಿ. ಆದರೆ, ನಮಗೆ ಪುರಾತನ ಇದೆ ಎಂದು ಬಸವಣ್ಣನವರೇ ಹೇಳಿದ್ದಾರೆ. ಪುರಾತನಕ್ಕಿಂತ ದೊಡ್ಡದು ಯಾವುದೂ ಇಲ್ಲ. ಪುರಾತನದ ಬಗ್ಗೆ ಇಂದಿನ ಯುವ ಜನಾಂಗಕ್ಕೆ ತಿಳಿಸುವ ಕೆಲಸ ಮಾಡೋಣ. ದೇಶದಲ್ಲಿ ಕ್ರಾಂತಿಕಾರಿ ಹೋರಾಟ ಆಗುವುದಕ್ಕೆ ಮಣ್ಣು ಹದ ಆಗುತ್ತಿರುವುದೇ `ಸಿಎಎ’ ಎಂದರು.

ಹೋರಾಟ ಎಂದರೆ, ಹಸಿವು ಇದ್ದೇ ಇರುತ್ತದೆ. ಹಸಿವಿದ್ದರೂ ಹೋರಾಟ ನಿಲ್ಲಿಸ ಬಾರದು. ಸರ್ವಾಧಿಕಾರಿಗಳು ಕಾರ್ಮಿಕರ ಮೇಲೆ ಗುಂಡು ಹೊಡೆಯಿರಿ ಎಂದಾಗ ಆದ ಕಾರ್ಮಿಕರ ಹೋರಾಟ, ಬಲಿದಾನದ ಸಂಕೇ ತವೇ ಕಾರ್ಮಿಕರ ದಿನಾಚರಣೆ ಆಗಿದೆ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಆ ಪ್ರಕಾರ ಸಮರ್ಪಕವಾಗಿ ಸೌಲಭ್ಯಗಳು ಜಾರಿ ಯಾಗಿಲ್ಲ ಎಂದು ಹಂಸಲೇಖ ಹೇಳಿದರು.

ಸಾಮಾಜಿಕ ಬದ್ಧತೆ ಹೊಂದಿರುವ ದೇವನೂರು ಮಹಾದೇವ, ನಾಗಮೋಹನ್ ದಾಸ್, ಸತೀಶ್ ಜಾರಕಿಹೊಳಿ ಸೇರಿದಂತೆ ಇಂತಹ ಇನ್ನೂ ಅನೇಕರ ಬಗ್ಗೆ ಯುವ ಜನರಿಗೆ ಪರಿಚಯಿಸಬೇಕಿದೆ ಎಂದು ಹಂಸಲೇಖ ತಿಳಿಸಿದರು.

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ. ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಈ ದಿನ 5 ಜನ ಹಿರಿಯ ಲೇಖಕರ ಕೃತಿಗಳು ಬಿಡುಗಡೆಯಾಗಿದ್ದು, ಅವೆಲ್ಲವೂ ಸಮಾಜಕ್ಕೆ ಹೋರಾಟಗಳನ್ನು ತಿಳಿಸುತ್ತವೆ. ವಿಶ್ವ ವಿದ್ಯಾಲಯಗಳು ಹೇಳುವ ಪಾಠಕ್ಕಿಂತ ಹಸಿವು, ಹೋರಾಟಗಳ ಪಾಠಗಳೇ ನಮಗೆ ಹೆಚ್ಚು ಕಲಿಸಿದ್ದು, ಅಂಬೇಡ್ಕರ್, ಕೃಷ್ಣಪ್ಪ ಅವರ ಹೋರಾಟಗಳು ನಮ್ಮ ಬದುಕಿನ ಭಾಗವಾಗಬೇಕೆಂದರು.

ಹಿರಿಯ ವೈದ್ಯ ಡಾ. ಸುರೇಶ್ ಹನಗವಾಡಿ ಮಾತನಾಡಿ, ಕರ್ನಾಟಕ ಹಿಮೋಪೊಲೀಯೋ ಸೊಸೈಟಿಯ ಮೂಲಕ ಕುಸುಮ ರೋಗಿಗಳಿಗೆ ಸಂಗೀತ ಲೋಕದ ಎಸ್‌ಪಿಬಿ ಮತ್ತು ಹಂಸಲೇಖ ಅವರ ಕೊಡುಗೆಯನ್ನು ಸ್ಮರಿಸಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ.ವಿ.ಪಾಟೀಲ್, ಪ್ರೊ. ಹೆಚ್.ಎ.ಭಿಕ್ಷಾವರ್ತಿಮಠ ಮಾತನಾಡಿದರು.

ಈ ವೇಳೆ ಸಾಹಿತಿ ವೇಮಗಲ್ ಸೋಮಶೇಖರ್ ಅವರ `ದಾಂಡಿಯಾತ್ರೆ’ ಮತ್ತು ಶ್ರೀಮತಿ ಇಂದಿರಾ ಕೃಷ್ಣಪ್ಪ ಅವರ `ಮಹಿಳಾ ಚಳುವಳಿಯ ಜನನಿ ಸಾವಿತ್ರಿ ಬಾಪುಲೆ’ ಸೇರಿದಂತೆ ಒಟ್ಟು 5 ಕೃತಿಗಳು ಬಿಡುಗಡೆಯಾದವು.

ಕೃತಿಕಾರರಾದ ಪ್ರೊ. ಹೆಚ್.ಲಿಂಗಪ್ಪ, ಡಾ. ಸಣ್ಣರಾಮ, ಡಾ. ಶಿವಲಿಂಗಪ್ಪ ಮೀರಾಸಾಬಿಹಟ್ಟಿ, ಬಿ.ಎಸ್.ರಾಜೇಂದ್ರ ಪ್ರಸಾದ್ ತೇಕಲವಟ್ಟಿ, ವೇಮಗಲ್ ಸೋಮಶೇಖರ್, ಡಾ. ಕೆರೆಯಾಗಲಹಳ್ಳಿ ತಿಪ್ಪೇಸ್ವಾಮಿ ಮಾತನಾಡಿದರು.

ಶ್ರೀಮತಿ ಇಂದಿರಾ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಡಿಎಸ್ಎಸ್ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಚಿತ್ರ ಕಲಾವಿದ ಸಿ.ಚಂದ್ರಶೇಖರ್, ಹನಗವಾಡಿಯ ಡಿ.ಕುಮಾರ್, ಸಿ.ತಿಪ್ಪಣ್ಣ, ಮಾಡಾಳ್ ಶಿವಕುಮಾರ್, ಉಕ್ಕಡಗಾತ್ರಿ ಮಂಜು, ಕೊಮಾರನಹಳ್ಳಿಯ ಜಿ.ಮಂಜುನಾಥ್ ಪಟೇಲ್, ಕುಂಬಳೂರು ವಾಸು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ರುದ್ರಪ್ಪ ಹನಗವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ದೊಡ್ಡಮನಿ ಮಂಜುನಾಥ್ ಸ್ವಾಗತಿಸಿದರು. ಬನಹಟ್ಟಿಯ ಪೊಲೀಸ್ ಪಾಟೀಲ್ ಮತ್ತು ತಂಡದವರು ಲಾವಣಿ ಪದಗಳನ್ನು ಹಾಡಿ ಗಮನ ಸೆಳೆದರು.

error: Content is protected !!