ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು

ಮಲೇಬೆನ್ನೂರು : ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಹೆಚ್.ಎಸ್.ಮಂಜುನಾಥ್ ಕರೆ

ಮಲೇಬೆನ್ನೂರು, ಮೇ 13- ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಿ ಎಂದು ದಾವಣಗೆರೆ ವಾಣಿಜ್ಯ ಇಲಾಖೆ ಉಪ ಆಯುಕ್ತ ಹೆಚ್.ಎಸ್.ಮಂಜುನಾಥ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು, ಸೋಮವಾರ ಮಲೇಬೆನ್ನೂರು ಪಟ್ಟಣದ ಹೊರವಲಯದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಕಲಾಸಿರಿ ಮಕ್ಕಳ ಸಾಂಸ್ಕೃತಿಕ ವೇದಿಕೆ ಹಾಗೂ ಕಲಾವಿದ ಡ್ಯಾನ್ಸ್ ಐಕಾನ್ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ಶಿಬಿರ – 2024ರ ಸಮಾರೋಪ ಸಮಾರಂಭವನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಅಂಕ ಗಳಿಸುವುದು ಎಷ್ಟು ಮುಖ್ಯವೋ, ಇತರೆ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವುದೂ ಅಷ್ಟೇ ಮುಖ್ಯ ವಾಗಿದೆ. ಏಕೆಂದರೆ, ಪಠ್ಯೇತರ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡವರೇ ಜಗತ್ತಿನಲ್ಲಿ ಹೆಚ್ಚು ಸಾಧನೆ ಮಾಡಿದ್ದಾರೆಂದು ಹಲವು ಸಾಧ ಕರ ಹೆಸರುಗಳನ್ನು ಉದಾಹರಣೆ ನೀಡಿದರು.

ನಗರ, ಪಟ್ಟಣ ಹಾಗೂ ಹಾಸ್ಟೆಲ್‌ನಲ್ಲಿ ಬೆಳೆದ ಮಕ್ಕಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಮಕ್ಕಳಲ್ಲಿ ಹೆಚ್ಚು ಚಟುವಟಿಕೆಗಳು ಕಷ್ಟ-ಸುಖ ಮತ್ತು ಗ್ರಾಮೀಣ ಕಲೆ, ಸಾಹಿತ್ಯ, ಸಂಸ್ಕೃತಿಗಳಿರುತ್ತವೆ. ಈ ಕಾರಣಗಳಿಂದಾಗಿಯೇ ಗ್ರಾಮೀಣ ಪ್ರದೇಶದಲ್ಲಿ ಬೆಳೆದವರು, ದೇಶದಲ್ಲಿ ಉನ್ನತ ಸ್ಥಾನಗಳಲ್ಲಿದ್ದಾರೆ ಎಂದು ಹೆಚ್.ಎನ್.ಮಂಜುನಾಥ್ ಅವರು ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಹುರಿದುಂಬಿಸಿದರು.

ಮಕ್ಕಳಲ್ಲಿರುವ ಪ್ರತಿಭೆ ಹೊರಹಾಕಲು ಇಂತಹ ಬೇಸಿಗೆ ಶಿಬಿರಗಳು ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಚಿತ್ರಕಲಾ ಶಿಕ್ಷಕ ನಾಗರಾಜ್, ನೃತ್ಯ ನಿರ್ದೇಶಕ ಕಿರಣ್ ಅವರ ಶ್ರಮ ಸಾರ್ಥಕ ಎಂದು ಮಂಜುನಾಥ್ ಶ್ಲ್ಯಾಘಿಸಿದರು.

ಹರಿಹರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೆ.ಭೋಮೇಶ್, ಮಲೇಬೆನ್ನೂರು ಪೊಲೀಸ್ ಠಾಣೆಯ ಎಎಸ್ಐ ಶ್ರೀನಿವಾಸ್ ಮಾತನಾಡಿದರು.

`ಪೋಕ್ಸೋ’ ಕಾಯ್ದೆ ಬಗ್ಗೆ ತಿಳಿಸಿದ ಶ್ರೀನಿವಾಸ್ ಅವರು, ಮಕ್ಕಳಿಗೆ ಕಾನೂನಿನ ಅರಿವು ಮೂಡಿಸುವ ಪ್ರಯತ್ನ ಮಾಡಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವ ಮತ್ತು ಕಲಿಸುವ ಶಕ್ತಿ ತಾಯಿ ಮತ್ತು ಶಿಕ್ಷಕರಲ್ಲಿ ಮಾತ್ರ ಇರುತ್ತದೆ. ಅಂತಹ ಕೆಲಸವನ್ನು ಎಲ್ಲಾ ತಾಯಂದಿರು, ಶಿಕ್ಷಕರು ಆಸಕ್ತಿಯಿಂದ ಮಾಡಿದ್ದಲ್ಲಿ ಮಕ್ಕಳು ಬಹಳ ಎತ್ತರದ ಸ್ಥಾನಕ್ಕೆ ಹೋಗಲು ಸಾಧ್ಯ ಎಂದು ಪ್ರತಿಪಾದಿಸಿದರು.

ಪತ್ರಕರ್ತ ಕೆ.ಎನ್.ನಾಗೇಂದ್ರಪ್ಪ, ಹೆಚ್.ಎಂ.ಸದಾನಂದ್ ಮಾತನಾಡಿ, ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಹೊಸ ಉತ್ಸಾಹ ಬೆಳೆಸುತ್ತವೆ ಎಂದರು.

ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಬಿ.ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಹಾಗೂ ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಜಿ.ಟಿ.ಕಟ್ಟಿ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಆರ್.ಶಾಂತರಾಜ್, ಆರ್ಟ್ಸ್ ಮಂಜು, ಪ್ರಗತಿಪರ ಚಿಂತಕ ಕುಂದೂರು ಮಂಜಪ್ಪ, ಮಲ್ಲಿಕಾರ್ಜುನ್ ಕಲಾಲ್, ರಟ್ಟಿಹಳ್ಳಿ ಧರ್ಮಸ್ಥಳ ಯೋಜನೆಯ ಕಪಿಲ್ ದೇವ್, ಗುತ್ತಿಗೆದಾರ ಮಂಜಾನಾಯ್ಕ ಮತ್ತಿತರರು ವೇದಿಕೆಯಲ್ಲಿದ್ದರು.

ಕಲಾಸಿರಿ ಮಕ್ಕಳ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಾಗೂ ಚಿತ್ರಕಲಾ ಶಿಕ್ಷಕ ಭಾನುವಳ್ಳಿ ನಾಗರಾಜ್ ಸ್ವಾಗತಿಸಿದರು. ನೃತ್ಯ ನಿರ್ದೇಶಕ ಕಿರಣ್ ಬಿ.ಹೊಸೂರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಕ್ಷಕರಾದ ರೇಖಾ ಮಲ್ಲಿಕಾರ್ಜುನ್ ಪ್ರಾರ್ಥಿಸಿದರು. ಹಿಂಡಸಘಟ್ಟ ಕ್ಯಾಂಪ್ ಶಾಲೆಯ ಮುಖ್ಯ ಶಿಕ್ಷಕ ಬಿ.ಅರುಣ್‌ಕುಮಾರ್ ನಿರೂಪಿಸಿದರು. ಹಳ್ಳಿಹಾಳ್ ಕ್ಯಾಂಪ್ ಶಾಲೆಯ ಶಿಕ್ಷಕ ಪ್ರಭು ಪ್ರಸಾದ್ ವಂದಿಸಿದರು.

error: Content is protected !!