ಹರಿಹರದ ಗಿರಿಯಮ್ಮ ಮಹಿಳಾ ಕಾಲೇಜಿನಲ್ಲಿನ ಕದಳಿ ಮಹಿಳಾ ವೇದಿಕೆಯ ಕಾರ್ಯಕ್ರಮದಲ್ಲಿ ಬ್ರಹ್ಮಾಕುಮಾರಿ ಶಿವದೇವಿ
ಹರಿಹರ, ಏ.24- ನಾಡಿನ ಮಹಿಳೆಯರ ಒಳಿತಿಗಾಗಿ ಕಾವ್ಯದ ರೂಪದಲ್ಲಿ ಕನ್ನಡ ಭಕ್ತಿ ಸಾಹಿತ್ಯಕ್ಕೆ ಅಕ್ಕಮಹಾದೇವಿ ಕೊಟ್ಟಂತಹ ಕೊಡುಗೆ ಅವಿಸ್ಮರಣೀಯ ಎಂದು ಗಿರಿಯಮ್ಮ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಟಿ.ಡಿ.ಸುಜಾತ ಅಭಿಪ್ರಾಯಪಟ್ಟರು.
ನಗರದ ಗಿರಿಯಮ್ಮ ಮಹಿಳಾ ಕಾಲೇಜು ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಕದಳಿ ಮಹಿಳಾ ವೇದಿಕೆ ವತಿಯಿಂದ ನಿನ್ನೆ ನಡೆದ ಅಕ್ಕಮಹಾದೇವಿ ಜಯಂತಿ, ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಕಮಹಾದೇವಿಯವರು ಕನ್ನಡ ಭಾಷೆಯ ಆರಂಭಿಕ ಮಹಿಳಾ ಕವಿಗಲ್ಲೊಬ್ಬ ರಾಗಿ, 12ನೇ ಶತಮಾನದ ವೀರಶೈವ ಭಕ್ತಿ ಚಳವಳಿಯ ಪ್ರಸಿದ್ಧ ವ್ಯಕ್ತಿಗಳಾಗಿದ್ದರು. ಕನ್ನಡದ ಅವರ ವಚನಗಳು, ನೀತಿಬೋಧಕ ಕಾವ್ಯದ ರೂಪದಲ್ಲಿ ಕನ್ನಡ ಭಕ್ತಿ ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆಯಾಗಿದೆ. ಸುಮಾರು 430ಕ್ಕೂ ಹೆಚ್ಚು ವಚನಗಳನ್ನು ಬರೆದು ದಕ್ಷಿಣ ಭಾರತದಾದ್ಯಂತ ಸಂಪ್ರದಾಯ ಹರಡುವಲ್ಲಿ ಮಹತ್ವದ ಪಾತ್ರ ವಹಿಸಿ, ಜೊತೆಗೆ ಸ್ತ್ರೀ ವಿಮೋಚನೆಯ ಮಹತ್ವದ ಬಗ್ಗೆ ಪ್ರತಿಪಾದಿಸಿ, ಮಹಿಳಾ ಸ್ವಾತಂತ್ರ ಮತ್ತು ಹಕ್ಕುಗಳ ಪರವಾಗಿ ಬಹಿರಂಗವಾಗಿ ಮಾತನಾಡಿ ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚು ಸ್ಥಾನಮಾನವನ್ನು ಕೊಡಿಸುವ ಮೂಲಕ ಸಮಾಜದ ಒಳಿತಿಗಾಗಿ ಶ್ರಮಿಸಿದ್ದರು ಎಂದು ಹೇಳಿದರು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಳೀಯ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶಿವದೇವಿ ಅವರು ಮಾತನಾಡಿ, ಅಕ್ಕಮಹಾದೇವಿ ಅವರು ಸಾಮಾನ್ಯ ಮಹಿಳೆಯಾಗದೇ, ವೈರಾಗ್ಯ ದೇವತೆಯ ಸ್ವರೂಪವನ್ನು ಹೊಂದಿದ್ದರು. ಅವರು ನಾಡಿನ ಜನತೆಯ ಆರಾಧ್ಯ ದೈವವಾಗಿ ಹೊರಹೊಮ್ಮುವ ಮೂಲಕ ಪ್ರಕೃತಿಯಲ್ಲಿ ಶರಣತ್ವವನ್ನು ತುಂಬುವ ಪ್ರಯತ್ನ ಮಾಡಿದರು.
ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಇತಿಹಾಸಕ್ಕೆ ಸ್ಪೂರ್ತಿದಾಯಕ ಮಹಿಳೆ ಯಾಗಿದ್ದರು. 12ನೇ ಶತಮಾನದಲ್ಲಿ ಕಲಹ ಮತ್ತು ರಾಜಕೀಯ ಅನಿಶ್ಚಿತತೆ ಸಮಯ ದಲ್ಲಿ ಅಧ್ಯಾತ್ಮಿಕ ಜ್ಞಾನೋದಯ ಆರಿಸಿ ಕೊಂಡು, ತನ್ನ ಮನಸ್ಸು ದೇಹ ಮತ್ತು ಆತ್ಮ ಶಿವನಿಗೆ ಸೇರಿದ್ದು ಎಂದು ಚನ್ನಮಲ್ಲಿ ಕಾರ್ಜುನರ ಸಂಗವನ್ನು ಮಾಡಿದರು.
ತನ್ನ ಕುಟುಂಬದ ರಾಜಪ್ರಭುತ್ವದ ಸಂತೋಷಗಳನ್ನು ಮತ್ತು ಲೌಕಿಕ ನಿಯಂತ್ರಣಗಳನ್ನು ಹಿಂಭಾಗದಲ್ಲಿ ಬಿಟ್ಟು ಅರಮನೆಯನ್ನು ತೊರೆದು ಶರಣರ ಸಹವಾಸ ಕಂಡುಕೊಂಡು ಅನುಭವ ಮಂಟಪದಲ್ಲಿ ಸಾಮಾಜಿಕ ಅಭಿವೃದ್ಧಿಗೆ ಹೆಚ್ಚು ಒತ್ತನ್ನು ನೀಡುತ್ತಾ, ನಾನಾ ವಿಷಯಗಳ ಮುಕ್ತ ಚರ್ಚೆಗೆ ವೇದಿಕೆ ಕಲ್ಪಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಾಜವನ್ನು ಸುಧಾರಣೆ ತರುವ ನಿಟ್ಟಿನಲ್ಲಿ ತಮ್ಮ ಹೆಜ್ಜೆಗಳನ್ನು ಹಾಕಿ, ನಂತರ ಕದಳಿ ವನವನ್ನು ಕಂಡುಕೊಂಡು ತನ್ನ ಉಳಿದ ಜೀವನವನ್ನು ಗುಹೆಯಲ್ಲಿ ಕಳೆದರು ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಬಿ.ಟಿ.ಪ್ರಕಾಶ್ ಮಾತನಾಡಿ, ಪೋಷಕರು ತಮಗೆ ಎಷ್ಟೆಲ್ಲಾ ಕೆಲಸದ ಒತ್ತಡ ಇದ್ದರೂ ಸಹ ಮಕ್ಕಳಿಗೆ ಮನೆಯಲ್ಲಿ ಧಾರ್ಮಿಕ, ಸಾಮಾಜಿಕ, ಅಧ್ಯಾತ್ಮಿಕ ವಿಚಾರಗಳು ಬಗ್ಗೆ ಜ್ಞಾನವನ್ನು ನೀಡಿದಾಗ ದಾರ್ಶನಿಕರ, ಶರಣ ವಿಚಾರಗಳನ್ನು ಮಕ್ಕಳು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷ ರಾದ ರೂಪಾ ಕುರುವತ್ತಿ ನಾಗರಾಜ್ ಮಾತನಾಡಿ, ಅಕ್ಕಮಹಾದೇವಿಯವರು ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ಸಮಾಜವನ್ನು ಒಂದುಗೂಡಿಸುವ ಸೇತುವೆಯಾಗಿ ತಮ್ಮ ಕಾರ್ಯವನ್ನು ಮಾಡಿದ್ದರಿಂದ ಎಲ್ಲಾ ವರ್ಗದವರಿಗೆ ಆದರ್ಶವಾಗಿದ್ದಾರೆ ಎಂದು ಹೇಳಿದರು.
ಹರಿಹರ ತಾಲ್ಲೂಕು ಕದಳಿ ಮಹಿಳಾ ವೇದಿಕೆಯ ಸದಸ್ಯರಿಂದ ಮತ್ತು ಬಿ.ಟಿ. ಪ್ರಕಾಶ್ ವಚನ ಗಾಯನ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸಂಗೀತ ಶಿಕ್ಷಕಿ ಜಯಶ್ರೀ ಹೆಚ್.ಶ್ರೀಧರ್, ದತ್ತಿ ದಾನಿಗಳಾದ ಯಶೋಧ ಕೊಂಡಜ್ಜಿ, ಕದಳಿ ಮಹಿಳಾ ವೇದಿಕೆಯ ಗೌರವಾಧ್ಯಕ್ಷರಾದ ಸುನೀತಾ ಮಲ್ಲೇಶ್ ಮಾರವಳ್ಳಿ, ಉಪಾಧ್ಯಕ್ಷ ರಾದ ವೀರಮ್ಮ ಅಶೋಕ, ಕಾರ್ಯದರ್ಶಿ ಪ್ರೇಮ ಎಸ್.ಓಂಕಾರಪ್ಪ, ಖಜಾಂಚಿ ಎನ್.ಮಂಜುಳಾ, ಗೌರವ ಸಲಹೆಗಾರರು ಹೆಚ್.ಕೆ.ಜ್ಯೋತಿ ನಾಗರಾಜ್, ಪದಾಧಿಕಾರಿಗಳಾದ ಸುಧಾ ಬಣಕಾರ್, ಮಂಗಳಾ ಪಟೇಲ್, ಎಂ.ಎಸ್. ಕವಿತಾ, ಶಿವಲಿಂಗಮ್ಮ ಹುಲ್ಮನಿ, ಶಂಕುತಲಾ ಪವಾರ್, ಮಮತಾ ಬೆಲ್ಲದ್, ಭಾರತಿ ಪ್ರಕಾಶ್, ವಿಜಯಲಕ್ಷ್ಮಿ, ಬಿ.ಜೆ. ಶಂಕುತಲಾ ಮುತ್ತಣ್ಣ ಅಂಗಡಿ, ಗಿರಿಜಮ್ಮ ಎಂ.ಪಿ.ಮಂಜುಳಾ ಕೃಷ್ಣಮೂರ್ತಿ, ಜಯಮ್ಮ ಬಣಕಾರ್, ಲತಾ ಹುಲ್ಮನಿ, ಅಂಜು ಸುರೇಶ್ ರಾಜನವರ್, ಮೀನಾಕ್ಷಿ ಶಿವಕುಮಾರ್, ನಗರಸಭೆ ಮಾಜಿ ಸದಸ್ಯರಾದ ಅಂಬುಜಾ ಪಿ.ರಾಜೊಳ್ಳಿ, ಕರಿಬಸಮ್ಮ, ಶಿಲ್ಪಾ ಟಿ.ಜೆ. ಮುರುಗೇಶಪ್ಪ, ಈಶ್ವರೀಯ ವಿಶ್ವ ವಿದ್ಯಾಲಯದ ಸಂಗೀತಾ ಹಾಗೂ ಇತರರು ಹಾಜರಿದ್ದರು.