ಬಿಜೆಪಿ,ಜೆಡಿಎಸ್‌ ಮೈತ್ರಿಯಿಂದ ರಾಜ್ಯದಲ್ಲಿ ಹೊಸ ಸಂಚಲನ

ಬಿಜೆಪಿ,ಜೆಡಿಎಸ್‌ ಮೈತ್ರಿಯಿಂದ ರಾಜ್ಯದಲ್ಲಿ ಹೊಸ ಸಂಚಲನ

 ಹರಪನಹಳ್ಳಿ : ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿ ಸಭೆಯಲ್ಲಿ ಮಾಜಿ ಶಾಸಕ ಎಚ್.ಎಸ್  ಶಿವಶಂಕರ್

ಹರಪನಹಳ್ಳಿ, ಏ.14- ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಯಿಂದಾಗಿ ರಾಜ್ಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದ್ದು, ಎದುರಾಳಿ ಪಕ್ಷಗಳಿಗೆ ಸೋಲುವ ಭಯ ಕಾಡುತ್ತಿದೆ ಎಂದು ಮಾಜಿ ಶಾಸಕ ಎಚ್.ಎಸ್  ಶಿವಶಂಕರ್ ಹೇಳಿದರು.

ಪಟ್ಟಣದ ನಟರಾಜ ಕಲಾಭವನದಲ್ಲಿ  ಹಮ್ಮಿಕೊಂಡಿದ್ದ ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ದಿನೇ ದಿನೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆ ಎತ್ತರಕ್ಕೆ ಹೋಗುತ್ತಿರುವುದು ನಮ್ಮ ಕಾರ್ಯಕರ್ತರಿಗೆ ಉತ್ಸಾಹ ತಂದಿದೆ ಎಂದು ಹೇಳಿದರು.

ಇಲ್ಲಿನ ಲೋಕಸಭಾ ಕ್ಷೇತ್ರದಲ್ಲಿ ಜಿ.ಎಂ. ಸಿದ್ದೇಶ್ವರರು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಆದ್ದರಿಂದ ಬರುವ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಪಕ್ಷವನ್ನು ಬೆಂಬಲಿಸುವ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ ಮಾತನಾಡಿ, ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಬಿಜೆಪಿ ಮತ್ತು ಜೆಡಿಎಸ್‌ನ ಮೈತ್ರಿ ಅವಶ್ಯವಾಗಿದೆ. ಹಿಂದೆ ರಾಜ್ಯದಲ್ಲಿ ಬಿಜೆಪಿ ಜತೆಗೆ ಮೈತ್ರಿ ಸರ್ಕಾರ ರಚಿಸಿದಾಗ ಪಕ್ಷಕ್ಕೆ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗಿತ್ತು. ಆದರೆ ಕಾಂಗ್ರೆಸ್ ಜತೆಗೆ ಮೈತ್ರಿಗೊಂಡಾಗ ಹೆಚ್ಚಿನ ಬೆಂಬಲ ದೊರಕಲಿಲ್ಲ ಎಂದ ಅವರು, ಕಾಂಗ್ರೆಸ್ ದರ್ಪದ ರಾಜಕೀಯ ಮಾಡಿಕೊಂಡು ಬಂದಿದೆ ದೂರಿದರು. 

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಶಿರಹಟ್ಟಿ ದಂಡೆಪ್ಪ ಮಾತನಾಡಿ, ರಾಜ್ಯ ಕಾಂಗ್ರೆಸ್‌ ಸರ್ಕಾರವು ಪ.ಜಾತಿ ಮತ್ತು ಪ.ಪಂಗಡದವರಿಗೆ ಮೋಸ ಮಾಡುತ್ತಿದೆ. ಎಸ್‍ಸಿಪಿ, ಟಿಎಸ್‍ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವ್ಯಯಿಸಿ ರಾಜ್ಯದ ಬೊಕ್ಕಸ ಖಾಲಿ ಮಾಡುತ್ತಿದೆ ಎಂದರು.

2006ರಲ್ಲಿ ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿಗೊಂಡಾಗ ರಾಜಕೀಯದಲ್ಲಿ ಹೊಸಪರ್ವ ಸೃಷ್ಟಿಯಾಗಿತ್ತು. ಇಂದು ಮತ್ತೆ ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿಯಿಂದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದೆ ಎಂದರು.

ವಿಜಯನಗರ ಜೆಡಿಎಸ್  ಜಿಲ್ಲಾಧ್ಯಕ್ಷ ಕೆ. ಕೊಟ್ರೇಶ್,  ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕೆ. ಆನಂದಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಟಿ. ಗಣೇಶ್ ದಾಸಕರಿಯಪ್ಪ, ಮುಖಂಡರಾದ ಡಾ.ಎಂ. ಸುರೇಶ್, ನಾಗರಾಜ್, ರಾಜಪ್ಪ, ಟಿ. ಗೋಣೆಪ್ಪ, ಸಣ್ಣವೀರಪ್ಪ, ಎಂ.ಮಲ್ಲಿಕಾ ರ್ಜುನ್‌, ಟಿ. ಮಂಜುನಾಥ್, ಬಸವರಾಜ್, ಅಜ್ಜಯ್ಯ, ಮುನೇಗೌಡ, ಸಾಸ್ವಿಹಳ್ಳಿ ಬಸಣ್ಣ, ಬಸವರಾಜ ಕಲ್ಲಳ್ಳಿ ಮತ್ತು ಇತರರು ಇದ್ದರು.

error: Content is protected !!