ತೀವ್ರ ಸೆಖೆಯಲ್ಲೂ ಬೇಕೇ ಸೂಟು-ಬೂಟು..?

ಮಾನ್ಯರೇ,

ದಾವಣಗೆರೆಯಲ್ಲಿ ಪ್ರಸ್ತುತ ಬಿಸಿಲು 40 ಡಿಗ್ರಿ ದಾಟುತ್ತಿದೆ. ಬಿಸಿ ಬಿಸಿ ಗಾಳಿಯಿಂದ ಜನ ತತ್ತರಿಸುವಂತಾಗುತ್ತಿದೆ. ಹತ್ತಿಯ ಬಟ್ಟೆಗಳನ್ನು ಧರಿಸಿಯೇ ಬಿಸಿಲನ್ನು ತಡೆಯಲಾಗುತ್ತಿಲ್ಲ. ಆದರೆ ಕೆಲವೊಂದು ಕಾಲೇಜುಗಳಲ್ಲಿ ಸಿಂಥೆಟಿಕ್‌ನ ಸೂಟು, ಬೂಟುಗಳನ್ನು ಸಮವಸ್ತ್ರವಾಗಿ ಮಾಡಿದ್ದಾರೆ. ದಯ ವಿಟ್ಟು ಕಾಲೇಜಿನ ಆಡಳಿತ ಮಂಡಳಿಯವರು  ಮಕ್ಕಳ ಕಷ್ಟವನ್ನು ಮನಗಂಡು ಸಮವಸ್ತ್ರವನ್ನು ಬದಲಿಸಬೇಕು. ಇನ್ನು ವಕೀಲರು ಸಹ ಕಪ್ಪು ಕೋಟು, ಬೂಟನ್ನು ಧರಿಸಬೇಕಾಗಿದೆ. ಅವರ ಕಷ್ಟ ಹೇಳತೀರಲಾಗದು. ಪ್ರೆಶರ್ ಕುಕ್ಕರ್‌ನಲ್ಲಿ ಹಾಕಿ ಸೀಟಿ ಹೊಡೆಸಿದಂತಾಗುತ್ತದೆ. ಈ ಕಷ್ಟವನ್ನು ಅನುಭವಿಸಿದವರೇ ಬಲ್ಲರು. 

ಈ ಕಷ್ಟ ಅನುಭವಿಸಿದವರು ತಮ್ಮ ಮೇಲಿನ ಅಧಿಕಾರಿ ವರ್ಗದವರಿಗೆ ಮನವೊಲಿಸಿ ಆರೋಗ್ಯ ದೃಷ್ಟಿಯಿಂದ ಬೇಸಿಗೆಯ ಬಿರು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಕೊನೆ ಪಕ್ಷ ಬೇಸಿಗೆ ಕಾಲದ ಮೂರು ತಿಂಗಳಾದರೂ ಸೂಟು ಬೂಟನ್ನು ಧರಿಸದಿರಲು  ವಿನಾಯಿತಿ ಪಡೆಯಬೇಕು.

ಯುರೋಪ್, ಅಮೇರಿಕಾ, ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳಲ್ಲಿ ಹವಾಮಾನದಲ್ಲಿ ಚಳಿಗಾಳಿ ಇರುತ್ತದೆ. ಅವರು ಸೂಟು ಬೂಟು ಧರಿಸಿದರೆ ಅಲ್ಲಿನ ವಾತಾವರಣಕ್ಕೆ ಸರಿ ಹೋಗುತ್ತದೆ. ಆದರೆ ಭಾರತದಂತಹ ರಾಷ್ಟ್ರಗಳಲ್ಲಿ ವಾತಾವರಣ ಬಿಸಿಯಾಗಿರುವಾಗ ಸೂಟು, ಬೂಟು ಧರಿಸುವುದು ಸರಿಯೇ?  ಪ್ರಾದೇಶಿಕವಾಗಿ ಮತ್ತು ಹವಾಮಾನಕ್ಕನುಗುಣವಾಗಿ ರೀತಿ, ನೀತಿ, ರಿವಾಜುಗಳು ಡ್ರೆಸ್ ಕೋಡ್ ಬದಲಾಗಬೇಕು.  ಆರೋಗ್ಯ, ಆನಂದ ಕಾಪಾಡುವ ಡ್ರೆಸ್ ಹಾಕಬೇಕೇ ಹೊರತು ಒಣಾಡಂಭರದ ಸೂಟು ಬೂಟುಗಳನ್ನು ಧರಿಸಿ ಆರೋಗ್ಯ ಹಾಳು ಮಾಡಿಕೊಳ್ಳಬೇಕೇ ಎಂಬುದನ್ನು ಮೇಲಾಧಿಕಾರಿಗಳು ಮನಗಾಣಬೇಕು.    

ಇದಕ್ಕೆ ಪೂರಕವಾಗಿ ದಾವಣಗೆರೆಯ ಬಿಸಿಲಿನ ಬೇಗೆ ತಪ್ಪಿಸಲು. ಮನೆಗೆ ಎರಡು ಮರ ಬೆಳೆಸಿ ದವನಗಿರಿಯನ್ನು ಹಚ್ಚ ಹಸಿರಾಗಿಸಬೇಕು. ಹಿಂದೆ ಮಾಜಿ ಶಾಸಕರು ಮತ್ತು ದವನಗಿರಿಯ  ಹಸಿರು ನಾಯಕರಾಗಿದ್ದ ದಿ. ಕಾಮ್ರೇಡ್ ಪಂಪಾಪತಿಯವರ ಕಾಲದಲ್ಲಿ ಬೆಳೆಸಿದ ಗಿಡ-ಮರಗಳು ಇಂದು ನಮಗೆಲ್ಲರಿಗೂ ನೆರಳು ನೀಡುತ್ತಿವೆ. ಅವರನ್ನು ಕೃತಜ್ಞತೆಯಿಂದ ಸ್ಮರಿಸೋಣ. 

ಇಂತಹ ಸತ್ಕಾರ್ಯಗಳು ಇಂದು ಸಾಮಾಜಿಕ ಪ್ರಜ್ಞೆಯುಳ್ಳವರಿಂದ, ರಾಜಕೀಯ ಧುರೀಣರಿಂದ ಆಗಬೇಕು. `ಮನೆಗೆರಡು ಮರ, ದಾವಣಗೆರೆಗೆ ವರ’   ಎಂಬುದನ್ನು ಕಾರ್ಯಾಚರಣೆಗೆ ತರೋಣ.  ಯಾರೇ ಆಗಲಿ ಒಂದು ಗಿಡ ಕಡಿದರೇ ಕನಿಷ್ಟ ಎರಡು ಗಿಡಗಳನ್ನು ನೆಡುವುದರ ಮೂಲಕ ಪರಿಸರ ಕಾಳಜಿ ಮೆರೆಯೋಣ.


-ಎಂ. ಸಿದ್ದಯ್ಯ ವಕೀಲರು, 

ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ.

error: Content is protected !!