ದಾವಣಗೆರೆ, ಮೇ 12 – ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರವು ಭಾನುವಾರದಂದು ಪಾರಂಪರಿಕ ಬೀಜದ ವಿಶಿಷ್ಟ ಸಂತೆಗೆ ಸಾಕ್ಷಿಯಾಯಿತು.
ಕೇಂದ್ರದಲ್ಲಿರುವ ಜಂಬುನೇರಳೆ ತಾಕಿನ ನೆರಳಿನಲ್ಲಿ ದೂರದ ರಾಜ್ಯಗಳಿಂದ ಬಂದಿದ್ದ ಪಾರಂಪ ರಿಕ ಬೀಜ ಮಾರಾಟಗಾರರು ಹಾಗೂ ದೂರದ ಊರು ಗಳಿಂದ ಬಂದ ಖರೀದಿದಾರರು ಸಂಗಮಿಸಿದ್ದರು.
ಹರಿಯಾಣ, ತಮಿಳುನಾಡು, ಅಸ್ಸಾಂ, ಒಡಿಶಾ ಗಳಿಂದಲೂ ಮಾರಾಟಗಾರರು ಆಗಮಿಸಿದ್ದರು. ತಮ್ಮ ಸ್ಥಳೀಯ ಪರಂಪರೆಯ ಬಿತ್ತನೆ ಬೀಜಗಳನ್ನು ಮಾರಾಟ ಮಾಡಿದರು.
ಹರಿಯಾಣದ ಸೋನಿಪತ್ನಿಂದ ಬಂದಿದ್ದ ಕೃಷಿಕ ರಾಜೇಶ್ ಅವರು 3 ಅಡಿ ಹೀರೇಕಾಯಿ ಫಲ ನೀಡುವ ಬೀಜ, 5 ಅಡಿ ಉದ್ದನೆಯ ಸೋರೆಕಾಯಿ ಬೀಜಗಳನ್ನು ಮಾರಾಟಕ್ಕೆ ತಂದಿದ್ದರು. ಒಂದೂಕಾಲು ಅಡಿ ಉದ್ದ ಬೆಳೆಯುವ ಮೆಣಸಿನ ಕಾಯಿ ಬೀಜವನ್ನೂ ತಂದಿದ್ದರು.
ಸಂತೋಷದ ಸ್ಪಂದನೆ
ಪಾರಂಪರಿಕ ಬೀಜದ ಸಂತೆಗೆ ರೈತರು ಹಾಗೂ ಕೈತೋಟದವರಿಂದ ಸಂತೋಷದ ಸ್ಪಂದನೆ ಸಿಕ್ಕಿದೆ. ಮುಂದಿನ ದಿನಗಳಲ್ಲೂ ತರಳಬಾಳು ಕೃಷಿ ಕೇಂದ್ರದಿಂದ ಪಾರಂಪರಿಕ ಬೀಜಕ್ಕೆ ಉತ್ತೇಜನ ಮುಂದುವರೆಸಲಾಗುವುದು ಎಂದು
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಟಿ.ಎನ್.ದೇವರಾಜ ಹೇಳಿದ್ದಾರೆ.
ಪಾರಂಪರಿಕ ಬೀಜದ ಸಂತೆಯಲ್ಲಿ 3 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದಾರೆ. 400-600 ಜನ ಕೈತೋಟದ ತರಬೇತಿ ಪಡೆದಿದ್ದಾರೆ ಎಂದವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಬೀಜ ಸಂರಕ್ಷಕರ ಸಂಘ ಹಾಗೂ ಕೈತೋಟ ಬೆಳೆಗಾರರ ಸಂಘಗಳನ್ನು ಉದ್ಘಾಟಿಸ ಲಾಗಿದೆ. ಈ ಮೂಲಕ ಪಾರಂಪರಿಕ ಬೀಜಗಳಿಗೆ ಇನ್ನಷ್ಟು ಉತ್ತೇಜನ ಸಿಗಲಿದೆ ಎಂದವರು ತಿಳಿಸಿದರು.
ಬೀಜ ಸಂರಕ್ಷಣೆ ಸಾಂಪ್ರದಾಯಿಕ ಪದ್ಧತಿಯನ್ನೇ ಬಿಟ್ಟಿದ್ದೇವೆ
ರೈತರು ಸಾಂಪ್ರದಾಯಿಕವಾಗಿ ಬೀಜ ಸಂರಕ್ಷಣೆ ಮಾಡುವ ಪದ್ಧತಿಯನ್ನೇ ಬಿಟ್ಟಿದ್ದಾರೆ. ಮಡಿಕೆಯಲ್ಲಿ ಸಂರಕ್ಷಣೆ ಮಾಡುವ ಬೀಜ ವರ್ಷ ಕಾಲ ಸುರಕ್ಷಿತವಾಗಿರುತ್ತದೆ ಹಾಗೂ ಆರೋಗ್ಯಕ್ಕೂ ಉತ್ತಮ ಎಂದು ವಿಜಯನಗರ ಜಿಲ್ಲೆಯ
ಉತ್ತಂಗಿ ಗ್ರಾಮದ ಕಾಟ್ರಹಳ್ಳಿ ಕಲ್ಲಪ್ಪ ಹೇಳುತ್ತಾರೆ.
ರಾಸಾಯನಿಕ ಹಾಕಿ ಬೀಜ ರಕ್ಷಿಸಬಹುದು. ಆದರೆ, ಹೀಗೆ ಮಾಡಿದಾಗ ಬೀಜದಲ್ಲಿ ರಾಸಾಯನಿಕ ಸೇರುತ್ತದೆ. ಬೀಜ ಅಂಕುರವಾಗುವುದು ಕಷ್ಟ ಎಂದವರು ಅಭಿಪ್ರಾಯ ಪಡುತ್ತಾರೆ.
ದೇಸಿ ಬಿತ್ತನೆ ಬೀಜ ಬೇಕು ಎಂದು ಬೆಂಗಳೂರಿನ ಮಾಗಡಿಯ ರೈತ ದೇವರಾಜ ಅವರು ಇಲ್ಲಿಗೆ ಬಂದಿದ್ದರು.
ನಮ್ಮ ಕಡೆ ಶುದ್ಧ ನಾಟಿ ಬೀಜ ಸಿಗುವುದಿಲ್ಲ. ಆರೋಗ್ಯಕರ ಆಹಾರಕ್ಕೆ ದೇಶಿ ಪರಂಪರೆಯ ಬೀಜಗಳೇ ಸೂಕ್ತ ಎಂದವರು ತಿಳಿಸಿದರು.
ಹಾವೇರಿ ಜಿಲ್ಲೆ ಇಟಗಿಯ ಭೂಮಿಕಾ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘದವರು ವಿವಿಧ ರೀತಿ ರಾಗಿ ಬೀಜಗಳನ್ನು ಮಾರಾಟಕ್ಕೆ ತಂದಿದ್ದರು.
ಹೈಬ್ರಿಡ್ನಲ್ಲಿ ಅಷ್ಟೇ ಅಲ್ಲದೇ, ಜವಾರಿಯಲ್ಲೂ ಬೃಹತ್ ಗಾತ್ರದ ಇಳುವರಿ ಪಡೆಯಬಹುದು ಎಂಬುದನ್ನು ಹಲವಾರು ರೈತರು ತಿಳಿಸಿದರು.
ಕೊಂಡಜ್ಜಿಯ ನಾಗರಾಜ ಅವರು ವಿವಿಧ ರೀತಿಯ ನಿಂಬೆಹಣ್ಣುಗಳ ಸಸಿಗಳನ್ನು ಮಾರಾಟಕ್ಕೆ ತಂದಿದ್ದರು. ಇದರಲ್ಲಿ ಸೀಡ್ಲೆಸ್ ನಿಂಬೆಹಣ್ಣೂ ಸೇರಿತ್ತು. ಬೀಜ ಮೇಳದಲ್ಲಿ ಬೀಜ ರಹಿತ ನಿಂಬೆಯ ಮಾರಾಟ ಮತ್ತೊಂದು ವಿಶೇಷವೂ ಆಗಿತ್ತು.
ಪುತ್ತೂರಿನ ಪಾಂಡುರಂಗ ಭಟ್ ಅವರು ಬಿದಿರು ಅಕ್ಕಿಯನ್ನು ಮಾರಾಟಕ್ಕೆ ತಂದಿದ್ದರು. ಈ ಅಕ್ಕಿ 60 ವರ್ಷಗಳಿಗೆ ಒಮ್ಮೆ ಮಾತ್ರ ಸಿಗುತ್ತದೆ. ಈಗ ಮಾರಲು ತಂದಿರುವ ಭತ್ತ 12 ವರ್ಷ ಹಳೆಯದು. ಸರಿಯಾಗಿ ದಾಸ್ತಾನಿಟ್ಟರೆ ಈ ಅಕ್ಕಿ ಕೆಡುವುದಿಲ್ಲ ಎಂದು ಹೇಳಿದರು.
ಕುಂಬಳೂರಿನ ಆಂಜನೇಯ ಅವರು 120 ವಿಧದ ಭತ್ತ ಸೇರಿದಂತೆ ಹಲವು ಕಾಳುಗಳ ಬೀಜಗಳನ್ನು ಪ್ರದರ್ಶನಕ್ಕೆ ತಂದಿದ್ದರು.