ಮುರುಘಾಮಠಕ್ಕೆ ಆಡಳಿತಾಧಿಕಾರಿ : ಖಂಡನೆ

ಮುರುಘಾಮಠಕ್ಕೆ ಆಡಳಿತಾಧಿಕಾರಿ : ಖಂಡನೆ

ನೇಮಕ ಹಿಂಪಡೆಯಲು ಆಗ್ರಹಿಸಿ ಬಸವಪ್ರಭು ಶ್ರೀಗಳ ನೇತೃತ್ವದಲ್ಲಿ ಡಿಸಿಗೆ ಮನವಿ 

ಚಿತ್ರದುರ್ಗ, ಡಿ.20- ರಾಜ್ಯ ಸರ್ಕಾರವು ಬೆಳಗಾವಿಯ ಸುವರ್ಣಸೌಧ ಅಧಿವೇಶನದಲ್ಲಿ ಬಸವಣ್ಣ ನವರ ಭಾವಚಿತ್ರವನ್ನು ಅನಾವರಣಗೊಳಿಸಿರುವ ಮುಖ್ಯಮಂತ್ರಿಗಳ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಚಿತ್ರದುರ್ಗ ಶ್ರೀ ಮುರುಘಾ ಮಠಕ್ಕೆ ಆಡಳಿತಾ ಧಿಕಾರಿ ನೇಮಕ ಮಾಡಿರುವುದನ್ನು ಖಂಡಿಸುತ್ತೇನೆಂದು ಶ್ರೀ ಬಸವಪ್ರಭು ಸ್ವಾಮಿಗಳು ಹೇಳಿದರು. ಶ್ರೀ ಮುರುಘಾ ಮಠದ ಶಿರಸಂಗಿ ಮಹಾಲಿಂಗ ಸ್ವಾಮಿ ಸಭಾಂಗಣದಲ್ಲಿ ನಡೆದ ಮಠಾಧೀಶರ ಸಮಾಗಮ ಸಭೆಯಲ್ಲಿ ನೇತೃತ್ವ ವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರ ಮಠಗಳನ್ನು ನಿಯಂತ್ರಿಸಲು ಆಡಳಿತಾಧಿಕಾರಿ ನೇಮಕ ಮಾಡಿದ್ದು, ಇದು ಮಠಗಳ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ ಎಂದು ಆರೋಪಿಸಿದರು.

 ಸರ್ಕಾರ ಏಕಾಏಕಿ ಕೆಲವರ ಒತ್ತಡಕ್ಕೊಳಗಾಗಿ ಆಡಳಿತಾಧಿಕಾರಿ ನೇಮಕ ಮಾಡಿರುವುದು ಸರಿಯಲ್ಲ. ಇದರಿಂದಾಗಿ ಮಠವನ್ನು ಸಮರ್ಥವಾಗಿ ಮುನ್ನಡೆಸುವ ಜವಾಬ್ದಾರಿ ಲಿಂಗಾಯತ ಸಮಾಜಕ್ಕೆ ಇಲ್ಲವೆಂಬ ತಪ್ಪು ಸಂದೇಶ ರವಾನೆಯಾದಂತಾಗಿದೆ. ಐದಾರು ವರ್ಷಗಳ ಹಿಂದೆ ರಾಮಚಂದ್ರಪುರ ಮಠದ ಪ್ರಕರಣದಲ್ಲಿ ಪರ-ವಿರೋಧದ ಎರಡೂ ಗುಂಪುಗಳಿದ್ದಾಗ ಅಂದು ರಾಜ್ಯ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಲಿಲ್ಲ. ಆದರೆ ಈಗ ಆಡಳಿತಾಧಿಕಾರಿ ನೇಮಿಸಿರುವುದು ದುರದೃಷ್ಟಕರ. ಕೂಡಲೇ ಸರ್ಕಾರ ಈ ದ್ವಂದ್ವ ನೀತಿಯನ್ನು ಕೈಬಿಡಬೇಕು ಮತ್ತು ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. 

ಗೋಕಾಕ್‍ನ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ನಾಡಿನ ಮಠಾಧಿಪತಿಗಳೆಲ್ಲರೂ ಒಂದಾಗಿ ಮಠ-ಮಾನ್ಯಗಳ ಉಳುವಿಗಾಗಿ ಹೋರಾಡುವ ಕಾಲ ಬಂದಿದೆ. ಮುರುಘಾಮಠದ ಉಳುವಿಗಾಗಿ ಪ್ರಾಣ ಕೊಡಲು ನಾವು ಸಿದ್ಧರಿದ್ದೇವೆ.  ಬರುವ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಒಂದು ದಿನ ಧರಣಿಯನ್ನು ಸಾಂಕೇತಿಕವಾಗಿ ಮಾಡೋಣ. ಎಲ್ಲಾ ಮಠಾಧಿಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಹೇಳಿದರು.

ಇಳಕಲ್‍ನ ಶ್ರೀ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಶ್ರೀ ಮುರುಘಾ ಮಠಕ್ಕೆ ಕರ್ನಾಟಕದಲ್ಲಿ ತನ್ನದೇ ಆದ ಭವ್ಯ ಪರಂಪರೆ, ಇತಿಹಾಸವಿದೆ. ಕೆಲವರ ಪಿತೂರಿಯಿಂದ ಶ್ರೀಮಠದ ಪೂಜ್ಯರಿಗೆ ಗ್ರಹಣದ ಕಾಲ ಬಂದಿದ್ದು, ಕೆಲವೇ ದಿನಗಳಲ್ಲಿ ನಿವಾರಣೆಯಾಗಲಿದೆ. ಅದಕ್ಕೆ ಕರ್ತೃ ಮುರುಘೇಶನ ಕೃಪೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ನಾಡಿಗೆ ಮಠ-ಮಾನ್ಯಗಳ ಕೊಡುಗೆ ಅಪಾರವಾದುದು. ಸರ್ಕಾರ ಮಠಗಳ ನಿಯಂತ್ರಣ ಮಾಡಲು ಹೊರಟಿರುವುದು ಖಂಡನೀಯ. ಇಂದು ಮುರುಘಾಮಠ ನಾಳೆ ಮತ್ತೊಂದು ಮಠಕ್ಕೆ ಇಂತಹ ದುಸ್ಥಿತಿ ಬರದಂತೆ ಎಚ್ಚೆತ್ತುಕೊಳ್ಳಬೇಕಿದೆ. ಮಠಾಧಿಪತಿಗಳು ಒಂದಾಗಿ ಹೋರಾಟ ಮಾಡುವ ಕಾಲ ಬಂದಿದೆ ಎಂದು ನುಡಿದರು.

ಸಂಡೂರು ಶ್ರೀ ಪ್ರಭು ಸ್ವಾಮೀಜಿ ಮಾತನಾಡಿ, ಯಾರು ವೈಚಾರಿಕವಾಗಿ ಕೆಲಸ ಮಾಡುತ್ತಾರೋ ಅಂಥವರಿಗೆ ಈ ಸಮಾಜ ಹಲ್ಲೆ, ಪಿತೂರಿ ಮಾಡುತ್ತಾ ಬಂದಿದೆ. ಅದಕ್ಕೆ ಸಾಕ್ಷಿಯಾಗಿ ಎಂ.ಎಂ. ಕಲಬುರ್ಗಿ ಹತ್ಯೆ, ಈಗ ಮುರುಘಾ ಶರಣರಿಗೆ ಸಂಕಷ್ಟ ಬಂದೊದಗಿದೆ. ಬಸವ ತತ್ವ, ವೈಚಾರಿಕತೆ ಮತ್ತು ಸಮಾನತೆ ಪರವಾಗಿ ಇರುವವರಿಗೆ ತೊಂದರೆ ತಪ್ಪಿದ್ದಲ್ಲ. ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂದರು.

ಸಭೆಯಲ್ಲಿ ಅಥಣಿಯ ಶ್ರೀ ಶಿವಬಸವ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ನಮ್ಮ ಗುರುಗಳಾದ ಮುರುಘಾ ಶರಣರಿಗೆ ದೊಡ್ಡ ಸಂಕಷ್ಟದಲ್ಲಿ ಸಿಲುಕಿಸಲಾಗಿದೆ. ಈಗ ಒಂದೊಂದೇ ಸತ್ಯ ಬಯಲಾಗುತ್ತಿವೆ. ಇದನ್ನು ಕೆಲವರು ಸಹಿಸಲಾರದೆ ಆಡಳಿತಾಧಿಕಾರಿ ಹಾಕುವ ಪ್ರಯತ್ನ ನಡೆಸಿ ಮಠಗಳ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದರು.

ಸಭೆಯಲ್ಲಿ ಶಿಗ್ಗಾವಿಯ ಶ್ರೀ ಸಂಗನಬಸವ ಸ್ವಾಮೀಜಿ, ಸತ್ತಿಯ ಶ್ರೀ ಬಸವಲಿಂಗ ಸ್ವಾಮೀಜಿ, ಹಾವೇರಿಯ ಶ್ರೀ ಬಸವಶಾಂತಲಿಂಗ ಸ್ವಾಮೀಜಿ, ತಂಗಡಗಿಯ ಶ್ರೀ ಬಸವಪ್ರಿಯ ಅಪ್ಪಣ್ಣ ಸ್ವಾಮೀಜಿ, ಶ್ರೀ ಬಸವ ಹರಳಯ್ಯ ಸ್ವಾಮೀಜಿ, ಶ್ರೀ ಕುಂಬಾರ ಗುಂಡಯ್ಯ ಸ್ವಾಮೀಜಿ, ಶಿರಸಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಬೆಂಗಳೂರಿನ ಶ್ರೀ ಬಸವ ರಮಾನಂದ ಸ್ವಾಮೀಜಿ, ತುಮಕೂರಿನ ಶ್ರೀ  ಮಹಾಲಿಂಗ ಸ್ವಾಮೀಜಿ, ಕಲಬುರ್ಗಿಯ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಜನವಾಡ, ಶ್ರೀ ಬಸವಭೂಷಣ ಸ್ವಾಮಿಗಳು ಸಿರಗುಪ್ಪ, ಶ್ರೀ ಬಸವ ಲಿಂಗಮೂರ್ತಿ ಸ್ವಾಮಿಗಳು ಮೈಸೂರು, ಶ್ರೀ ತಿಪ್ಪೇರುದ್ರಸ್ವಾಮಿಗಳು ತುಮಕೂರು, ಮನಗೂಳಿಯ ಶ್ರೀ ವೀರೇಶಾನಂದ ಸ್ವಾಮೀಜಿ, ಉಪ್ಪುಣಸಿಯ ಶ್ರೀ ಜಯಬಸವ ಸ್ವಾಮೀಜಿ, ಐರಣಿಯ ಶ್ರೀ ಗಜದಂಡ ಸ್ವಾಮೀಜಿ, ಮಾತೆ ಮುಕ್ತಾಯಕ್ಕ, ಮಾತೆ ಅಕ್ಕನಾಗಮ್ಮ, ನಿಪ್ಪಾಣಿಯ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಸೋಮವಾರಪೇಟೆಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಸೇರಿದಂತೆ, ಐವತ್ತಕ್ಕೂ ಹೆಚ್ಚು ಮಠಾಧೀಶರುಗಳು ಭಾಗವಹಿಸಿದ್ದರು. ನಂತರ, ಎಲ್ಲಾ ಮಠಾಧೀಶರು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ, ಆಡಳಿತಾಧಿಕಾರಿ ನೇಮಕವನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

error: Content is protected !!