ಬಿಜೆಪಿ, ಜೆಡಿಎಸ್ ಮುಖಂಡರು, ಮೂವರು ನಗರಸಭೆ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಲ್ಲಿ ಸಚಿವ ಎಸ್ಸೆಸ್ಸೆಂ
ಹರಿಹರ, ಏ.14- ಹರಿಹರ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಿ, ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭರವಸೆ ನೀಡಿದರು.
ಅವರು, ಭಾನುವಾರ ಹರಿಹರ ನಗರದ ಹೊರ ವಲಯದಲ್ಲಿರುವ ಸಭಾ ಭವನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಹಾಗೂ ಮೂವರು ನಗರಸಭೆ ಸದಸ್ಯರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾನು ಈ ಹಿಂದೆ ಸಚಿವನಾಗಿದ್ದ ಸಂದರ್ಭದಲ್ಲಿ ಅಗಸನಕಟ್ಟೆ ಕೆರೆಯನ್ನು ಅಭಿವೃದ್ಧಿಪಡಿಸಿ, ಹರಿಹರ ನಗರಕ್ಕೆ ಕುಡಿಯುವ ನೀರು ಪೂರೈಸಬೇಕೆಂದು ಪ್ರಯತ್ನ ಮಾಡಿದ್ದೆವು. ಆದರೆ, ಕೆಲ ಕಾರಣಗಳಿಂದ ಅದು ಸ್ಥಗಿತಗೊಂಡಿತು. ಆದರೆ, ಈ ಬಾರಿ ನಾವೆಲ್ಲರೂ ಸೇರಿ 3-4 ಸಭೆಗಳನ್ನು ನಡೆಸಿ, ಯಾವ ರೀತಿ ಯೋಜನೆ ಸಿದ್ದಪಡಿಸಿ ಹರಿಹರ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಂಡು ಯೋಜನೆ ಜಾರಿಗೊಳಿಸೋಣ ಎಂದ ಸಚಿವರು, ದಾವಣಗೆರೆ ಮಾದರಿಯಲ್ಲೇ ಹರಿಹರ ನಗರವನ್ನೂ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲು ಸಹಕಾರ ನೀಡು ವುದಾಗಿ ಹರಿಹರ ಜನತೆಗೆ ಮಾತುಕೊಟ್ಟರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಎಲ್ಲಾ ಜನರಿಗೆ ಅನುಕೂಲವಾಗುವ 5 ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಬಿಜೆಪಿ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿರುವುದ ರಿಂದ ಈ ಬಾರಿ ಬಡವರು, ಮಧ್ಯಮ ವರ್ಗದವರು, ಕಾರ್ಮಿಕರು, ರೈತರು ಕಾಂಗ್ರೆಸ್ ಬೆಂಬಲಿಸಿ, ಅಧಿಕಾರಿಕ್ಕೆ ತರುವ ಸಂಕಲ್ಪ ಮಾಡಿದ್ದಾರೆಂದು ಮಲ್ಲಿಕಾರ್ಜುನ್ ಹೇಳಿದರು.
ಮಾಜಿ ಶಾಸಕ ಎಸ್.ರಾಮಪ್ಪ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಹರಿಹರ ಕ್ಷೇತ್ರದಿಂದ 25 ಸಾವಿರ ಮತಗಳ ಲೀಡ್ ಕೊಡುವುದಾಗಿ ಹೇಳಿದರು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಸಚಿವ ಮಲ್ಲಿಕಾರ್ಜುನ್ ಮತ್ತು ಡಾ. ಪ್ರಭಾ ಅವರು ಕಷ್ಟದಲ್ಲಿರುವ ಜನರಿಗೆ ಸದಾ ಸ್ಪಂದಿಸುತ್ತಾ ಬಂದಿದ್ದಾರೆ. ದಾನ-ಧರ್ಮ ದಲ್ಲಿ ಶಾಮನೂರು ಶಿವಶಂಕರಪ್ಪ ಅವರು ಮಾದರಿ ಯಾಗಿದ್ದಾರೆ. ಅಂತಹವರ ಕೈಗೆ ಅಧಿಕಾರ ಕೊಟ್ಟರೆ ಹರಿಹರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದರು.
ಜಿ.ಪಂ. ಮಾಜಿ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಗಳನ್ನು ಜನರಿಗೆ ತಿಳಿಸಿ ಮತ ಕೇಳಬೇಕು ಮತ್ತು ಅಭ್ಯರ್ಥಿ ನಾವೇ ಎಂದುಕೊಂಡು ಕೆಲಸ ಮಾಡಿ ದರೆ ಅಭೂತ ಪೂರ್ವ ಗೆಲುವು ನಿಶ್ಚಿತ ಎಂದು ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ತಿಳಿಸಿದರು.
ಈ ವೇಳೆ ಹರಿಹರ ನಗರಸಭೆ ಬಿಜೆಪಿ ಸದಸ್ಯರಾದ ಎಬಿಎಂ ವಿಜಯಕುಮಾರ್, ರಜನಿಕಾಂತ್, ಜೆಡಿಎಸ್ ಸದಸ್ಯ ಮುಜಾಮಿಲ್ ಬಿಲ್, ಹರಿಹರ ವಕೀಲರ ಸಂಘದ ಅಧ್ಯಕ್ಷ ಬಿ.ಆನಂದ್, ಬಿಜೆಪಿ ಮುಖಂಡರಾದ ಕೊಂಡಜ್ಜಿ ರಾಘವೇಂದ್ರ, ಪ್ರವೀಣ್ ಕುಮಾರ್, ಜೆಡಿಎಸ್ ಮುಖಂಡರಾದ ಪೈಲ್ವಾನ್ ಹನುಮಂತಪ್ಪ, ಮುಸ್ತಾಕ್ ಪಟೇಲ್, ಜುಬೇರ, ಪಿ.ಜಿ.ಹರ್ಷ, ಬಿ.ಎಂ.ಭರಮಪ್ಪ, ಇಲಿಯಾಜ್, ಬಿಜೆಪಿ ಮುಖಂಡ ಗುತ್ತೂರು ಗರಡಿಮನೆ ಬಸಪ್ಪ, ವಕೀಲ ಸಿ.ಬಿ.ರಾಘವೇಂದ್ರ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಕಾಂಗ್ರೆಸ್ ಮುಖಂಡರಾದ ಕೃಷ್ಣ ಸಾ ಭೂತೆ, ಎಂ.ಬಸಪ್ಪ, ಬೆಣ್ಣೆಹಳ್ಳಿ ಹಾಲೇಶಪ್ಪ, ಡಿ.ಜಿ.ರಘುನಾಥ್, ಶಂಕರ್ ಖಟಾವಕರ್, ಕೆ.ಕೆ.ರಫೀಕ್, ಹಬೀಬುಲ್ಲಾ, ಇಮ್ತಿಯಾಜ್ ಬೇಗ್, ಜರಿಕಟ್ಟೆ ಹಬೀಬ್ ಸಾಬ್, ನಿಖಿಲ್ ಕೊಂಡಜ್ಜಿ, ಜಿ.ಮಂಜುನಾಥ್ ಪಟೇಲ್, ಹನಗವಾಡಿ ಕುಮಾರ್, ನಗರಸಭೆ ಸದಸ್ಯ ಕೆ.ಜಿ.ಸಿದ್ದೇಶ್, ಹಿರಿಯ ವಕೀಲ ಪ್ರಸನ್ನಕುಮಾರ್, ಬೆಳ್ಳೂಡಿ ಬಸವರಾಜ್, ಸಿ.ಎನ್.ಹುಲಗೇಶ್, ಸಂತೋಷ್ ನೋಟದ್, ಕಿರಣ್ ಭೂತೆ, ಹನಗವಾಡಿ ಸಾರಥಿ ಮಂಜು, ಮಲೇಬೆನ್ನೂರಿನ ತಳಸದ ಬಸವರಾಜ್, ಬಿಳಸನೂರು ನರೇಂದ್ರ, ಪಿ.ಆರ್.ಕುಮಾರ್, ಪಿ.ಹೆಚ್.ಶಿವಕುಮಾರ್, ಪುರಸಭೆ ಸದಸ್ಯರಾದ ಬಿ.ಮಂಜುನಾಥ್, ಸಾಬೀರ್ ಅಲಿ, ಬಿ.ಸುರೇಶ್, ಪಿ.ಆರ್.ರಾಜು, ಭೋವಿಕುಮಾರ್, ಎ.ಕೆ.ಲೋಕೇಶ್, ಕಡ್ಲೆಗೊಂದಿ ಕೇಶವ, ಕುಂಬಳೂರಿನ ಜಿ.ಶಂಕರಗೌಡ, ಎಂ.ವಾಸುದೇವ ಮೂರ್ತಿ ಮತ್ತಿತರರು ಈ ವೇಳೆ ಹಾಜರಿದ್ದರು.