ಶಿಕ್ಷಣ, ಆರೋಗ್ಯ, ಕೈಗಾರಿಕಾ ಕ್ಷೇತ್ರಗಳ ಅಭಿವೃದ್ದಿಗೆ ಆದ್ಯತೆ
ಜಗಳೂರು, ಏ.7- ಶಿಕ್ಷಣ, ಆರೋಗ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತ ನೀಡಿ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮನವಿ ಮಾಡಿದರು.
ತಾಲ್ಲೂಕಿನ ಬಸವನಕೋಟೆ, ಗುರು ಸಿದ್ದಾ ಪುರ, ಸೊಕ್ಕೆ, ಹೊಸಕೆರೆ, ಕೆಚ್ಚೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಬಿರುಸಿನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮತಯಾಚಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಗಳು ರಾಜ್ಯದ ಜನತೆಗೆ ವರದಾನವಾಗಿವೆ. ಅನ್ನಭಾಗ್ಯ, ಗೃಹಲಕ್ಷ್ಮಿ,ಶಕ್ತಿ ಯೋಜನೆಗಳ ಫಲಾನುಭವಿಗಳಾದ ಮಹಿಳೆಯರು ಹಾಗೂ ವಿಧ್ಯಾನಿಧಿ ಪಡೆಯುವ ನಿರುದ್ಯೋಗಿ ಪದವೀಧರರು ಕಾಂಗ್ರೆಸ್ ಪಕ್ಷವನ್ನು ಕೈಬಿಡಬಾರದು.ಕಾಂಗ್ರೆಸ್ ಪಕ್ಷ ಮುಂದೆಯೂ ನುಡಿದಂತೆ ನಡೆಯುತ್ತದೆ ಎಂದರು. ಗೆಲುವಿನ ನಂತರ ಜಗಳೂರು ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಸ್ಥಳೀಯ ಶಾಸಕರೊಂದಿಗೆ ಕೈಜೋಡಿಸುವೆ ಎಂದು ಹೇಳಿದರು.
ರಾಜಕೀಯ ಅನುಭವ ಹೊಂದಿದ ಕುಟುಂಬದ ಸೊಸೆಯಾಗಿರುವ ನಾನು, ಕ್ಷೇತ್ರದಲ್ಲಿನ ಜ್ವಲಂತ ಸಮಸ್ಯೆಗಳನ್ನು ಅರಿತುಕೊಂಡಿದ್ದೇನೆ. ನನ್ನ ಪತಿ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದಾರೆ. ನಾನು ಅದೇ ಕುಟುಂಬದ ಸದಸ್ಯೆಯಾಗಿ ಲೋಕಸಭಾ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಈ ಬಾರಿ ನನ್ನನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸುವ ಆತ್ಮ ವಿಶ್ವಾಸ ಹೊಂದಿರುವೆ ಎಂದು ತಿಳಿಸಿದರು.
ಕಳೆದ 15 ದಿನಗಳ ಹಿಂದೆ ಶಕ್ತಿದೇವತೆ ಚೌಡೇಶ್ವರಿ ರಥೋತ್ಸವದಲ್ಲಿ ದೇವಿ ಆಶೀ ರ್ವಾದ ಪಡೆದಿದ್ದೇನೆ. ಮತದಾರರ ಬಂಧುಗಳ ಆಶೀರ್ವಾದ ಮೇ.7 ರಂದು ನನ್ನ ಮೇಲಿರಲಿ ಎಂದು ಮನವಿಮಾಡಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ನಿರಂತರ ವಾಗಿ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿರುವ ಕ್ಷೇತ್ರದ ಅಭಿವೃದ್ದಿಯ ಸಂಕಲ್ಪಹೊಂದಿರುವ ದಾವಣಗೆರೆ ಕ್ಷೇತ್ರದ ಮನೆಮಗಳು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ವಿಧಾನ ಸಭಾ ಕ್ಷೇತ್ರದಿಂದ ವ್ಯಾಪಕ ಬೆಂಬಲವ್ಯಕ್ತವಾಗುತ್ತಿದೆ.ಈ ಬಾರಿ ಸಂಸದರಾಗಿ ದೆಹಲಿ ಸಂಸತ್ತಿಗೆ ಹೋಗುವುದು ನಿಶ್ಚಿತ ವಿಶ್ವಾಸವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳ ಕುರಿತು ಪಕ್ಷದ ಕಾರ್ಯಕರ್ತರು ಪ್ರತಿಕುಟುಂಬದ ಮತದಾರರಿಗೆ ಜಾಗೃತಿ ಮೂಡಿಸಿ ಪ್ರತಿ ಬೂತ್ ಮಟ್ಟದಿಂದ ಅಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ತಾಲ್ಲೂಕಿನ ಹಳ್ಳಿಗಳಲ್ಲಿ ಪರಿಶಿಷ್ಟ ಸಮುದಾಯಗಳು ಹೆಚ್ಚಾಗಿ ವಾಸವಾಗಿದ್ದು. 100 ಕೋಟಿ ವೆಚ್ಚದ ಏಕಲವ್ಯ ವಸತಿ ಶಾಲೆಗೆ ಸ್ಥಳ ಗುರುತಿಸಿದ್ದು.ಪ್ರಸ್ತಾವನೆ ಸಲ್ಲಿಸಲಾಗಿದೆ.ಇದರಿಂದ ಬಡಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸದರಾಗಿ ಆಯ್ಕೆಯಾದರೆ ಕೇಂದ್ರ ಸರ್ಕಾರದಿಂದ ಶೀಘ್ರವಾಗಿ ಅನುಮೋದನೆ ದೊರೆಯಲಿದೆ ಎಂದರು.
ಜೆಸಿಬಿ ಯಂತ್ರದಿಂದ ಸೇಬುಹಣ್ಣಿನ ಹಾರ ಮಾಲಾರ್ಪಣೆ, ಪಟಾಕಿ ಸಿಡಿಸಿ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಬ್ರಾಹ್ಮಣ ಅಭಿವೃದ್ದಿ ನಿಗಮ ಅಧ್ಯಕ್ಷ ಅಸಗೋಡು ಜಯಸಿಂಹ, ಕೆಪಿಸಿಸಿ ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಕೆಪಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಮುಖಂಡರಾದ ಶಿವಕುಮಾರ್ ಒಡೆಯರ್, ಸುಧೀರ್ ರೆಡ್ಡಿ, ಬಿ.ಮಹೇಶ್ವರಪ್ಪ, ತಿಪ್ಪೇಸ್ವಾಮಿಗೌಡ, ಯುಜಿ ಶಿವಕುಮಾರ್, ಬಸವಾಪುರ ರವಿಚಂದ್ರ, ಅಹಮ್ಮದ್ ಅಲಿ, ರಮೇಶ್, ಗಿರೀಶ್, ಮಹಮ್ಮದ್ ಗೌಸ್ ಪಲ್ಲಾಗಟ್ಟೆ ಶೇಖರಪ್ಪ ಮುಂತಾದವರು ಭಾಗವಹಿಸಿದ್ದರು.