ಹರಪನಹಳ್ಳಿ ತಾ.ನಲ್ಲಿ ಸೋಲಾರ್ ಪಾರ್ಕ್ ಸೇರಿದಂತೆ ಉದ್ಯೋಗಾವಕಾಶಕ್ಕೆ ಒತ್ತು

ಹರಪನಹಳ್ಳಿ ತಾ.ನಲ್ಲಿ ಸೋಲಾರ್ ಪಾರ್ಕ್ ಸೇರಿದಂತೆ ಉದ್ಯೋಗಾವಕಾಶಕ್ಕೆ ಒತ್ತು

ಹರಪನಹಳ್ಳಿ ಕ್ಷೇತ್ರದಲ್ಲಿ ಪ್ರಭಾ ಮಲ್ಲಿಕಾರ್ಜುನ್ ಚುನಾವಣಾ ಪ್ರಚಾರ

ಹರಪನಹಳ್ಳಿ, ಏ. 14 – ತಾಲ್ಲೂಕಿನಲ್ಲಿ ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರ ಕನಸಿನಂತೆ ಸೋಲಾರ್ ಪಾರ್ಕ್ ಹಾಗೂ ತಾಲ್ಲೂಕಿನ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿ ಕಡತಿ, ನಿಟ್ಟೂರು, ಹಲವಾಗಲು, ಕುಂಚೂರು, ಕೆ.ಕಲ್ಲಹಳ್ಳಿ, ನೀಲಗುಂದ, ಚಿರಸ್ತಹಳ್ಳಿ, ಗುಂಡಗತ್ತಿ, ಯಡಿಹಳ್ಳಿ, ತೆಲಗಿ ಗ್ರಾಮಗಳಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

ಯುವಕರಿಗೆ ಉದ್ಯೋಗಾವಕಾಶದ ಜೊತೆಗೆ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಅನುಕೂಲಕ್ಕೆ ಗಾರ್ಮೆಂಟ್ಸ್ ಮತ್ತು ಕರಕುಶಲ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇಲ್ಲಿನ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಮೆಕ್ಕೆಜೋಳ ಮತ್ತು ತರಕಾರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ರೈತರಿಗೆ ನ್ಯಾಯಯುತವಾದ ಬೆಲೆ ಸಿಗಲು ಸಂಸ್ಕರಣಾ ಘಟಕಗಳನ್ನು ಆರಂಭಿಸಲಾಗುವುದು. ಜೊತೆಗೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಬಾಗಳಿ ಮತ್ತು ನೀಲಗುಂದ ಕ್ಷೇತ್ರಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಶಾಸಕರಾದ ಲತಾ ಮಲ್ಲಿಕಾರ್ಜುನ್ ಮಾತನಾಡಿ, ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಸಿಕ್ಕಿಲ್ಲ. ಈ ಬಗ್ಗೆ ದಾವಣಗೆರೆ ಲೋಕಸಭಾ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಗಮನ ಸೆಳೆಯಲಾಗಿದ್ದು, ಅವರು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಕೆ.ಕುಬೇರಪ್ಪ, ಮಲ್ಲಿಕಾರ್ಜುನ ಸ್ವಾಮಿ, ಎಲ್.ಎಂ.ನಾಯ್ಕ, ಹಾಲೇಶ್ ಗೌಡ್ರು, ಸುಷ್ಮಾ ಪಾಟೀಲ್, ಎಲ್.ಎಂ.ಹನುಮಂತಪ್ಪ, ಮಂಜಪ್ಪ ಹಲಗೇರಿ ಮತ್ತಿತರರಿದ್ದರು.

error: Content is protected !!