ಬಿಜೆಪಿ ತೊಲಗಿಸಲೆಂದೇ ಜನಜಾಗೃತಿ

ಬಿಜೆಪಿ ತೊಲಗಿಸಲೆಂದೇ ಜನಜಾಗೃತಿ

ಪ್ರಗತಿಪರ ಸಂಘಟನೆಯಿಂದ ದೇಶ ಉಳಿಸಲು ಸಂಕಲ್ಪ: ಅಪ್ಪಾ ಸಾಹೇಬ್‌

ದಾವಣಗೆರೆ, ಏ. 5- ಕರ್ನಾಟಕದ ಸಮಸ್ತ ಸಂಘಟನೆ ಗಳ ಸಂಯುಕ್ತಾಶ್ರಯದಲ್ಲಿ ಏ.1ರಂದು ಬೆಂಗಳೂರಿನಿಂದ ಪ್ರಾರಂಭವಾದ `ದೇಶ ಉಳಿಸಿ ಸಂಕಲ್ಪ ಯಾತ್ರೆ’ಯು ಶುಕ್ರವಾರ ಚಿತ್ರದುರ್ಗದಿಂದ ಬೆಣ್ಣೆನಗರಿಗೆ ಭೇಟಿ ನೀಡಿತು.

ಜನ ಜಾಗೃತಿ ಸಂಕಲ್ಪದೊಂದಿಗೆ ಸಂಜೆ ನಗರದ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿದ ಯಾತ್ರಿಗಳು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಜಯದೇವ ವೃತ್ತಕ್ಕೆ ಸಾಗಿದರು.

ಈ ವೇಳೆ ರೈತ ನಾಯಕ ಅಪ್ಪಾ ಸಾಹೇಬ್‌ ಯರನಾಳ್‌ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಸರ್ಕಾರದಿಂದ ದೇಶ ದಿವಾಳಿಯಾಗಿದೆ. ಆದ್ದರಿಂದ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಿಕೊಳ್ಳುವ ಉದ್ದೇಶದಿಂದ ಈ ಸಂಕಲ್ಪ ಯಾತ್ರೆ ಕೈಗೊಂಡಿರುವುದಾಗಿ ತಿಳಿಸಿದರು.

ದೇಶದಲ್ಲಿ ಕೋಮು ಗಲಭೆ ಸೃಷ್ಟಿಸುತ್ತಿರುವ ಬಿಜೆಪಿಯ ಹಿಟ್ಲರ್‌ ಆಡಳಿತಕ್ಕೆ ತಕ್ಕ ಪಾಠ ಕಲಿಸುವ ಉದ್ದೇಶದಿಂದ ಹಾಗೂ ರಾಜ್ಯದಲ್ಲಿ 28 ಸ್ಥಾನಗಳನ್ನೂ ಗೆಲ್ಲುವುದಕ್ಕಾಗಿ ಜನ-ಜಾಗೃತಿ ಮಾಡುತ್ತಿದೇವೆ ಎಂದರು.

ತುಮಕೂರಿನ ರೈತ ಕಾರ್ಯಕರ್ತ ಎನ್.ಜಿ. ರಾಮಚಂದ್ರ ಮಾತನಾಡಿ, ಮೋದಿ ಸರ್ಕಾರವು ಸಾರ್ವಜನಿಕ ಆಸ್ತಿಗಳನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದೆ. ಕೇಂದ್ರದಲ್ಲಿನ ಆಡಳಿತ ಸರ್ಕಾರವು, ಆರ್‌ಎಸ್‌ಎಸ್‌ಗೆ ಬಾಲಂಗೋಚಿಯಾಗಿ ಆಡಳಿತ ನಡೆಸುವ ಜತೆಗೆ ಸಂವಿಧಾನವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿಗರು, ಸಂಸತ್‌ ಸದಸ್ಯರಿಂದ ಸಂವಿಧಾನ ಬದಲಿಸುವ ಮಾತನ್ನು ರಾಜಾರೋಷವಾಗಿ ಹೆಳಿಸುತ್ತಾ ಜನತೆಯ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ ಮತ್ತು ದಿನೇ ದಿನೇ ಸಂವಿಧಾನದ ಕತ್ತು ಹಿಸುಕು ಸಾಯಿಸುವ ಸಂಚು ನಡೆಸಿದ್ದಾರೆ ಎಂದು ಗುಡುಗಿದರು.

ರೈತರನ್ನು ದೆಹಲಿಗೆ ಹೋಗಲು ನಿರ್ಬಂಧ ಮಾಡಿದ ಸರ್ಕಾರಕ್ಕೆ, ರೈತರೆಲ್ಲರೂ ಅದೇ ರೀತಿ ಬಿಜೆಪಿಗೆ ಮತ ನೀಡದೇ, ಅವರ ಅಧಿಕಾರಕ್ಕೆ  ನಿರ್ಬಂಧ ಹಾಕಲಿದ್ದಾರೆ ಎಂದರು.

400 ಸ್ಥಾನ ಗೆಲ್ಲುವುದಾಗಿ ತಿಳಿಸಿದ ಬಿಜೆಪಿಯ ಬಣ್ಣ, ಸಮಿಕ್ಷೆಯ ಭವಿಷ್ಯದಂತೆ 180 ಸ್ಥಾನ ಗೆಲ್ಲಲು ಅರ್ಹರಿಲ್ಲ ಎಂದು ಟೀಕಿಸಿದರು.

ಮೂರೂ ತಂಡಗಳಿಂದ ಪ್ರಾರಂಭವಾದ ಸಂಕಲ್ಪಯಾತ್ರೆಯ 2ನೇ ತಂಡವು ಶುಕ್ರವಾರ ನಗರದಲ್ಲಿ ಯಾತ್ರೆ ನಡೆಸಿ, ಹರಿಹರದ ಮೈತ್ರಿವನದಲ್ಲಿ ತಂಗಿದ್ದು. ಶನಿವಾರದಂದು ರಾಣೇಬೆನ್ನೂರು, ಹಾವೇರಿಯಲ್ಲಿ ಸಂಕಲ್ಪಯಾತ್ರೆ ಕೈಗೊಂಡು ಗದಗಿಗೆ ಸಾಗಲಿದೆ.

ಅಂಜನಮೂರ್ತಿ, ಎ.ಬಿ. ರಾಮಚಂದ್ರಪ್ಪ, ಆವರಗೆರೆ ಉಮೇಶ್‌, ಅನಿಸ್ ಪಾಷಾ, ಆವರಗೆರೆ ಚಂದ್ರು, ಆವರಗೆರೆ ರುದ್ರಮುನಿ, ಪವಿತ್ರಾ, ಜಬೀನಾ ಖಾನಂ, ಸರೋಜ, ಕುಂದವಾಡ ಮಂಜುನಾಥ್, ಆದಿಲ್‌ಖಾನ್‌, ಅಂಜಿನಪ್ಪ ಮತ್ತು ಇತರರು ಇದ್ದರು.

error: Content is protected !!