ದಾವಣಗೆರೆ, ಏ. 7- ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿನ ಬಂಡಾಯ ಶಮನವಾಗಿದೆ. ಪಕ್ಷೇತರನಾಗಿ ಸ್ಪರ್ಧಿಸುವುದಿಲ್ಲವಂತೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಬೇಡ. ಇನ್ನೆರಡು ದಿನಗಳಲ್ಲಿ ಬಾಕಿ ಇರುವ ಮಾಯಕೊಂಡ ಮತ್ತು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಗಳ ಜನತೆಯ ಅಭಿಪ್ರಾಯ ಸಂಗ್ರಹಿಸಿ, ನಂತರ ನನ್ನ ಅಂತಿಮ ನಿರ್ಧಾರವನ್ನು ಪತ್ರಿಕಾಗೋಷ್ಠಿಯ ಮುಖಾಂತರ ಘೋಷಿಸುವುದಾಗಿ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಕರ್ನಾಟಕ ರಾಜ್ಯ ಔಟ್ರೀಚ್ ಘಟಕದ ಉಪಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ನಾಳೆ ದಿನಾಂಕ 8 ರ ಸೋಮವಾರ ಬೆಳಿಗ್ಗೆ 10.30 ಕ್ಕೆ ನಗರದ ಎಸ್.ಎಸ್. ಬಡಾವಣೆಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಕಾರ್ಯಕರ್ತರ ಸಮಾಲೋಚನಾ ಸಭೆ ಕರೆದಿದ್ದು, ಅವರ ಅಭಿಪ್ರಾಯಗಳನ್ನು ಸಹ ಸಂಗ್ರಹಿಸಿ ಮುಂದಿನ ನಡೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸದಲ್ಲಿ ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಹರಿಹರ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರೊಟ್ಟಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ಅವಕಾಶ ನೀಡಲಾಗುವುದು ಎಂದರು. ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.