ದಾವಣಗೆರೆ, ಏ. 11 – ಪಾಲಿಕೆ ಮಾಜಿ ಸದಸ್ಯ ಶಿವನಳ್ಳಿ ರಮೇಶ್ ಬಿಜೆಪಿಗೆ ಸೇರ್ಪಡೆಯಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ನೇತೃತ್ವವನ್ನು ಮೆಚ್ಚಿ ಈ ಕ್ರಮ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ಜಿ.ಎಂ.ಐ.ಟಿ. ಅತಿಥಿ ಗೃಹದಲ್ಲಿ ತಮ್ಮ ಬೆಂಬಲಿಗರೊಂದಿಗೆ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇತರೆ ಪಕ್ಷಗಳು ಐದು ವರ್ಷ ಗಳಿಗೆ ಮಾತ್ರ ಪ್ರಣಾಳಿಕೆ ಹೊಂದಿರುತ್ತವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಮುಂದಿನ 25 ವರ್ಷಗಳ ವಿಕಸಿತ ಭಾರತ ರೂಪಿಸುವ ದೂರದೃಷ್ಟಿ ಹೊಂದಿದೆ ಎಂದರು.
ಮೋದಿ ಸರ್ಕಾರ ವಿಶ್ವದಲ್ಲಿ ತನ್ನದೇ ಆದ ಛಾಪು ಹೊಂದಿದೆ. ಐಕ್ಯತೆ, ಸಮಗ್ರತೆ ಹಾಗೂ ಭಾವೈಕ್ಯತೆಗಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರಜ್ಞಾವಂತ ನಾಗರಿಕ ನಾಗಿ ಬಿಜೆಪಿಗೆ ಸೇರುತ್ತಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಉಸಿರು ಕಟ್ಟುವ ವಾತಾವರಣ ಇತ್ತೇ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 2018ರಿಂದಲೇ ನಾನು ವೈಯಕ್ತಿಕ ಕಾರಣದಿಂದ ರಾಜಕೀಯ ವ್ಯವಸ್ಥೆಯಿಂದ ದೂರವಿದ್ದೆ. ಹೀಗಾಗಿ ಉಸಿರು ಕಟ್ಟುವ ವಾತಾವರಣದ ಪ್ರಶ್ನೆಯೇ ಇಲ್ಲ ಎಂದರು.
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಾಯಕತ್ವದಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆಯೂ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಆದರೆ, ಬಿಜೆಪಿ ಸೇರುವ ಮುಂಚೆ ಕಾಂಗ್ರೆಸ್ ನಾಯಕರ ಜೊತೆ ಯಾವುದೇ ಸಂಧಾನ ನಡೆಸಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಶಿವನಳ್ಳಿ ರಮೇಶ್ ಜೊತೆ ಹಲವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇನ್ನೂ ಹಲವರು ಬಿಜೆಪಿಗೆ ಬರಲಿದ್ದಾರೆ ಎಂದರು.
ಇದೇ ವೇಳೆ ಬೆಳ್ಳೂಡಿ ಮಂಜುನಾಥ ಅವರೂ ಬಿಜೆಪಿಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಮುಖಂಡರಾದ ಯಶವಂತರಾವ್ ಜಾಧವ್, ವೀರೇಶ್ ಹನಗವಾಡಿ, ಲೋಕಿಕೆರೆ ನಾಗರಾಜ್, ಬಿ.ಜಿ. ಅಜಯ್ ಕುಮಾರ್, ಸಂಗನಗೌಡ್ರು, ಧನಂಜಯ್ ಕಡ್ಲೇಬಾಳು, ಪಾಲಿಕೆ ಸದಸ್ಯೆ ರೇಖಾ ಗಂಡಗಾಳೆ ಮತ್ತಿತರರು ಉಪಸ್ಥಿತರಿದ್ದರು.