ಹರಪನಹಳ್ಳಿ, ಏ. 18- ಪ್ರಾದೇಶಿಕ ಅಸಮತೋಲನೆ ನಿವಾರಿಸುವ ನಿಟ್ಟಿನಲ್ಲಿ ಜಾರಿಗೆ ಬಂದಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಎಲ್ಲ ಸೌಲಭ್ಯಗಳು ಹರಪನಹಳ್ಳಿ ತಾಲ್ಲೂಕಿಗೆ ದೊರೆಯಬೇಕು. ಉದ್ಯೋಗದಲ್ಲಿ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ಹರಪನಹಳ್ಳಿ ತಾಲ್ಲೂಕು 371 ಜೆ ಕಲಂ ಅಡಿ ದಾವಣಗೆರೆ ಜಿಲ್ಲೆಯಿಂದ ಬೇರ್ಪಟ್ಟು ಬಳ್ಳಾರಿ ಜಿಲ್ಲೆಗೆ, ನಂತರ ವಿಜಯನಗರ ಜಿಲ್ಲೆಗೆ ಸೇರ್ಪಡೆಗೊಂಡಿದೆ. ಉದ್ಯೋಗಕ್ಕಷ್ಟೇ ಸೀಮಿತವಾಗದೆ ಹರಪನಹಳ್ಳಿ ತಾಲ್ಲೂಕಿನ ಸಮಗ್ರ, ಸರ್ವಾಂಗೀಣ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಿಳಿಸಿದರು.
ಹರಪನಹಳ್ಳಿ ತಾಲ್ಲೂಕಿನ ಕುಂಚೂರು, ಹಲವಾಗಲು, ನಿಟ್ಟೂರು ಗ್ರಾಮಗಳಲ್ಲಿ ಮತ ಯಾಚನೆ ಮಾಡಿ ಮಾತನಾಡಿದ ಅವರು, ಹರಪನ ಹಳ್ಳಿ ತಾಲ್ಲೂಕಿನ ಪ್ರಾದೇಶಿಕ ಅಸಮತೋಲನೆ ನಿವಾರಣೆ ಆಗಬೇಕು. ಭೌತಿಕವಾಗಿ ಹರಪನಹಳ್ಳಿ ತಾಲ್ಲೂಕಿನ ಚಿತ್ರಣ ಬದಲಾಗಬೇಕು. ರೈತರು, ಕೃಷಿ ಕಾರ್ಮಿಕರು, ಮಹಿಳೆಯರು, ಯುವಕರು ಆರ್ಥಿಕವಾಗಿ ಸಬಲರಾಗಬೇಕು. ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ತರಲು ನಾನು ಶ್ರಮಿಸುತ್ತೇನೆ ಎಂದರು.
ಹರಪನಹಳ್ಳಿ ತಾಲ್ಲೂಕಿನ ಅನೇಕ ತಾಂಡಾಗಳು ಕಂದಾಯ ಗ್ರಾಮಗಳಾಗಿ ಬದಲಾಗಿವೆ. ಈ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ ಕೀರ್ತಿ ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಆರ್.ಅಶೋಕ್ ಅವರಿಗೆ ಸಲ್ಲುತ್ತದೆ. ಈ ಭಾಗದ ರೈತರು ಹೆಚ್ಚಾಗಿ ತರಕಾರಿ, ಚೆಂಡು ಹೂವುಗಳನ್ನು ಬೆಳೆಯುತ್ತಾರೆ. ಇದಕ್ಕೆ ಸೂಕ್ತ ಮಾರುಕಟ್ಟೆ ಒದಗಿಸಲು ಚಿಂತನೆ ನಡೆಯುತ್ತಿದೆ.
ಹರಪನಹಳ್ಳಿ ತಾಲ್ಲೂಕಿನಿಂದ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರಿಗೆ 30 ರಿಂದ 50 ಸಾವಿರ ಲೀಡ್ ಕೊಡುತ್ತೇವೆ. ಈ ನಿಟ್ಟಿನಲ್ಲಿ ನಾನು ಮತ್ತು ಕಾರ್ಯಕರ್ತರು, ಮುಖಂಡರು ಶ್ರಮಿಸುತ್ತಿದ್ದೇವೆ. ಪ್ರತಿ ಹಳ್ಳಿಯಲ್ಲೂ ನಮ್ಮ ಕಾರ್ಯಕರ್ತರು ಕೇಂದ್ರ ಸರ್ಕಾರದ ಮತ್ತು ಸಿದ್ದೇಶಣ್ಣ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು ಮತ ಕೇಳುತ್ತಿದ್ದಾರೆ. ಲೋಕಸಭಾ ಕ್ಷೇತ್ರದಲ್ಲಿ ಗಾಯತ್ರಿ ಸಿದ್ದೇಶ್ವರ ಅಕ್ಕನವರು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಪಕ್ಕಾ.
– ಕರುಣಾಕರ ರೆಡ್ಡಿ, ಮಾಜಿ ಸಚಿವರು, ಹರಪನಹಳ್ಳಿ
ತರಕಾರಿ ಬೆಳೆಯುವ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣ ಮಾಡಲು ಸಂಕಲ್ಪ ಮಾಡಿದ್ದೇನೆ. ಸಂಸದ ಜಿ.ಎಂ.ಸಿದ್ದೇಶ್ವರ ಅವರು ಈಗಾಗಲೇ ದಾವಣಗೆರೆ ಹಾಗೂ ಚನ್ನಗಿರಿ ತಾಲ್ಲೂಕಿನಲ್ಲಿ ಕೋಲ್ಡ್ ಸ್ಟೋರೇಜ್ ಘಟಕಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಮೋದಿ ಜೀ ಜಾರಿಗೆ ತಂದಿರುವ ಅನೇಕ ಯೋಜನೆಗಳು ಜನರನ್ನು ಆರ್ಥಿಕವಾಗಿ ಬಲಪಡಿಸಿವೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಹರಪನಹಳ್ಳಿ ತಾಲ್ಲೂಕಿನ ಸಣ್ಣ ರೈತರಿಗೆ ಈ ವರ್ಷದಲ್ಲಿ ಮಧ್ಯಂತರ ಪರಿಹಾರವಾಗಿ ಅಂದಾಜು 13 ಕೋಟಿ ರೂ. ವಿಮೆ ಹಣ ಬಂದಿದೆ. ಇನ್ನು ಸ್ವಲ್ಪ ದಿನಗಳಲ್ಲಿ 20 ಕೋಟಿ ವಿಮೆ ಹಣ ಬರಲಿದೆ ಎಂದರು.
ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ 10 ವರ್ಷ ನೀವು ನೋಡಿರುವುದು ಟ್ರೈಲರ್, ಇನ್ನೂ ಪಿಕ್ಚರ್ ಬಾಕಿ ಇದೆ ಎಂದು. 10 ವರ್ಷದ ಟ್ರೈಲರ್ ನಲ್ಲಿಯೇ ದೇಶ ಇಷ್ಟು ಅಭಿವೃದ್ಧಿ ಕಂಡಿದೆ ಅಂದರೆ ಇನ್ನೂ 20 ವರ್ಷ ಅವರ ಕೈಯಲ್ಲಿ ಅಧಿಕಾರ ಇದ್ದರೆ ದೇಶ ಇನ್ನೆಷ್ಟು ಅಭಿವೃದ್ಧಿ ಹೊಂದ ಬಹುದು ನೀವೇ ಯೋಚನೆ ಮಾಡಿ. ಗಾಯತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸುವುದು, ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವುದು ನಮ್ಮ ಸಂಕಲ್ಪ ಆಗಬೇಕು ಎಂದು ಕರೆ ನೀಡಿದರು.
ಬಿಜೆಪಿ ಮುಖಂಡರಾದ ಲೋಕೇಶ್, ಶೇಖರಪ್ಪ, ಕಲ್ಲಣ್ಣ ಗೌಡ, ಮಂಜುನಾಥ್, ವೀರಭದ್ರಪ್ಪ, ಮಹಾಂತೇಶ್, ಬಸವರಾಜ್, ಹೇಮಣ್ಣ, ಅಂಜಿನಪ್ಪ, ನಾಗರಾಜ್, ವೀರಣ್ಣ, ಮಂಡಲದ ಅಧ್ಯಕ್ಷರು, ಮಂಡಲದ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ಮುಖಂಡರು ಇದ್ದರು.