ತ್ಯಾಜ್ಯ ವಿಲೇವಾರಿ ಘಟಕ : 5 ಪೈಪ್ ಲೈನ್ ಗಳೊಂದಿಗೆ ಬೆಂಕಿ ನಂದಿಸುವ ಕಾರ್ಯ

ತ್ಯಾಜ್ಯ ವಿಲೇವಾರಿ ಘಟಕ : 5 ಪೈಪ್ ಲೈನ್ ಗಳೊಂದಿಗೆ ಬೆಂಕಿ ನಂದಿಸುವ ಕಾರ್ಯ

ಮಹಾನಗರಪಾಲಿಕೆ ಆಯುಕ್ತರ ಭರವಸೆ

ದಾವಣಗೆರೆ, ಮೇ 15 – ಇಲ್ಲಿಗೆ ಸಮೀಪದ ಆವರಗೊಳ್ಳದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ನಿರ್ವಹಿಸುತ್ತಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯರು ಹಾಗೂ ಆಯುಕ್ತರಾದ ಶ್ರೀಮತಿ ರೇಣುಕಾ ಅವರ ನೇತೃತ್ವದಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

ಮೇಯರ್ ವಿನಾಯಕ್ ಪೈಲ್ವಾನ್, ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಕೆ. ಚಮನ್ ಸಾಬ್, ಸೋಗಿ ಶಾಂತಕುಮಾರ್, ಮೀನಾಕ್ಷಿ ಜಗದೀಶ್, ವಿರೋಧ ಪಕ್ಷದ ನಾಯಕ ಪ್ರಸನ್ನಕುಮಾರ್, ಇಟ್ಟುಗುಡಿ ಮಂಜುನಾಥ್, ಜಗದೀಶ್ ಮತ್ತಿತರ ತಂಡವು ಅಧಿಕಾರಿಗಳೊಂದಿಗೆ ತೆರಳಿ ಸ್ಥಿತಿಗತಿ ಪರಿಶೀಲಿಸಿತು.

ಈ ವೇಳೆ ಮಾತನಾಡಿದ ಆಯುಕ್ತರಾದ ರೇಣುಕಾ ಅವರು, 33 ಎಕರೆ ಜಾಗದ ಪೈಕಿ ಸದ್ಯಕ್ಕೆ 13 ಎಕರೆ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಕಾರ್ಯನಿರ್ವಹಿಸುತ್ತಿದೆ. ಮೇ 2ರಂದು ತ್ಯಾಜ್ಯಕ್ಕೆ ಬೆಂಕಿ ಬಿದ್ದಿದ್ದು, ಪಾಲಿಕೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಜೊತೆಗೂಡಿ ಬೆಂಕಿ ನಂದಿಸುವ ಕಾರ್ಯ ಮಾಡಲಾಗುತ್ತಿದೆ. ಆರಂಭದಲ್ಲಿ ಮೂರು ಕಡೆಗಳಲ್ಲಿ ಪೈಪ್ ಲೈನ್ ಮೂಲಕ ನೀರು ಹಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಲಾಯಿತಾದರೂ ಸಾಕಾಗದ ಕಾರಣ ಮತ್ತೆ ಎರಡು ಕಡೆಗಳಲ್ಲಿ ಪೈಪ್ ಲೈನ್ ಮೂಲಕ ನೀರು ಹಾಯಿಸಿ ಬೆಂಕಿ ಶಮನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಘನತ್ಯಾಜ್ಯ ವಿಲೇವಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಅನುದಾನಕ್ಕೆ ಅನುಮತಿ ಪಡೆಯಲಾಗುವುದು. ಡಂಪಿಂಗ್ ಯಾರ್ಡ್ ಇರುವುದರಿಂದ ಸಮಸ್ಯೆಯಾಗುತ್ತಿದೆ ಎಂಬುದು ಗ್ರಾಮಸ್ಥರ ಅಳಲು. ಮುಂಬರುವ ದಿನಗಳಲ್ಲಿ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸುವಂತೆ ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಉತ್ತರ ಭಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಕುರಿತಂತೆ ಜಾಗ ಪರಿಶೀಲನೆ ನಡೆಸಲಾಗುತ್ತಿದೆ. ಒಂದೇ ಕಡೆ ತ್ಯಾಜ್ಯ ಹಾಕುತ್ತಿರುವುದರಿಂದ ಸಹಜವಾಗಿಯೇ ಗ್ರಾಮಸ್ಥರಲ್ಲಿ ಆತಂಕ ಶುರು ಆಗಿದೆ. ಇನ್ನೊಂದು ಕಡೆ ಘಟಕ ಆರಂಭಿಸಿದರೆ ಸಮಸ್ಯೆಗೆ ಪರಿಹಾರ ಸಿಗಲಿದೆ. ಈ ನಿಟ್ಟಿನಲ್ಲಿಯೂ ಕಾರ್ಯೋನ್ಮುಖರಾಗಿದ್ದೇವೆ ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು, ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದರಿಂದ ಸಮಸ್ಯೆ ಆಗಿದೆ. ರಾತ್ರಿ ವೇಳೆ ಗಾಳಿ ಹೆಚ್ಚಿರುವ ಕಾರಣ ಬೆಂಕಿ ತಕ್ಷಣವೇ ನಂದಿಸಲು ಆಗದು. ಈ ಕಾರಣಕ್ಕಾಗಿ ಈಗಾಗಲೇ ಐದು ಕಡೆಗಳಲ್ಲಿ ಪೈಪ್ ಲೈನ್ ಮೂಲಕ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಗಾಳಿ ಹೆಚ್ಚಿರುವ ಕಾರಣ ಧೂಳು ಬರುತ್ತಿದ್ದು, ಜನರಿಗೆ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಆದಷ್ಟು ಬೇಗ ಪರಿಹರಿಸಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಗಮನಕ್ಕೂ ಈ ವಿಚಾರ ತರಲಾಗಿದೆ. ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿ ಗಳು ಕಾರ್ಯೋನ್ಮುಖರಾಗುವಂತೆ ಸಚಿವರು ಸೂಚನೆ ನೀಡಿದ್ದಾರೆ ಎಂದು ಹೇಳಿದರು.

error: Content is protected !!