ಸತತ ಚಿಕಿತ್ಸೆಯಿಂದ ಅಸ್ತಮಾ ಕಾಯಿಲೆ ಹತೋಟಿ ಸಾಧ್ಯ

ಸತತ ಚಿಕಿತ್ಸೆಯಿಂದ ಅಸ್ತಮಾ ಕಾಯಿಲೆ ಹತೋಟಿ ಸಾಧ್ಯ

7 ಮೇ 2024 ವಿಶ್ವ ಅಸ್ತಮಾ ದಿನಾಚರಣೆ

ತೀವ್ರ ಅಸ್ತಮಾ ಎಂದರೇನು? 

ಅಸ್ತಮಾ ಕಾಯಿಲೆಯು ಸಾಕಷ್ಟು ಜನರನ್ನು ಬಾಧಿಸಿದರೂ ಸರಿಯಾದ ಹಾಗೂ ಸತತವಾದ ಚಿಕಿತ್ಸೆಯಿಂದ ಹತೋಟಿಗೆ ಬರುತ್ತದೆ. 

ಆದರೆ ಶೇಕಡಾ 5 ಅಥವಾ ಅದಕ್ಕಿಂತ ಕಡಿಮೆ ಪ್ರತಿಶತ ರೋಗಿಗಳಲ್ಲಿ ಇದು ನಿಯಂತ್ರಣಕ್ಕೆ ತರುವುದು ಕಷ್ಟ. ಇದನ್ನು  ತೀವ್ರ ಅಸ್ತಮಾ ಎಂದು ಕರೆಯಲಾಗುತ್ತದೆ. 

ವಿಶ್ವದಲ್ಲಿ ಅಸ್ತಮಾ ಕಾಯಿಲೆ ಚಿಕಿತ್ಸೆಗೆ ಮಾರ್ಗಸೂಚಿ ತಯಾರಿಸುವ ಜೀನಾ (ಅಮೆ ರಿಕ) ಸಂಸ್ಥೆಯು ಇಂತಹ ಕ್ಲಿಷ್ಟ ಅಸ್ತಮಾವನ್ನು ಹಲವು ವಿಭಾಗಗಳಾಗಿ ವಿಂಗಡಿಸಿದೆ. 

  • ಅನಿಯಂತ್ರಿತ ಅಸ್ತಮಾ  
  • ಚಿಕಿತ್ಸೆ ಸ್ಪಂದನೆಗೆ ಕ್ಲಿಷ್ಟಕರ ಅಸ್ತಮಾ  
  • ತೀವ್ರ ಅಸ್ತಮಾ 

ಅನಿಯಂತ್ರಿತ ಅಸ್ತಮಾ : ಇದರಲ್ಲಿ ರೋಗಿಯ ಚಿಕಿತ್ಸಾ ಕ್ರಮದ ಮೇಲೆ ವೈದ್ಯರು ಸರಿಯಾಗಿ ಗಮನ ಹರಿಸುವುದು ಮುಖ್ಯ. ಇದು ಸಾಮಾನ್ಯವಾಗಿ ಇನ್ಹೇಲರ್ ಔಷಧಿಗಳು ತೆಗೆದುಕೊಳ್ಳುವ ತಪ್ಪು ವಿಧಾನದಿಂದ ಅಥವಾ ಸತತವಾಗಿ ಪ್ರತಿ ದಿನ ಔಷಧಿ ಉಪಯೋಗಿಸದೇ ಇರುವುದರಿಂದ ಸಂಭವಿಸುತ್ತದೆ. ಇದರಲ್ಲಿ ವೈದ್ಯರು ರೋಗಿಯನ್ನು ತನ್ನ ಎದುರು ಕೂರಿಸಿಕೊಂಡು ಇನ್ಹೇಲರ್ ಮನೆಯಲ್ಲಿ ಹೇಗೆ ಉಪಯೋಗಿಸುವಿರಿ ಮಾಡಿ ತೋರಿಸಿ? ಎಂದು ಖುದ್ದು ಪರೀಕ್ಷೆ ಮಾಡುವುದರಿಂದ ಮತ್ತು ಇಷ್ಟು ದಿನಕ್ಕೆ  ಔಷಧಿ ಸರಿಯಾಗಿ ತೆಗೆದುಕೊಂಡರೆ ಎಷ್ಟು ಖಾಲಿ ಆಗಬೇಕಿತ್ತೋ ಅಷ್ಟು ಆಗಿದೆಯೋ ಇಲ್ಲವೋ ಎಂದು ಪರೀಕ್ಷಿಸಬೇಕು. ರೋಗಿಯು ಹೇಳಿದಷ್ಟು ಔಷಧಿ, ಹೇಳಿದಷ್ಟು ಬಾರಿ, ಹೇಳಿದ ವಿಧಾನದಲ್ಲಿ ಉಪಯೋಗಿಸಿದರೆ ಅನಿಯಂತ್ರಿತ ಅಸ್ತಮಾ ನಿಯಂತ್ರಣಕ್ಕೆ ಬಹಳಷ್ಟು ಜನರಲ್ಲಿ ಬರುತ್ತದೆ. 

ಚಿಕಿತ್ಸೆ ಸ್ಪಂದನೆಗೆ ಕ್ಲಿಷ್ಟಕರ ಅಸ್ತಮಾ : ಈ ಮೇಲೆ ಹೇಳಿದಂತೆ ಪರಿಶೀಲಿಸಿದಾಗ ಔಷಧಿ ತೆಗೆದುಕೊಳ್ಳುವ ವಿಧಾನ ಮತ್ತು ಸರಿಯಾಗಿ ಡೋಸ್ ಖಾಲಿ ಮಾಡುತ್ತಿದ್ದರೂ ನಿಯಂತ್ರಣಕ್ಕೆ ಬಾರದ ಅಸ್ತಮಾವನ್ನು ಚಿಕಿತ್ಸೆ ಸ್ಪಂದನೆಗೆ ಕ್ಲಿಷ್ಟಕರ ಅಸ್ತಮಾ ಎಂದು ಕರೆಯಲಾಗುತ್ತದೆ. 

ಇಂತಹ ರೋಗಿಗಳು ಬಂದಾಗ ಅವರ ಶ್ವಾಸಕೋಶ ಹಾಗೂ ಅದನ್ನು ಹೊರತು ಪಡಿಸಿ, ಇತರೆ ಅಂಗಾಂಗಗಳ ಆಳ ತಪಾಸಣೆ ನಡೆಸಬೇಕು. ರೋಗಿಯ ಜೀವನ ಹಾಗೂ ವಾಸಿಸುವ ಶೈಲಿ, ಕೆಲಸ ಮಾಡುವ ಸ್ಥಳದ ಪರಿಸರ ಮಾಲಿನ್ಯ ಇತ್ಯಾದಿ ಅರಿತುಕೊಳ್ಳಬೇಕು. 

ಅಸ್ತಮಾದೊಂದಿಗೆ ಅಲರ್ಜಿ ನೆಗಡಿ, ಅಲರ್ಜಿ ಚರ್ಮದ ಕಾಯಿಲೆ, ಮಾನಸಿಕ ತುಮುಲ, ಕಿವಿ ಸೋರುವುದು, ಬ್ರಾಂಕೈಟಿಸ್ ಕಾಯಿಲೆ, ಸ್ಲೀಪ್ ಆಪ್ನಿಯ ಕಾಯಿಲೆ, ಬೊಜ್ಜುತನ, ಹೃದಯದ ಕಾಯಿಲೆ ಏನಾದರೂ ಜೊತೆಗೆ ಇದೆಯೇ ಎಂದು ಖಚಿತ ಪಡಿಸಿಕೊಂಡು, ಅದಕ್ಕೂ ಚಿಕಿತ್ಸೆ ನೀಡುವುದು ತುಂಬಾ ಮುಖ್ಯ. 

ಜೊತೆಗೆ ರೋಗಿ ಅಸ್ತಮಾದ ಸರಿಯಾದ ಚಿಕಿತ್ಸೆ ತೆಗೆದುಕೊಂಡು ಕಮ್ಮಿ ಆಗದಿದ್ದರೆ, ಧೂಮಪಾನ ಮಾಡುತ್ತಾ ಇದ್ದಾರಾ? ಕೆಲಸ ಮಾಡುವ ಸ್ಥಳದಲ್ಲಿ ಧೂಳು, ಹೊಗೆ ವಾತಾ ವರಣ ಇದೆಯಾ? ಮನೆ ಅಕ್ಕಪಕ್ಕ ಪಾರ್ಥೇ ನಿಯಂ ಬಹಳ ಇದೆಯಾ? ಇದನ್ನು ಎಲ್ಲಾ ಪೊಲೀಸರ ಥರ ಹುಡುಕಬೇಕಾಗಿ ಬರುತ್ತದೆ! 

ಈ ಮೇಲ್ಕಂಡ ಸಮಸ್ಯೆ ಅರಿತು ಪರಿಹರಿಸಿದರೆ ಅಸ್ತಮಾ ನಿಯಂತ್ರಣ ಸಾಧ್ಯ. 

ತೀವ್ರ ಅಸ್ತಮಾ : ಈ ಮೇಲೆ ಹೇಳಿದ 1 ಮತ್ತು 2 ಎಲ್ಲಾ ಬಗೆಹರಿಸಿದರೂ ನಿಯಂತ್ರಣಕ್ಕೆ ಬಾರದ ಅಸ್ತಮಾವನ್ನು ತೀವ್ರ ಅಸ್ತಮಾ ಎಂದು ಕರೆಯಲಾಗುತ್ತದೆ. ಇಲ್ಲಿ ಜೀನ ಸಂಸ್ಥೆ ಕೆಲವು ಫೀನೋಟೈಪ್ ಆಗಿ ವಿಂಗಡಿಸಿದೆ. 

ಟಿ ಹೆಚ್ 2 ಅಸ್ತಮಾ : λ ಇದು 40 ವರ್ಷ ಕೆಳಗಿನ ವಯಸ್ಸಿನಲ್ಲಿ ಪ್ರಾರಂಭ ಆಗುತ್ತದೆ. 

  • ದೀರ್ಘ ಅಲರ್ಜಿಯ ಅಸ್ತಮಾ. 
  • ವ್ಯಾಯಾಮದಿಂದ ಹೆಚ್ಚಾಗುವ ಅಸ್ತಮಾ. 
  • ಅಯಸ್ಪಿರಿನ್ ಮಾತ್ರೆ ಇಂದ ಹೆಚ್ಚಾಗುವ ಅಸ್ತಮಾ 
  • ಸುದೀರ್ಘ ಇಯೋಸಿನೊಫಿಲ್ ಅಸ್ತಮಾ

ಟಿ ಹೆಚ್ 2 ಅಲ್ಲದ ಅಸ್ತಮಾ :  

  • ಧೂಮಪಾನಿಗಳ ಅಸ್ತಮಾ. 
  • ಬೊಜ್ಜಿನ ಅಸ್ತಮಾ. 
  • ರಿಸ್ಟ್ರಿಕ್ಟಿವ್ ಉಸಿರಾಟದ ನಾಳಗಳ ಅಸ್ತಮಾ. 
  • 40 ವರ್ಷ ವಯಸ್ಸು ಮೇಲ್ಪಟ್ಟವರಲ್ಲಿ ಕಂಡು ಬರುತ್ತದೆ. 

ಇಂತಹ ತೀವ್ರ ಅಸ್ತಮಾಗೆ ಇನ್ಹೇಲರ್ ಹೊರತು ಪಡಿಸಿ ಮನೋಕ್ಲೋನಲ್ ಆಂಟಿಬಾಡಿಸ್ ಅಂತಹ ಚುಚ್ಚು ಮದ್ದು ಔಷಧಿ, ಬೊಜ್ಜನ್ನು ತೆಗೆಯುವ ಶಸ್ತ್ರ ಚಿಕಿತ್ಸೆ,

ಸ್ಲೀಪ್ ಆಫ್ನಿಯ ನಿಯಂತ್ರಿಸುವ ಉಸಿರಾಟದ ಯಂತ್ರ, ಕೆಲವೊಮ್ಮೆ ಇನ್ಹೇಲರ್ ಗಳಲ್ಲಿ ಲಾಮ ಔಷಧಿಯೂ ಮತ್ತು ಐ.ಸಿ.ಎಸ್. ಔಷಧಿಗಳೊಂದಿಗೆ ಸೇರಿಸಬೇಕಾಗುತ್ತದೆ. 

ಸರಿಯಾದ ಹಾಗೂ ಸತತವಾದ ಚಿಕಿತ್ಸೆಯಿಂದ ಈ ಮೇಲೆ ಹೇಳಿದಂತೆ ಅಸ್ತಮಾ ಕಾಯಿಲೆಯನ್ನು ನಿಯಂತ್ರಣದಲ್ಲಿ ಇರಿಸಬಹುದು.


– ಡಾ.ಎನ್.ಹೆಚ್.ಕೃಷ್ಣ,  ಶ್ವಾಸಕೋಶದ ಹಾಗೂ ಉಸಿರಾಟದ ಕಾಯಿಲೆಗಳ ಸಲಹಾ ವೈದ್ಯರು,  ದಾವಣಗೆರೆ. [email protected]

error: Content is protected !!