ಕುಂದುವಾಡದ ಬಳಿ ಕಾಲುವೆಗೆ ಇಳಿದು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ ರೈತರು
ದಾವಣಗೆರೆ, ಮಾ. 24 – ಭದ್ರಾ ನೀರು ಹರಿಸಲು ಪ್ರಾರಂಭಿಸಿ ಇಂದಿಗೆ 4 ದಿನಗಳಾದರೂ ಕಾಲುವೆಗಳಲ್ಲಿ ನೀರು ಬರದಿರುವುದನ್ನು ಖಂಡಿಸಿ, ರೈತರು ಕುಂದುವಾಡದ ಬಳಿ ಕಾಲುವೆಗೆ ಇಳಿದು ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಅವರ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸತೀಶ್, ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ)ಯು ಅವೈಜ್ಞಾನಿಕ ವೇಳಾಪಟ್ಟಿಯಿಂದ ಕಾಲುವೆಗಳಲ್ಲಿ ನೀರು ಬಂದಿಲ್ಲ. ಐಸಿಸಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭಾಗವಹಿಸಿ, ದಾವಣಗೆರೆ ಜಿಲ್ಲೆಯಲ್ಲಿ ಶೇ. 70 ರಷ್ಟು ಅಚ್ಚುಕಟ್ಟು ಪ್ರದೇಶ ಇದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕು ಎಂದು ಅಂಕಿ-ಅಂಶಗಳ ಸಹಿತ ವಾದ ಮಂಡಿಸಿ, ನೀರು ಬಿಡಿಸುವ ಪ್ರಮಾಣ ಮತ್ತು ಅವಧಿ ಲೆಕ್ಕಾಚಾರದಂತೆ ವೇಳಾಪಟ್ಟಿ ನಿಗದಿ ಮಾಡಿಸಬೇಕಾಗಿತ್ತು. ಆದರೆ, ಅವರ ನಿರ್ಲಕ್ಷ್ಯ ಮತ್ತು ರೈತ ವಿರೋಧಿ ಧೋರಣೆಯಿಂದ ಐಸಿಸಿ ಸಭೆಗೆ ಗೈರು ಹಾಜರಾಗಿ, ಜಿಲ್ಲೆಯಲ್ಲಿ ನೀರಿನ ಹಾಹಾಕಾರಕ್ಕೆ ಕಾರಣಕರ್ತರಾಗಿದ್ದಾರೆ ಎಂದು ಆರೋಪಿಸಿದರು.
ರೈತ ಕುಂದುವಾಡದ ಜಿಮ್ಮಿ ಹನುಮಂತಪ್ಪ ಮಾತನಾಡಿ, ಸುಮಾರು 10-20 ವರ್ಷಗಳಿಂದ ಕಷ್ಟಪಟ್ಟು ಬೆವರು ಸುರಿಸಿ, ತೋಟದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ನಾವು ರೈತರು ಅನ್ನ ಕೊಡುವವರು ಕನ್ನ ಹಾಕುವವರಲ್ಲ. ಸರ್ಕಾರ ನೀರಿಲ್ಲದೆ ಕಂಗಾಲಾಗಿರುವ ನಮ್ಮ ಸಂಕಷ್ಟಕ್ಕೆ ಧಾವಿಸಬೇಕು ಎಂದು ಆಗ್ರಹಿಸಿದರು.
ಯುವ ರೈತ ಕುಂದುವಾಡದ ಪುನೀತ್ ಮಾತನಾಡಿ, ಭದ್ರಾ ನೀರು ಬರದಿರುವುದರಿಂದ ತೋಟಗಳು ಒಣಗಿ ಹೋಗಿವೆ. ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಅಂತರ್ಜಲ ಮಟ್ಟ ಕುಸಿದಿದೆ. ಪಶು ಪಕ್ಷಿಗಳಿಗೂ ನೀರು ಇಲ್ಲದೇ ಹಾಹಾಕಾರ ಎದ್ದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಜಿ.ಗಣೇಶಪ್ಪ ಮಾತನಾಡಿ. ಭದ್ರಾ ನೀರು ಕಾಲುವೆಯಲ್ಲಿ ಬಂದಿಲ್ಲ. ದನ, ಕರುಗಳಿಗೂ ನೀರು, ಮೇವು ಇಲ್ಲದೆ ಸಿಕ್ಕ ಸಿಕ್ಕ ರೇಟ್ ಗೆ ಮಾರಾಟ ಮಾಡುತ್ತಿದ್ದೇವೆ. ರೈತರು ನೀರಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ಬೆಳವನೂರು ನಾಗೇಶ್ವರರಾವ್, ಮಾಜಿ ಮೇಯರ್ ಹೆಚ್. ಎನ್. ಗುರುನಾಥ್, ಮುಖಂಡರಾದ ಭಾಸ್ಕರ್ ರೆಡ್ಡಿ, ಅಣ್ಣಪ್ಪ, ಬಿ. ಮಹೇಶಪ್ಪ, ಗದಿಗೇಶ ಹಂಚಿನಮನೆ, ತಿಪ್ಪಣ್ಣ ಹರಿಹರ, ಹೆಚ್. ಎನ್ ಮಹಾಂತೇಶ, ಹೆಚ್ ಎಸ್ ಸೋಮಶೇಖರ್, ಕ್ಯಾಂಪ್ ನಾಗೇಶ್ವರರಾವ್, ರಾಮಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು