ದುಡಿಯುವ ವರ್ಗವನ್ನು ದೇವರೆಂದ ಬಸವಣ್ಣ

ದುಡಿಯುವ ವರ್ಗವನ್ನು ದೇವರೆಂದ ಬಸವಣ್ಣ

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.  ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಶ್ಲ್ಯಾಘನೆ

ಚಿತ್ರದುರ್ಗ, ಮೇ 8-   ದಾವಣಗೆರೆಯ ವಿರಕ್ತ ಮಠದ ಪೀಠಾಧಿಪತಿಯಾಗಿದ್ದ ಮೃತ್ಯುಂಜಯ ಅಪ್ಪ     ಹಾಗೂ ಅವರೊಂದಿಗೆ ಹೆಗಲಾಗಿದ್ದ ಹರ್ಡೇಕರ್ ಮಂಜಪ್ಪ ಅವರುಗಳು ಬಸವ ಜಯಂತಿ ಆಚರಣೆಯ ಪ್ರವರ್ತಕರಾಗಿದ್ದಾರೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.  ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು. 

ಬಸವ ಜಯಂತಿ ಆಚರಣೆ ಪ್ರಯುಕ್ತ ಶ್ರೀಮಠದ ಅನುಭವ ಮಂಟಪದಲ್ಲಿ ನಿನ್ನೆ ಕರೆಯಲಾಗಿದ್ದ  ಎಸ್.ಜೆ.ಎಂ.  ವಿದ್ಯಾಪೀಠದ ನೌಕರರ ಸಮಾಲೋಚನಾ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. 

ದುಡಿಯುವ ವರ್ಗವನ್ನು ದೇವರೆಂದು,  ಕಾಯಕ ಯಾವುದೇ ಇರಲಿ ಅವರೆಲ್ಲರಿಗೂ ವೃತ್ತಿ ಗೌರವ ನೀಡಿ, ಅದಕ್ಕೆ ತಕ್ಕ ಮೌಲ್ಯ ದೊರಕಿಸಿಕೊಟ್ಟ ಮಹಾ ಮೇರು ಪುರುಷ ಬಸವಣ್ಣ.  ಅವರ ಈ ಸಾಧನೆಯ ವಿವಿಧ ಆಯಾಮಗಳ ಬಗ್ಗೆ ಗಮನಹರಿಸಿ, ಅಂದು ಬಸವ ಜಯಂತಿ ಆಚರಣೆ ಆರಂಭಿಸದೇ ಹೋಗಿದ್ದರೆ, ಎಷ್ಟೋ ಜನರಿಗೆ ಇಂದು ಬಸವಣ್ಣನವರು ಅರ್ಥವಾಗಿರುತ್ತಿರಲಿಲ್ಲ ಎಂದು ಅವರು  ಹೇಳಿದರು.

ಇದಕ್ಕೆ ಮತ್ತಷ್ಟು ಹೆಗಲೆಣೆಯಾಗಿ ವಚನ ಸಾಹಿತ್ಯ ಜನಮಾನಸಕ್ಕೆ ತಲುಪುವಂತಾಗಲು ತಮ್ಮ ಮನೆ, ಮಠ ಕಳೆದುಕೊಂಡು ಕೆಲಸ ಮಾಡಿದವರು ವಚನ ಪಿತಾಮಹ ಎಂದು ಹೆಸರಾಗಿದ್ದ ಫ.ಗು.ಹಳಕಟ್ಟಿ ಎಂದು ಶ್ರೀಗಳು ಇತಿಹಾಸದ ಎಳೆಯನ್ನು ಬಿಚ್ಚಿಟ್ಟರು.

ಚಿತ್ರದುರ್ಗ ಶ್ರೀ ಮುರುಘಾ ಮಠದ ಖಾಸಾಮಠ ದಾವಣಗೆರೆ ವಿರಕ್ತ ಮಠವಾಗಿದ್ದು, ಅಲ್ಲಿ ಮೊಟ್ಟಮೊದಲು ಬಸವ ಜಯಂತಿ ಆಚರಿಸಿದ ಕೀರ್ತಿ ಚಿತ್ರದುರ್ಗ ಮುರುಘಾ ಮಠಕ್ಕೆ ಸಲ್ಲುತ್ತದೆ. ಆದ್ದರಿಂದ ಬಸವ ಜಯಂತಿ ನಮ್ಮ ಸಂಸ್ಥಾನದ ಹಬ್ಬವಾಗಿದೆ ಎಂದು ಶ್ರೀಗಳು ಬಣ್ಣಿಸಿದರು. 

ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಮಾತನಾಡಿದರು.

 ತೋಟಪ್ಪ ಮತ್ತು ಸಂಗಡಿಗರು ವಚನಗಳನ್ನು ಹಾಡಿದರು. ಶ್ರೀಮತಿ ಅನು ಲಿಂಗರಾಜು ಸ್ವಾಗತಿ ಸಿದರು. ಶ್ರೀಮತಿ ನೇತ್ರಾವತಿ ನಿರೂಪಿಸಿದರು. ಲಿಂಗರಾಜು ವಂದಿಸಿದರು.

error: Content is protected !!