ಪ್ರಿಯಾಂಕ ಗಾಂಧಿ ಹೇಳಿಕೆಗೆ ಸಿ.ಟಿ. ರವಿ ತಿರುಗೇಟು
ದಾವಣಗೆರೆ, ಮೇ 5 – ಬಿಜೆಪಿ ಬಳಿ ಜನ ಶ್ರೀಮಂತಿಕೆ ಇದೆ. ಬಿಜೆಪಿ ಅತಿ ಹೆಚ್ಚು ಶಾಸಕರು ಹಾಗೂ ಸಂಸದರನ್ನು ಹೊಂದಿದೆ. ಚುನಾವಣಾ ಬಾಂಡ್ ಮೂಲಕ ಪಾರದರ್ಶಕವಾಗಿ ಬಿಜೆಪಿಗೆ ದೇಣಿಗೆ ನೀಡಲಾಗಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದ್ದಾರೆ.
ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಬಾಂಡ್ ಮೂಲಕ ಕಾರ್ಪೊರೇಟ್ ವಲಯ ಬಿಜೆಪಿಗೆ ನೀಡಿರುವ ಚುನಾವಣಾ ಬಾಂಡ್ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದರು.
ಚುನಾವಣಾ ಬಾಂಡ್ನಲ್ಲಿ ಬಿಜೆಪಿ ಭ್ರಷ್ಟಾಚಾರ ನಡೆಸಿದೆ. ಕಂಪನಿಗಳನ್ನು ಬೆದರಿಸಿ ಹಣ ಪಡೆಯಲಾಗಿದೆ ಹಾಗೂ ಬಿಜೆಪಿ ವಿಶ್ವದಲ್ಲೇ ಶ್ರೀಮಂತ ಪಕ್ಷವಾಗಿದೆ ಎಂದು ಪ್ರಿಯಾಂಕ ಗಾಂಧಿ ನಿನ್ನೆ ನಡೆದ ಚುನಾವಣಾ ಸಮಾವೇಶದಲ್ಲಿ ಹೇಳಿದರು.
ಈ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರವಿ, ಪ್ರಿಯಾಂಕ ಅವರು ಯಾವ ದೃಷ್ಟಿಯಿಂದ ಹೇಳಿದ್ದಾರೋ ಗೊತ್ತಿಲ್ಲ. ಬಿಜೆಪಿ ಜನ ಶ್ರೀಮಂತಿಕೆ ಹೊಂದಿದೆ. ನಮ್ಮ ನಾಯಕ ನರೇಂದ್ರ ಮೋದಿ ಜಗತ್ತಿನಾದ್ಯಂತ ಜನರ ಪ್ರೀತಿ – ವಿಶ್ವಾಸ ಗಳಿಸಿದ್ದಾರೆ ಎಂದರು.
ಪಾರದರ್ಶಕತೆಗಾಗಿ ಚುನಾವಣಾ ಬಾಂಡ್ ವ್ಯವಸ್ಥೆ ಜಾರಿಗೆ ತರಲಾಗಿತ್ತು. ನಾವು ವಿಶ್ವಾಸ ಹಾಗೂ ಪಾರದರ್ಶಕ ವಾಗಿ ದೇಣಿಗೆ ಪಡೆದಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಅತಿ ಹೆಚ್ಚು ಶಾಸಕರು ಹಾಗೂ ಸಂಸದರನ್ನು ಹೊಂದಿದೆ. ಅತಿ ಹೆಚ್ಚು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಕೇಂದ್ರದಲ್ಲೂ ಅಧಿಕಾರದಲ್ಲಿದೆ. ಆದರೂ ಶೇ.44ರಷ್ಟು ಮಾತ್ರ ಚುನಾವಣಾ ಬಾಂಡ್ ದೇಣಿಗೆ ದೊರೆತಿದೆ. ಶೇ.56 ರಷ್ಟು ದೇಣಿಗೆ ಕಾಂಗ್ರೆಸ್, ಡಿಎಂಕೆ, ಎಎಪಿ ಮುಂತಾದ ಪ್ರತಿಪಕ್ಷಗಳೇ ಪಡೆದುಕೊಂಡಿವೆ ಎಂದವರು ಹೇಳಿದರು.
ಮತ ಜಿಹಾದ್ ಕರೆಗೆ ಖಂಡನೆ
ಈ ಹಿಂದೆ ಲವ್ ಜಿಹಾದ್ ಇತ್ತು, ಈಗ ಕಾಂಗ್ರೆಸ್ನವರು ವೋಟ್ ಜಿಹಾದ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸಿ.ಟಿ. ರವಿ ಕಿಡಿಕಾರಿದರು.
ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷೀದ್ ಅವರ ಸೊಸೆ ಮರಿಯಾ ಆಲಂ ಖಾನ್ ಅವರು ಮತ ಜಿಹಾದ್ ಮೂಲಕ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕುವಂತೆ ಕರೆ ನೀಡಿರುವುದನ್ನು ರವಿ ಖಂಡಿಸಿದರು.
ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಪ್ರಜ್ವಲ್ ಪ್ರಕರಣ ತನಿಖೆಗೆ ಆಗ್ರಹ
ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇಲ್ಲವೇ ಹೈಕೋರ್ಟ್ ಹಾಲಿ ಮಹಿಳಾ ನ್ಯಾಯಮೂರ್ತಿಗಳ ಉಸ್ತುವಾರಿ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಆಗ್ರಹಿಸಿದ್ದಾರೆ.
ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಸಂತ್ರಸ್ತೆಯರಿಗೆ ನ್ಯಾಯ ಸಿಗಬೇಕು. ಇದೇ ವೇಳೆ ಪ್ರಕರಣ ರಾಜಕೀಯ ಉದ್ದೇಶಕ್ಕೆ ಬಳಕೆಯಾಗಬಾರದು ಎಂದವರು ಹೇಳಿದರು. ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ತನಿಖೆ ನಡೆಸಿದರೆ, ಪ್ರಕರಣದಲ್ಲಿ ರಾಜಕೀಯ ವಾಗುವುದು ತಪ್ಪಲಿದೆ ಎಂದವರು ತಿಳಿಸಿದರು.
ಒಂದು ವೇಳೆ ಚುನಾವಣಾ ದೇಣಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಭಾವಿಸುವುದಾದರೆ ಅವರು ಪಡೆದಿರುವ ದೇಣಿಗೆ ವಾಪಸ್ ಕೊಡಲಿ ಎಂದು ಸವಾಲು ಹಾಕಿದರು.
ಅಭಿವೃದ್ಧಿಯ ಪರಿಕಲ್ಪನೆ ಹೊಂದಿರುವ ನರೇಂದ್ರ ಮೋದಿಯವರು ಎಲ್ಲರನ್ನೂ ಒಳಗೊಳ್ಳುವಿಕೆ, ಏಕತೆಗೆ ಒತ್ತು ನೀಡುತ್ತಾರೆ. ಹೀಗಿದ್ದರೂ ಕಾಂಗ್ರೆಸ್ನವರು ಮೋದಿ ಅವರ ವಿರುದ್ಧವಾಗಿ ಸುಳ್ಳು, ಅಪಪ್ರಚಾರ ಮತ್ತು ಅನುಮಾನ ಹುಟ್ಟುಹಾಕುವುದನ್ನೇ ಅಜೆಂಡಾ ಮಾಡಿಕೊಂಡು ಮತ ವಿಭಜಿಸಲು ಯತ್ನಿಸುತ್ತಿದ್ದಾರೆ ಎಂದು ಇದೇ ವೇಳೆ ದೂರಿದರು.
ಕಳೆದ 7 ತಿಂಗಳಿನಿಂದ ಕಾಂಗ್ರೆಸ್ ಸರ್ಕಾರ ಹಾಲು ಉತ್ಪಾದಕರಿಗೆ ಸಬ್ಸಿಡಿ ಹಣ ನೀಡಿಲ್ಲ. 108 ಆಂಬ್ಯುಲೆನ್ಸ್ ಸಿಬ್ಬಂದಿಗೆ ವೇತನ ನೀಡಿಲ್ಲ. ಖಜಾನೆ ಖಾಲಿಯಾಗಿದೆಯೇ? ಎಂದು ರವಿ ಪ್ರಶ್ನಿಸಿದರು.
ಸುಳ್ಳು, ಅಪಪ್ರಚಾರ ಮತ್ತು ಅನುಮಾನದ ಮೂಲಕವೇ ಬಿಜೆಪಿ ಪಕ್ಷವನ್ನು ಸೋಲಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ಆದರೆ, ದೇಶದ ಜನರಿಗೆ ಮೋದಿಯ ತಾಕತ್ತು ಮತ್ತು ಪಾರದರ್ಶಕ ಆಡಳಿತದ ಮೇಲೆ ನಂಬಿಕೆಯಿರುವುದರಿಂದ ಈ ಬಾರಿಯೂ ಮೋದಿ ದೇಶದ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಎನ್. ರವಿಕುಮಾರ್, ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಜೆಡಿಎಸ್ ನಾಯಕ ಹೆಚ್.ಎಸ್. ಶಿವಶಂಕರ್, ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್, ಮಾಳವಿಕಾ ಅವಿನಾಶ್, ಅಣ್ಣೇಶ್ ಐರಣಿ, ವೀರೇಶ್ ಹನಗವಾಡಿ, ಕೊಳೇನಹಳ್ಳಿ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.