ಕಾಂಗ್ರೆಸ್, ಬಿಜೆಪಿ ಎರಡರಿಂದಲೂ ಮಹಿಳಾ ಅಭ್ಯರ್ಥಿಗಳು
ದಾವಣಗೆರೆ, ಮಾ. 21 – ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಜಯಮಾಲೆ ಧರಿಸುವುದು ಖಚಿತವಾಗಿದೆ. ಬಿಜೆಪಿಯಿಂದ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ನಿಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧಿಸಲಿದ್ದಾರೆ.
ದಾವಣಗೆರೆ ಕ್ಷೇತ್ರದಲ್ಲಿ ಇದುವರೆಗೂ ಮಹಿಳೆಯೊಬ್ಬರು ಆಯ್ಕೆಯಾಗಲು ಸಾಧ್ಯವಾಗಿ ರಲಿಲ್ಲ. ಈ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಮಹಿಳೆಯರಿಗೆ ಟಿಕೆಟ್ ನೀಡಿವೆ. ಹೀಗಾಗಿ ಮೊದಲ ಬಾರಿಗೆ ಕ್ಷೇತ್ರಕ್ಕೆ ಮಹಿಳಾ ಪ್ರತಿನಿಧಿ ದೊರೆಯುವ ಅವಕಾಶ ಸಿಕ್ಕಿದೆ.
ಗಾಯತ್ರಿ ಸಿದ್ದೇಶ್ವರ ಹಾಗೂ ಪ್ರಭಾ ಮಲ್ಲಿಕಾರ್ಜುನ್ ಅವರಿಬ್ಬರೂ ರಾಜಕೀಯ ಹಿನ್ನೆಲೆಯ ಕುಟುಂಬದವರೇ ಆಗಿದ್ದಾರೆ. ಒಂದೇ ಬಾರಿಗೆ ಉಭಯರು ರಾಜಕೀಯದ ಮುನ್ನೆಲೆಗೆ ಬರುತ್ತಿರುವುದೂ ವಿಶೇಷ.
ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳದ ಕೃಷಿ ಹಿನ್ನೆಲೆ ಕುಟುಂಬದವರಾದ ಪ್ರಭಾ ಮಲ್ಲಿಕಾರ್ಜುನ್, ದಂತ ವೈದ್ಯೆಯಾಗಿದ್ದಾರೆ. ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆಯಾಗಿ ಹಾಗೂ ಎಸ್.ಎಸ್. ಕೇರ್ ಟ್ರಸ್ಟ್ನ ಲೈಫ್ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಳೆದ 25 ವರ್ಷಗಳಿಂದ ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ವಶದಲ್ಲಿದೆ. ಈ ಹಿಂದೆ 1998ರಲ್ಲಿ ಶಾಮನೂರು ಶಿವಶಂಕರಪ್ಪ ಅವರು ಕಾಂಗ್ರೆಸ್ನಿಂದ ಗೆದ್ದಿದ್ದರು. ನಂತರದಿಂದ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಲು ಸಾಧ್ಯವಾಗಿಲ್ಲ. ಶಿವಶಂಕರಪ್ಪ ಅವರ ಸೊಸೆ ಪ್ರಭಾ ಅವರು, ತಮ್ಮ ಮಾವನ ಸಾಧನೆ ಪುನರಾವರ್ತನೆ ಮಾಡಲು ಸಾಧ್ಯವಾಗಲಿದೆಯೇ? ಎಂಬುದಕ್ಕೆ ಈ ಚುನಾವಣೆ ಉತ್ತರ ನೀಡಬೇಕಿದೆ.