ಬಿಜೆಪಿ ಅಭ್ಯರ್ಥಿ ಟಿಕೆಟ್ ಬದಲಿಸಲು ಬಿಗಿ ಪಟ್ಟು

ಬಿಜೆಪಿ ಅಭ್ಯರ್ಥಿ ಟಿಕೆಟ್ ಬದಲಿಸಲು ಬಿಗಿ ಪಟ್ಟು

ಎಸ್.ಎ. ರವೀಂದ್ರನಾಥ್ ನಿವಾಸದಲ್ಲಿ ಮತ್ತೆ ಸಭೆ ನಡೆಸಿದ ಬಿಜೆಪಿ ಬಂಡಾಯ ಮುಖಂಡರು

ಗೊಂದಲವನ್ನು ನಿವಾರಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಸೇರಿದಂತೆ, ಅನೇಕ ನಾಯಕರು ನಾಳೆ ನಗರಕ್ಕೆ ಭೇಟಿ

ದಾವಣಗೆರೆ, ಮಾ.24- ಸಂಸದ ಜಿ.ಎಂ. ಸಿದ್ದೇಶ್ವರ ಅವರ ಕುಟುಂಬಕ್ಕೆ ಲೋಕಸಭಾ ಚುನಾವಣಾ ಟಿಕೆಟ್ ನೀಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಬಂಡಾಯ ಮುಖಂಡರು, ಭಾನುವಾರ ಸಂಜೆ ಶಿರಮಗೊಂಡನಹಳ್ಳಿಯಲ್ಲಿನ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ನಿವಾಸದಲ್ಲಿ ಮತ್ತೊಮ್ಮೆ ಸಭೆ ನಡೆಸಿದ್ದಾರೆ.

ಈ ವೇಳೆ ಬಿಜೆಪಿ ಅಭ್ಯರ್ಥಿಗೆ ನೀಡಿರುವ ಟಿಕೆಟ್ ಬದಲಿಸಬೇಕು ಎಂದು ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟು ಹಿಡಿದರು. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ಆದರೆ, ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಲಾಯಿತು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಸೇರಿದಂತೆ, ರಾಜ್ಯದ ಹಿರಿಯ ನಾಯಕರು ನಾಡಿದ್ದು ದಿನಾಂಕ 26ರಂದು ನಗರಕ್ಕೆ ಆಗಮಿಸಲಿದ್ದು, ಆ ಸಮಯ ದಲ್ಲಿ ಅಭ್ಯರ್ಥಿ ಬದಲು ಮಾಡುವವರೆಗೂ ನಮ್ಮ ಬಿಗಿ ಪಟ್ಟು ಸಡಿಲಿಸುವುದು ಬೇಡ ಎಂದು ತೀರ್ಮಾನಿಸಲಾಯಿತು.

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವರಾದ ಜಿ. ಕರುಣಾಕರ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ,   ಯುವ ನಾಯಕರಾದ ಮಾಡಾಳ್ ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜ್, ಆರೈಕೆ ಆಸ್ಪತ್ರೆಯ ಡಾ. ರವಿಕುಮಾರ್, ಪಾಲಿಕೆ ಮಾಜಿ ಮೇಯರ್‌ಗಳಾದ ಎಂ.ಎಸ್. ವಿಠಲ್,  ಬಿ.ಜೆ. ಅಜಯ್ ಕುಮಾರ್,  ದೂಡಾ ಮಾಜಿ ಅಧ್ಯಕ್ಷ ಕೆ.ಎಂ. ಸುರೇಶ್, ಎಲ್. ಎನ್. ಕಲ್ಲೇಶ್ ಮತ್ತು ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಮತ್ತೊಂದು ಗುಂಪು ಅಸಮಾಧಾನ : ಏತನ್ಮಧ್ಯೆ, 2008ರ ಅವಧಿಯ  ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಮೇಯರ್‌ ಗಳು, ಮಾಜಿ ಉಪ ಮೇಯರ್‌ಗಳು, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರುಗಳು, ಮಾಜಿ ಸದಸ್ಯರುಗಳು ಜಿಲ್ಲೆಯ ಬಿಜೆಪಿ ಮುಖಂಡರ ವರ್ತನೆ ಬಗ್ಗೆ ಮುನಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಘೋಷಣೆಯಾದಾಗಿನಿಂದಲೂ ಸಂಸ ದರಾಗಲೀ, ಪಕ್ಷದ ಮುಖಂಡರಾಗಲೀ ನಮ್ಮನ್ನು ಸೌಜನ್ಯಕ್ಕಾದರೂ ಸಂಪರ್ಕಿಸದಿರುವ ಬಗ್ಗೆ ಆವ ರಗೆರೆಯ ಸುರೇಶ್, ಸಂಕೋಳ್ ಚಂದ್ರಶೇಖರ್ ಮತ್ತಿತರರು ಅಸಮಾಧಾನಗೊಂಡಿದ್ದಾರೆ. 

ಇವರೆಲ್ಲರೂ ಸಹ ಸಭೆ ನಡೆಸಿದ್ದು, ಪಕ್ಷದ ಮುಖಂಡರ ವರ್ತನೆ ಹೀಗೇ ಮುಂದುವರೆದಲ್ಲಿ ತಾವೆಲ್ಲರೂ ಸೇರಿ ತಕ್ಕ ಪಾಠ ಕಲಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.

ಮೋದಿ ಗೆಲುವಿಗೆ ತೀರ್ಮಾನ : ಜಿಲ್ಲಾ ಬಿಜೆಪಿಯ ನಿಷ್ಠಾವಂತ ಹಿರಿಯ ಕಾರ್ಯಕರ್ತರ ವೇದಿಕೆಯೊಂದನ್ನು ರಚಿಸಿಕೊಂಡಿರುವ ಎಂ.ಪಿ. ಕೃಷ್ಣಮೂರ್ತಿ ಪವಾರ್, ಹೆಚ್.ಎಸ್.ಲಿಂಗರಾಜ್ ಮತ್ತಿತರರು ದೇಶದ ಹಿತದೃಷ್ಟಿಯಿಂದ ಮೋದಿ ಗೆಲುವಿಗೆ ಶ್ರಮಿಸಲು ತೀರ್ಮಾನಿಸಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರೇ ಆಗಿರಲಿ, ಅವರ ಗೆಲುವಿನ ಮುಖಾಂತರ ನರೇಂದ್ರ ಮೋದಿ ಮತ್ತೊಂದು ಅವಧಿಗೆ ಪ್ರಧಾನಮಂತ್ರಿಯನ್ನಾಗಿ ಮಾಡುವುದಷ್ಟೇ ತಮ್ಮ ಗುರಿ ಎಂದು ಕೃಷ್ಣಮೂರ್ತಿ ಪವಾರ್ ಮತ್ತು ಲಿಂಗರಾಜ್ ತಿಳಿಸಿದ್ದಾರೆ.

error: Content is protected !!