ಮಾ.25ರಿಂದ ಪರೀಕ್ಷೆ, ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲೂ ಸಿಸಿ ಕ್ಯಾಮೆರಾ
ದಾವಣಗೆರೆ, ಮಾ. 21- ಇದೇ ಮಾ.25ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಜಿಲ್ಲೆಯ 82 ಕೇಂದ್ರಗಳಲ್ಲಿ 11131 ಹುಡುಗರು ಹಾಗೂ 11130 ಹುಡುಗಿಯರು ಸೇರಿ ಒಟ್ಟು 22,261 ವಿದ್ಯಾರ್ಥಿಗಳು ಹತ್ತನೇ ತರಗತಿ ಪರೀಕ್ಷೆ ಬರೆಯಲಿದ್ದಾರೆ.
ಜಿಲ್ಲೆಯಲ್ಲಿ 10 ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಿವೆ. ಒಟ್ಟರೆ 82 ಮುಖ್ಯ ಅಧೀಕ್ಷಕರು, 16 ಉಪ ಮುಖ್ಯ ಅಧೀಕ್ಷಕರು ಹಾಗೂ 82 ಸ್ಥಾನಿಕ ಜಾಗೃತದಳ ಅಧಿಕಾರಿಗಳು ಪರೀಕ್ಷಾ ಪ್ರಕ್ರಿಕೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಈ ಬಾರಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ.
ಈ ಹಿಂದೆ ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರ, ಕಾರಿಡಾರ್ ಮೊದಲಾದ ಕಡೆ ಮಾತ್ರ ಸಿಸಿ ಕ್ಯಾಮೆರಾಗಳಿರುತ್ತಿದ್ದವು. ಆದರೆ ಈ ಬಾರಿ ಕೇಂದ್ರಗಳ ಎಲ್ಲಾ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಮತ್ತು ವೆಬ್ ಕ್ಯಾಸ್ಟ್ ಸೌಲಭ್ಯ ಅಳವಡಿಸುವಂತೆ ಇಲಾಖೆ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಕೊಟ್ರೇಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
– ಜಿ. ಕೊಟ್ರೇಶ್, ಡಿಡಿಪಿಐ
ಕಳೆದ ವರ್ಷ ಫಲಿತಾಂಶದಲ್ಲಿ ಕುಸಿತ ಕಂಡಿದ್ದ ಜಿಲ್ಲೆ
2021-22ರಲ್ಲಿ ಶೇ.92.55 ಫಲಿತಾಂಶದೊಂದಿಗೆ 10ನೇ ಸ್ಥಾನದಲ್ಲಿದ್ದ ಜಿಲ್ಲೆಯು 2022-23ರಲ್ಲಿ 90.12ರಷ್ಟು ಫಲಿತಾಂಶದೊಂದಿಗೆ ನಾಲ್ಕು ಸ್ಥಾನ ಕುಸಿತ ಕಂಡು, 14ನೇ ಸ್ಥಾನ ಪಡೆದಿತ್ತು. ನೆರೆಯ ಚಿತ್ರದುರ್ಗ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು, ಶೈಕ್ಷಣಿಕ ವಲಯದಲ್ಲಿ ಸಂಚಲನ ಉಂಟು ಮಾಡಿತ್ತು. ಇದೀಗ ದಾವಣಗೆರೆ ಜಿಲ್ಲೆಯಲ್ಲಿ ಫಲಿತಾಂಶ ಸುಧಾರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಾಕಷ್ಟು ಶ್ರಮ ವಹಿಸಿದ್ದು, ಪ್ರತಿಫಲ ಕಾದು ನೋಡಬೇಕಿದೆ.
82 ಪರೀಕ್ಷಾ ಕೇಂದ್ರಗಳು
ಚನ್ನಗಿರಿ ತಾಲ್ಲೂಕಿನಲ್ಲಿ 16, ದಾವಣಗೆರೆ ಉತ್ತರ 14, ದಕ್ಷಿಣ ವಲಯ 17, ಹರಿಹರ 12, ಹೊನ್ನಾಳಿ 11 ಹಾಗೂ ಜಗಳೂರು ತಾಲ್ಲೂಕಿ ನಲ್ಲಿ 12 ಸೇರಿ ಒಟ್ಟು 82 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇವುಗಳ ಪೈಕಿ 40 ಗ್ರಾಮೀಣ ಹಾಗೂ 42 ನಗರ ಪರೀಕ್ಷಾ ಕೇಂದ್ರಗಳಾಗಿವೆ. 22,261 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಇಲಾಖೆಯಿಂದ ಸಾಕಷ್ಟು ಕ್ರಮಗಳನ್ನು ಕೈಗೊಳ್ಳ ಲಾಗಿತ್ತು. ಬೋಧನೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಶಿಕ್ಷಕರಿಗೆ ತರಬೇತಿ ನೀಡಲಾಗಿತ್ತು. ತಾಲ್ಲೂಕು ಹಂತಗಳಲ್ಲಿ ವಿಷಯವಾರು ತರಬೇತಿ ಕಾರ್ಯಾಗಾರ ನಡೆಸಲಾಗಿದೆ. ಮೂರು ಹಂತಗಳಲ್ಲಿ ವಿವಿಧ ರೀತಿಯಲ್ಲಿ ಸರಣಿ ಪರೀಕ್ಷೆಗಳನ್ನು ವಿದ್ಯಾರ್ಥಿಗಳಿಗಾಗಿ ನಡೆಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಅವರ ಸಲಹೆಯಂತೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ತಿಳಿಸಿಕೊಡಲಾಗಿದೆ ಎಂದು ಡಿಡಿಪಿಐ ಕೊಟ್ರೇಶ್ ಹೇಳಿದರು.
ಚನ್ನಗಿರಿ ತಾಲ್ಲೂಕಿನಲ್ಲಿ ಸಂಜೆ 6 ರಿಂದ 11 ಗಂಟೆವರೆಗೆ ರಾತ್ರಿ ಶಾಲೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಬೋಧಿಸಲಾಗಿದೆ. ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಲಯಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ವಿಶೇಷ ತರಗತಿಗಳನ್ನು ನಡೆಸಲಾಯಿತು ಎಂದರು.
ಧಾರವಾಡದ ಗ್ರಾಮ ವಿಕಾಸ ಸಂಸ್ಥೆಯವರಿಂದ ಪ್ರತಿ ತಾಲ್ಲೂಕಿನಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ತರಬೇತಿ ಕೊಡಲಾಗಿತ್ತು. ಮಾನವ ಸಂಪನ್ಮೂಲ ವ್ಯಕ್ತಿ ನಂದೀಶ್ ವಿ.ಶೆಟ್ಟರ್ ಅವರು ಆರೂ ತಾಲ್ಲೂಕುಗಳ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಒತ್ತಡ ರಹಿತವಾಗಿ, ಹಬ್ಬದಂತೆ ಸಂಭ್ರಮಿಸುವುದು ಹೇಗೆ? ಎಂಬುದರ ಬಗ್ಗೆ ತರಬೇತಿ ನೀಡಿದ್ದಾರೆ ಎಂದರು.
– ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ