ಭದ್ರಾ ನಾಲೆಯಲ್ಲಿ ಏರಿಕೆಯಾಗದ ನೀರಿನ ಹರಿವು : ರೈತರ ಆತಂಕ

ಭದ್ರಾ ನಾಲೆಯಲ್ಲಿ ಏರಿಕೆಯಾಗದ ನೀರಿನ ಹರಿವು : ರೈತರ ಆತಂಕ

ಮಲೇಬೆನ್ನೂರು, ಮಾ.25- ಭದ್ರಾ ಅಚ್ಚುಕಟ್ಟಿನ ತೋಟದ ಬೆಳೆಗಳಿಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದು, ಮುಖ್ಯನಾಲೆಯಲ್ಲಿ ನೀರಿನ ಹರಿವಿನ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ ಎಂದು ಮಲೇಬೆನ್ನೂರು ಭಾಗದ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಆಂತರಿಕ ಸರದಿ ಪ್ರಕಾರ ಮೊದಲಿಗೆ ಮಲೇಬೆನ್ನೂರು ಉಪವಿಭಾಗದ ಅಚ್ಚುಕಟ್ಟಿನ ಕೊನೆಭಾಗಕ್ಕೆ 4 ದಿನ ರಷ್‌ ಇರಿಗೇಷನ್‌ ಮೂಲಕ 3 ದಿನಗಳಿಂದ ನೀರನ್ನು ಹರಿಸಲಾಗುತ್ತಿತ್ತು. ಬಸವಾಪಟ್ಟಣ ಉಪವಿಭಾಗದ ವ್ಯಾಪ್ತಿಯಲ್ಲಿ ನೀರು ನಿಯಂತ್ರಿಸಿ, ಹರಿಸುತ್ತಿದ್ದರೂ ನಿಗದಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿಲ್ಲ ಎಂದು ಈ ಹಿಂದೆ ಜಿಲ್ಲಾಧಿಕಾರಿಗಳ ಗಮನಕ್ಕೆ ರೈತರ ತಂದಿದ್ದರು.

ಆದರೂ, ಈ ಬಾರಿ ಮತ್ತೆ ಅದೇ ಪಾಡಾಗಿದೆ ಎಂದು ಭಾನುವಾರ ಕೊಮಾರನಹಳ್ಳಿ ಸಮೀಪ ಭದ್ರಾ ನಾಲೆಗೆ ಭೇಟಿ ನೀಡಿದ್ದ ತಹಸೀಲ್ದಾರ್ ಗುರುಬಸವರಾಜ್ ಮತ್ತು ಕಂದಾಯ ನಿರೀಕ್ಷಕ ಆನಂದ್ ಅವರಿಗೆ ರೈತರು ಹೇಳಿದರು. ಬಸವಾಪಟ್ಟಣ ಬಳಿ ಇರುವ ಆರ್ 2 ರಲ್ಲಿ 11.2 ಅಡಿ  ನೀರು ಹರಿದುಬರುತ್ತಿದೆ. 

ಕೊಮಾರನಹಳ್ಳಿ ಬಳಿ ಬೆಳಿಗ್ಗೆ 5.2 ಅಡಿ ಇದ್ದರೆ ಸಂಜೆಯಾಗುತ್ತಿದ್ದಂತೆ 4.9 ಅಡಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಈಗಾದರೆ ಕೊನೆಭಾಗಕ್ಕೆ ಹೇಗೆ ನೀರು ತಲುಪುತ್ತದೆ ? ಎಂದು ರೈತರು ಅಧಿಕಾರಿಗಳನ್ನು  ಪ್ರಶ್ನಿಸಿದರು.

ಉಪಸ್ಥಿತ ಅಧಿಕಾರಿಗಳು ಹಾಲಿ ಹರಿದು ಬರುತ್ತಿರುವ ನೀರನ್ನು ಸರಿಯಾದ ರೀತಿ ತೋಟದ ಬೆಳೆಗಾರರು ಬಳಸಿಕೊಳ್ಳಿ, ಬೇಸಿಗೆ ವೇಳೆ ಸಹಕರಿಸಿ ಎಂದು ಹೇಳಿ ತೆರಳಿದರು.

ಎಇಇ ಧನಂಜಯ ನೇತೃತ್ದವಲ್ಲಿ ಅಕ್ರಮ ಪಂಪ್‌ಸೆಟ್‌ ತೆರವು ಕಾರ್ಯ ಮುಂದುವರೆದಿತ್ತು. ಎಇ ಭರತ್‌ ನೀರಿನ ನಿರ್ವಹಣೆ ಕೆಲಸದಲ್ಲಿ ನಿರತರಾಗಿದ್ದರು.

ಮೇಲ್ಭಾಗದಲ್ಲಿ ಅಕ್ರಮ ಪಂಪ್‌ಸೆಟ್‌ ತೆರವು ಮಾಡಿದರೆ ಮಾತ್ರ ಕೊನೆಭಾಗಕ್ಕೆ ತಲುಪುತ್ತದೆ. ಜಿಲ್ಲಾಡಳಿತ ಪೊಲೀಸ್‌ ಭದ್ರತೆಯೊಡನೆ ನೀರು ಹರಿಸಬೇಕು ಎಂಬುದು ಕೊನೆಭಾಗದ ರೈತರ ಆಗ್ರಹವಾಗಿದೆ 

ಏತನ್ಮಧ್ಯೆ ಮೇಲ್ಭಾಗದಲ್ಲಿ ನಿಲುಗಡೆ ಮಾಡಿ ಅಚ್ಚುಕಟ್ಟಿನ ಕೊನೆಭಾಗಕ್ಕೆ ಹರಿಸಲಾಗುತ್ತಿದ್ದು, ಇದರಿಂದ ಆಕ್ರೋಶಗೊಂಡ ರೈತರು 11 ಎ ಹಾಗೂ 12 ನೇ ಉಪವಿಭಾಗದ ನಾಲೆ ಗೇಟುಗಳು ಮುರಿದು ಹಾಕಿದ್ದಾರೆ ಎನ್ನಲಾಗಿದೆ.

error: Content is protected !!