ನುಡಿದಂತೆ ನಡೆದಿದ್ದಕ್ಕೆ, ಅಭಿವೃದ್ಧಿಗೆ ಮತ ನೀಡಿ

ನುಡಿದಂತೆ ನಡೆದಿದ್ದಕ್ಕೆ, ಅಭಿವೃದ್ಧಿಗೆ ಮತ ನೀಡಿ

ಜಗಳೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಮತಯಾಚನೆ

ಜಗಳೂರು, ಮಾ.29- ಹಿಂದಿನ ಡಬಲ್ ಇಂಜಿನ್ ಸರ್ಕಾರ ಮಾಡಿದ ಸಾಧನೆ ಏನು? ಎಂಬುದನ್ನು ವಿಮರ್ಶಿಸಬೇಕಾದ ಮತ್ತು 25 ವರ್ಷಗಳಿಂದ ಕ್ಷೇತ್ರದಲ್ಲಿ ಗೆದ್ದವರು ಏನು ಮಾಡಿದ್ದಾರೆ? ಎಂದು ಜನರು ಯೋಚಿಸಿ ಮತ ನೀಡಬೇಕು ಎಂದು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಮನವಿ ಮಾಡಿದರು.

ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಮುಖಂಡರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನ ಅವರ ಕೈಯಲ್ಲಿ ಸುರಕ್ಷಿತವಾಗಿ ಇದೆಯೋ ಇಲ್ಲವೋ? ರೈತರ ಸಮಸ್ಯೆಗೆ ಪರಿಹಾರ ದೊರೆತಿದೆಯೋ ಇಲ್ಲವೋ? ಎಂಬುದನ್ನೂ ಸಹ ಜನ ವಿಮರ್ಶಿಸಿ ಈ ಚುವಾವಣೆಯಲ್ಲಿ ಮತ ನೀಡಬೇಕಾಗಿದೆ ಎಂದು ಅವರು ತಿಳಿಸಿದರು.

ನಾವು ಪಕ್ಷದ ಟಿಕೆಟ್ ಕೇಳಿರಲಿಲ್ಲ. ಕಳೆದ 25 ವರ್ಷಗಳಿಂದ ಪಕ್ಷದ ನಾಯಕರಿಗೆ ಮತಯಾಚನೆ ಮಾಡುತ್ತಾ ಬಂದಿದ್ದೇನೆ. ಕಾರ್ಯಕರ್ತಳಾಗಿ ಕೆಲಸ ಮಾಡಿದ್ದೇನೆ. ಎಸ್.ಎಸ್ ಕೇರ್ ಟ್ರಸ್ಟ್ ಮೂಲಕ ಸಮಾಜಸೇವೆಯಲ್ಲಿ  ತೊಡಗಿದ್ದೇನೆ. ಇದನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿದೆ. ಇದೊಂದು ಸೇವೆ ಮಾಡುವ ಅವಕಾಶ ದೊರಕಿದೆ ಎಂದರು.

ಚುನಾವಣಾ ಯುದ್ಧ ಆರಂಭವಾಗಿದೆ. ಅಂತಿ ಮವಾಗಿ ಜಯ ನಮ್ಮದೇ ಆಗಬೇಕು. ಈ ದೆಸೆಯಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

 ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಕಾರ್ಯಕರ್ತರು ಮನೆ ಮನೆಗೆ ಹೋಗಿ ತಿಳಿಸಬೇಕು ಮತ್ತು  ತಲುಪದೇ ಇರುವ ಮನೆಗಳಿಗೆ ಸೌಲಭ್ಯ ತಲುಪಿಸುವ ಕೆಲಸವನ್ನು ಮಾಡಬೇಕು ಎಂದರು.

 ಶಾಸಕ ಬಿ. ದೇವೇಂದ್ರಪ್ಪ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳ ಬಗ್ಗೆ ಕಾರ್ಯಕರ್ತರು ಮನೆ ಮನೆಗೆ ತೆರಳಿ ತಿಳಿಸುವ ಮೂಲಕ ಮತ ಯಾಚನೆ ಮಾಡಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ  ನಮ್ಮ ಪಕ್ಷದವರು ಸಂಸದರಾದರೆ ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳಲಿವೆ. ಆದ್ದರಿಂದ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಶ್ರಮಿಸಬೇಕು ಎಂದು ಕರೆ ನೀಡಿದರು.

ಸಭೆಗೆ ಮೊದಲು ಶ್ರೀ ಕ್ಷೇತ್ರ ಗಾಣಗಟ್ಟೆ ಮಾಯಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿಧಾನಸಭಾ ಕ್ಷೇತ್ರದ ಚಿಕ್ಕ ಉಜ್ಜನಿ ಗ್ರಾಮದಲ್ಲಿ  ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮತಯಾಚನೆ ಮಾಡಿದರು.

ಪಟ್ಟಣದ ಗಾಂಧಿ ವೃತ್ತದಿಂದ ತರಳಬಾಳು ಕೇಂದ್ರದ ವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.  ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ,  ಕೆಪಿಸಿಸಿ ವಕ್ತಾರ ಡಿ.ಬಸವರಾಜ್,  ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ  ಕೆ.ಪಿ. ಪಾಲಯ್ಯ, ಪ್ರಧಾನ ಕಾರ್ಯದರ್ಶಿ, ಎಂ.ಡಿ.ಕೀರ್ತಿ ಕುಮಾರ್ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಶೀರ್ ಅಹ್ಮದ್, ಅರಸಿಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜಣ್ಣ , ಕೆಪಿಸಿಸಿ ಸದಸ್ಯ ಕಲ್ಲೇಶ್ವರ ರಾಜ್ ಪಟೇಲ್, ಕಾಂಗ್ರೆಸ್ ಮುಖಂಡರಾದ ಶಿವನಗೌಡ, ಶ್ರೀಮತಿ ನಾಗರತ್ನಮ್ಮ, ತಿಪ್ಪೇಸ್ವಾಮಿ ಗೌಡ, ಅರಸಿಕೆರೆ ಕೊಟ್ರೇಶ್, ಪಲ್ಲಾಗಟ್ಟೆ ಶೇಖರಪ್ಪ ಮುಂತಾದವರು ಇದ್ದರು.

error: Content is protected !!