2ಎ ಮೀಸಲಾತಿ : `ವಿರಾಟ ಶಕ್ತಿ ಮಹಾ ಸಮಾವೇಶ’

2ಎ ಮೀಸಲಾತಿ : `ವಿರಾಟ ಶಕ್ತಿ ಮಹಾ ಸಮಾವೇಶ' - Janathavani

ದಾವಣಗೆರೆ, ಡಿ. 20- ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಾಡಿದ್ದು ದಿನಾಂಕ  22 ರ ಗುರುವಾರ ಬೆಳಿಗ್ಗೆ 11 ಗಂಟೆಗೆ  ಬೆಳಗಾವಿಯ ಸುವರ್ಣಸೌಧದ ಮುಂಭಾಗದ 100 ಎಕರೆ ಪ್ರದೇಶದಲ್ಲಿ `ವಿರಾಟ ಶಕ್ತಿ ಮಹಾಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಶಿವಶಂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಾದಯಾತ್ರೆ ಮೂಲಕ ಬೆಳಗಾವಿಗೆ ಆಗಮಿಸಲಿರುವ ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಈ ಬೃಹತ್ ಸಮಾವೇಶ ನಡೆಯಲಿದ್ದು, ಸುಮಾರು 25 ಲಕ್ಷ ಜನ ಸೇರುವ ನಿರೀಕ್ಷೆ ಇದೆ. 10 ಲಕ್ಷ ಜನರಿಗೆ ಭೋಜನದ ವ್ಯವಸ್ಥೆಯನ್ನು ಸಮಾಜದ ವತಿಯಿಂದ ಮಾಡಲಾಗಿದೆ. ಇದಕ್ಕಾಗಿ ದಾವಣಗೆರೆ ಜಿಲ್ಲೆಯಿಂದ 1000 ಕ್ವಿಂಟಾಲ್ ಅಕ್ಕಿಯನ್ನು ರವಾನಿಸಲಾಗುವುದು ಎಂದರು.

ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿ, ಸರ್ಕಾರದ ಗಮನ ಸೆಳೆದಿದ್ದರಿಂದಲೇ 2 ಎ ಮೀಸಲಾತಿ ಬಗ್ಗೆ ಸರ್ಕಾರ ಚಿಂತನೆ ನಡೆಸುವಂತಾಗಿದೆ. ಪಂಚಮಸಾಲಿ ಸಮಾಜದ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ ಸಹ ಇನ್ನೂ ಮೀಸಲಾತಿ ಜಾರಿಗೆ ಮೀನಾಮೇಷ ಎಣಿಸುತ್ತಿದೆ ಎಂದು ದೂರಿದರು.

ಶ್ರೀಗಳ ನೇತೃತ್ವದಲ್ಲಿ ನಡೆದ ಬೃಹತ್ ಪಾದಯಾತ್ರೆಯಿಂದ ಸಮಾಜ ಸಂಘಟನೆ ಸಾಧ್ಯವಾಗಿದೆ. ಉಳಿದ ಸಮುದಾಯಗಳಿಗೆ ನಮ್ಮ ಪಂಚಮಸಾಲಿ ಸಮಾಜದ ಹೋರಾಟ ಮಾದರಿಯಾಗಿದೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮೀಸಲಾತಿ ಬಗ್ಗೆ ದೃಢ ನಿರ್ಧಾರ ಕೈಗೊಳ್ಳದಿದ್ದರೆ ರಾಜಕೀಯವಾಗಿ ಭಾರೀ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ಸರ್ಕಾರವನ್ನು ಎಚ್ಚರಿಸಿದರು.

ನಮ್ಮ ಹೋರಾಟ ಯಾವುದೇ ಪಕ್ಷ ಅಥವಾ ವ್ಯಕ್ತಿಯ ವಿರುದ್ಧ ಅಲ್ಲ. ಪಂಚಮಸಾಲಿ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು. ಇತರೆ ಸಮಾಜಕ್ಕೂ ಸಹ ಅವರ ಬೇಡಿಕೆಗಳಿಗೆ ಅನುಗುಣವಾಗಿ ನೀಡಬೇಕು ಎಂದು ಹೇಳಿದರು.

ಪಂಚಮಸಾಲಿ ಹಿತಕಾಯುವ ಹಿನ್ನೆಲೆಯಲ್ಲಿ ಸಮಾಜದ ಸರ್ವರೂ ಸಹ ಸ್ವಪ್ರತಿಷ್ಠೆಗಳು, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಹೋರಾಟಕ್ಕೆ ಕೈಜೋಡಿಸಿ, ಬೆಳಗಾವಿಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಶಿವಶಂಕರ್ ಮನವಿ ಮಾಡಿದರು.

ಸರ್ಕಾರ 2 ಎ ಮೀಸಲಾತಿ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಬೇಡಿಕೆ ಈಡೇರಿಸದಿದ್ದರೆ, ಮುಂದಿನ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಸೋಗಿ ಶಾಂತಕುಮಾರ್, ಅಶೋಕ್ ಗೋಪನಾಳ್, ಎಸ್. ಓಂಕಾರಪ್ಪ, ಕಾರಿಗನೂರು ಭರತ್, ಬಕ್ಕೇಶ್, ಮಹದೇವಪ್ಪ, ಮಂಜುನಾಥ್ ಮತ್ತಿತರರಿದ್ದರು. 

error: Content is protected !!