ಎಸ್ಸೆಸ್ಸೆಲ್ಸಿ: ಮೊದಲ ದಿನದ ಪರೀಕ್ಷೆ ಸುಸೂತ್ರ

ಎಸ್ಸೆಸ್ಸೆಲ್ಸಿ: ಮೊದಲ ದಿನದ ಪರೀಕ್ಷೆ ಸುಸೂತ್ರ

ದಾವಣಗೆರೆ, ಮಾ. 25 – ಎಸ್.ಎಸ್.ಎಲ್.ಸಿ. ಪರೀಕ್ಷೆ ಸೋಮವಾರದಿಂದ ಶುಭಾರಂಭ ಕಂಡಿದ್ದು, ಮೊದಲ ದಿನದ ಕನ್ನಡ ಪರೀಕ್ಷೆಗೆ 20,856 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಜಿಲ್ಲೆಯ ಒಟ್ಟು 82 ಪರೀಕ್ಷಾ ಕೇಂದ್ರಗಳಲ್ಲಿ 10,188 ಗಂಡು ಹಾಗೂ 10,668 ಹೆಣ್ಣು ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದಾರೆ. 150 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಒಟ್ಟಾರೆ ಹಾಜರಾತಿ ಪ್ರಮಾಣ ಶೇ.99.29 ಆಗಿದೆ ಎಂದು ಡಿ.ಡಿ.ಪಿ.ಐ. ಜಿ. ಕೊಟ್ರೇಶ್ ತಿಳಿಸಿದ್ದಾರೆ.

ಮೊದಲ ದಿನದಂದು ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಯಾವುದೇ ಅನಪೇಕ್ಷಿತ ಘಟನೆಗಳು ನಡೆದಿಲ್ಲ. ಹೋಳಿ ಹಬ್ಬದ ಸಂಭ್ರಮದ ನಡುವೆಯೇ, ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆಗೆ ಹಾಜರಾಗಿದ್ದಾರೆ.

ಈ ಬಾರಿ ಆಯ್ದ ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್‌ಗೆ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷಾ ಅಕ್ರಮಗಳನ್ನು ತಡೆಯುವ ಸಲುವಾಗಿ ಈ ಕ್ರಮ ತೆಗೆದುಕೊಳ್ಳಲಾಗಿತ್ತು. ಅಲ್ಲದೇ ವಿದ್ಯಾ ರ್ಥಿಗಳು ಗೋಡೆ ಕಡೆ ಮುಖ ಮಾಡಿಕೊಂಡು ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷೆಯ ನಂತರ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ನಗರದ ರಾಮ್ ಅಂಡ್ ಕೋ ಸರ್ಕಲ್‌ನಲ್ಲಿ ಸಂಭ್ರಮದ ಹೋಳಿ ಹಬ್ಬದ ಆಚರಣೆ ನಡೆಸು ವಾಗ ಅಬ್ಬರದ ಡಿ.ಜೆ. ಸದ್ದು ಕೇಳಿ ಬರುತ್ತಿತ್ತು. ಈ ಸದ್ದು ಹತ್ತಿರದ ಹೈಸ್ಕೂಲ್ ಮೈದಾನದ ಪರೀಕ್ಷಾ ಕೇಂದ್ರದವರೆಗೂ ತಲುಪುತ್ತಿತ್ತು. ಪರೀಕ್ಷಾ ವೇಳೆ ಹತ್ತಿರವಾಗುತ್ತಿದ್ದಂತೆ, ಡಿ.ಜೆ. ಅಬ್ಬರವನ್ನು ತಗ್ಗಿಸಲಾಯಿತು.

ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಹಲವಾರು ಸೂಚನೆಗಳನ್ನು ನೀಡುತ್ತಿದ್ದರು. ಪರೀಕ್ಷಾ ಕೇಂದ್ರದೊಳಗೆ ಬರುವಾಗ ನೀರು, ಬ್ಯಾಗ್, ವಾಚ್ ಸೇರಿದಂತೆ ಹಲವಾರು ವಸ್ತುಗಳನ್ನು ತರುವಂತಿಲ್ಲ ಎಂದು ಶಿಕ್ಷಕರು ಸೂಚನೆ ನೀಡುತ್ತಿದ್ದರು.

ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೆ.ಕೊಟ್ರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

error: Content is protected !!