ಕಳೆದ ಹಲವು ದಿನಗಳಿಂದ ಬಿಸಿಲಿನ ಪ್ರಕೋಪ ಮಿತಿ ಮೀರಿದ್ದು 40 ಡಿಗ್ರಿ ದಾಟುತ್ತಿದೆ, ಇಂತಹ ಸಮಯದಲ್ಲಿ ಉಬ್ಬಸ ಹಾಗೂ ಡಸ್ಟ್ ಅಲರ್ಜಿ ರೋಗಿಗಳಿಗೆ ವಿಶೇಷ ಕಾಳಜಿಯ ಅವಶ್ಯಕತೆ ಇದೆ.
COPD ಕಾಯಿಲೆಯು ಅಸ್ತಮಾಗಿಂತ ಭಿನ್ನವಾಗಿದ್ದು, ಇದು 40 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತದೆ. (ಅಸ್ತಮಾ, ಅಲರ್ಜಿ ಕಾಯಿಲೆಗಳು ಸಣ್ಣ ವಯಸ್ಸಿಗೇ ಶುರು ಆಗುತ್ತದೆ).
ಅಸ್ತಮಾ ಹಾಗೆ COPD (Chronic Obstructive Pulmonary Disease) ಅಲರ್ಜಿ ಸಂಬಂಧ ಬರುವುದಿಲ್ಲ. ವಾತಾವರಣದಲ್ಲಿ ಸಣ್ಣ ಕಣಗಳು (ಕಾಟನ್ ಮಿಲ್) ಇರುವೆಡೆ ದೀರ್ಘಕಾಲ ಕೆಲಸ ಮಾಡಿದವರಿಗೆ, ಸುದೀರ್ಘ ಧೂಮಪಾನಿಗಳಿಗೆ, ಅನಿಯಂತ್ರಿತ ಅಸ್ತಮಾ ತುಂಬಾ ವರ್ಷ ಇದ್ದರೆ, ಈ ಹಿಂದೆ TB ಕಾಯಿಲೆ ಆಗಿದ್ದರೆ, ಅವರಿಗೆ ಬರುವ ಉಬ್ಬಸ ಕಾಯಿಲೆಯೇ COPD.
ಸಮಸ್ಯೆಗಳು : ಉಬ್ಬಸದ ಸಿ.ಓ.ಪಿ.ಡಿ. ಕಾಯಿಲೆ ರೋಗಿಗಳಿಗೆ ವಾತಾವರಣದಲ್ಲಿ ಧಗೆ ಏರಿದಂತೆ ತೀವ್ರ ಉಸಿರಾಟದ ತೊಂದರೆ ಶುರು ಆಗುತ್ತದೆ.
(ನೆನಪಿರಲಿ: ಅಸ್ತಮಾ ರೋಗಿಗಳಿಗೆ ವಿಭಿನ್ನವಾಗಿ ಚಳಿ ಮತ್ತು ಮಳೆಗಾಲದಲ್ಲಿ ಈ ತೊಂದರೆ ಆಗುತ್ತದೆ)
- COPD ರೋಗಿಗಳಿಗೆ ಈ ಸಂದರ್ಭದಲ್ಲಿ ನಿತ್ಯ ಕರ್ಮಗಳಾದ ಸ್ನಾನ ಶೌಚ ಗಳಿಗೂ ತೀವ್ರ ಉಬ್ಬಸ ಬರುತ್ತದೆ.
- ಹೆಚ್ಚು ನಡೆದಾಡಲು ಮತ್ತು ಮೆಟ್ಟಿಲು ಹತ್ತಲು ಸಾಧ್ಯವಾಗುವುದಿಲ್ಲ.
- ಡಸ್ಟ್ ಅಲರ್ಜಿ, ನೆಗಡಿ, ಕೆಮ್ಮಿನ ರೋಗಿಗಳಿಗೆ ಬೇಸಿಗೆ ಕಾಲದಲ್ಲಿ ಧೂಳಿನಿಂದ ಈ ಕಾಯಿಲೆ ಉಲ್ಪಣಿಸುತ್ತದೆ.
- ಟ್ರಾಫಿಕ್ ಧೂಳು ಹಾಗೂ ಹೊಗೆಗೆ ಅಲರ್ಜಿ ರೋಗಿಗಳಿಗೆ ನೆಗಡಿ, ಕೆಮ್ಮು ಸತತವಾಗಿ ಕಾಡುವ ಸಾಧ್ಯತೆ ಇರುತ್ತದೆ.
- ನಿರ್ಜಲೀಕರಣ (Dehydration) ಬೇಸಿಗೆಯಲ್ಲಿ ತುಂಬಾ ಬೆವರು ಉಂಟಾಗಿ ವಯಸ್ಸಾದ COPD ಕಾಯಿಲೆ ರೋಗಿಗಳು ತುಂಬಾ ಸುಸ್ತು ಅನುಭವಿಸುತ್ತಾರೆ
ಸಲಹೆಗಳು : λ COPD ರೋಗಿಗಳು ಯಾವ ಕಾರಣಕ್ಕೂ ಸೂರ್ಯನ ಬಿಸಿಲಲ್ಲಿ ಹೊರಗೆ ಬರ ಕೂಡದು.
- λ COPD ರೋಗಿಗಳು ಮನೆಯ ಅತ್ಯಂತ ತಂಪಾದ ಹಾಗೂ ಗಾಳಿ ಆಡುವ ಕೊಠಡಿಯಲ್ಲಿ ಇರಬೇಕು. ಎಸಿ ಅಥವಾ ಫ್ಯಾನ್ ಸೌಲಭ್ಯ ಇದ್ದರೆ ಬಳಸಿ.
- λ ಸಾಕಷ್ಟು ಬಾರಿ ನೀರು ಅಥವಾ ಇನ್ನಿತರೆ ಜ್ಯೂಸ್, ಎಳನೀರು ಸೇವಿಸಬೇಕು.
- λ ಉಬ್ಬಸ ಹೆಚ್ಚಾದಾಗ ತಕ್ಷಣ ಸರಿ ಪಡಿಸಲು ಮನೆಯಲ್ಲಿ ಒಂದು ನೆಬ್ಯುಲೈಸರ್ ಇರಬೇಕು.
- λ ತುಂಬಾ ಓಡಾಡುವುದು ಹಾಗೂ ಮೆಟ್ಟಿಲು ಹತ್ತುವುದು ಸೂರ್ಯ ಮುಳುಗುವ ತನಕ ಬೇಡ.
- λ COPD ರೋಗಿಗಳು ರಾತ್ರಿ ಮಲಗುವಾಗ ತಮ್ಮ ಪಕ್ಕ ಒಂದು ಬೆಲ್ ಅಥವಾ ಗಂಟೆ ಇಟ್ಟುಕೊಂಡಿರಬೇಕು, ಏಕೆಂದರೆ ಬೆಳಗಿನ ಜಾವದಲ್ಲಿ ತೀವ್ರ ಬಿಸಿಲಿನ ವಾತಾವರಣ ಸ್ವಲ್ಪ ತಂಪಾಗಿ ಬದಲು ಆಗುವುದರಿಂದ ಉಸಿರಾಟದ ಸಮಸ್ಯೆ ಕಾಣಿಸುವ ಸಾಧ್ಯತೆ ಇರುತ್ತದೆ. ಆಗ ಬೆಲ್ ಭಾರಿಸಿ ಮನೆಯವರಿಗೆ ಕರೆಯಬಹುದು.
- ಸಾಧ್ಯ ಆದಷ್ಟು ನಿಮ್ಮ ನಿತ್ಯ ಕರ್ಮಗಳನ್ನು ಬೆಳಿಗ್ಗೆ ಸೂರ್ಯ ಮೇಲೇರುವ ಮೊದಲೇ ನಿರ್ವಹಿಸಿ.
- ಸಮಸ್ಯೆ ಉಲ್ಪಣಿಸಿದರೆ ತಕ್ಷಣ ನಿಮ್ಮ ವೈದ್ಯರನ್ನು ಕಾಣಿ.
- ಡಸ್ಟ್ ಅಲರ್ಜಿ ರೋಗಿಗಳು ಆದಷ್ಟೂ ಬಿರು ಬಿಸಿಲಲ್ಲಿ ಟ್ರಾಫಿಕ್ ನಲ್ಲಿ ಓಡಾಡುವುದು ತಪ್ಪಿಸಬೇಕು.
- ಅನಿವಾರ್ಯ ಇದ್ದರೆ ಡಸ್ಟ್ ಅಲರ್ಜಿ ರೋಗಿಗಳು ಕಡ್ಡಾಯವಾಗಿ ಫಿಲ್ಟರ್ ಇರುವ ಪೊಲ್ಯೂಷನ್ ಮಾಸ್ಕ್ ಬಳಸಿ ( ಕೋವಿಡ್ ಮಾಸ್ಕ್ ಅಲ್ಲ)
- ಅಲರ್ಜಿ ರೋಗಿಗಳು ಮನೆಯಲ್ಲಿ ಧೂಳು ಕೊಡವುವ ಅಥವಾ ಹೊಗೆ ವಾತಾವರಣ ತಪ್ಪಿಸಿ.
- ಸಮಸ್ಯೆ ಹತೋಟಿಗೆ ಬರದಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ
– ಡಾ. ಎನ್.ಹೆಚ್. ಕೃಷ್ಣ, ಶ್ವಾಸಕೋಶ ಹಾಗೂ ಉಸಿರಾಟದ ಕಾಯಿಲೆಗಳ ಸಲಹಾ ವೈದ್ಯರು, ದಾವಣಗೆರೆ. [email protected]