ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ಜಿಲ್ಲಾ ಸಮ್ಮೇಳನದಲ್ಲಿ ಆಗ್ರಹ

ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ಜಿಲ್ಲಾ ಸಮ್ಮೇಳನದಲ್ಲಿ ಆಗ್ರಹ

ಹರಿಹರ, ಮಾ. 19 – ನೆನೆಗುದಿಯಲ್ಲಿರುವ 3ನೇ ವಿಶ್ವ ಕನ್ನಡ ಸಮ್ಮೇಳನವನ್ನು ಶೀಘ್ರವಾಗಿ ದಾವಣಗೆರೆಯಲ್ಲಿ ಆಯೋಜಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

ಶ್ರೀ ಸಿದ್ದೇಶ್ವರ ಪ್ಯಾಲೇಸ್‌ನಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ‌ ನೆನೆಗುದಿಯಲ್ಲಿರುವ 3 ನೇ ವಿಶ್ವ ಕನ್ನಡ ಸಮ್ಮೇಳನವನ್ನು ಅತೀ ಶೀಘ್ರವಾಗಿ ದಾವಣಗೆರೆಯಲ್ಲಿ  ಆಯೋಜಿಸಲು ಕರ್ನಾಟಕ ರಾಜ್ಯ ಸರ್ಕಾರ ಅಗತ್ಯ ಕ್ರಮವಹಿಸಬೇಕು ಹಾಗೂ ಈ ನಿಟ್ಟಿನಲ್ಲಿ ಶೀಘ್ರವಾಗಿ ವಿಶೇಷಾಧಿಕಾರಿಯನ್ನು ನೇಮಿಸಬೇಕೆಂದು ಆಗ್ರಹಿಸುವ ನಿರ್ಣಯ ತೆಗೆದುಕೊಳ್ಳಲಾಯಿತು.

ವಿಶ್ವ ಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದಕ್ಕೆ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತಾ, ಈ ಘೋಷಣೆಗೆ ಪೂರಕವಾಗಿ ಬಸವಣ್ಣ ನವರ ಕುರಿತಾದ ಚರ್ಚೆ ನಾಡಿನಾದ್ಯಂತ ಆಯೋಜಿಸಬೇಕು.

ನಾಮಫಲಕಗಳು ಕನಿಷ್ಠ ಶೇ. 60ರಷ್ಟು ಕನ್ನಡ ಭಾಷೆಯಲ್ಲಿಯೇ ಇರಬೇಕು ಎನ್ನುವ ಸರ್ಕಾರದ ಆದೇಶ ಜಾರಿಗೆ ಅಧಿಕಾರಿಗಳು ಇಚ್ಛಾಶಕ್ತಿ ತೋರಬೇಕು.

ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕನ್ನಡ ಭಾಷಾ ಕಲಿಕೆ ಕಡ್ಡಾಯ ಮಾಡುವುದರ ಜೊತೆಗೆ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ.

ದಾವಣಗೆರೆ ಜಿಲ್ಲೆಯಲ್ಲಿ ಹಾಗೂ ವಿಶೇಷವಾಗಿ ಹರಿಹರ ತಾಲೂಕಿನಲ್ಲಿ ಭತ್ತ ಮತ್ತು ಗೋವಿನ ಜೋಳ ಉತ್ಪನ್ನಾಧಾರಿತ ಕೈಗಾರಿಕೆಗಳ ಸ್ಥಾಪನೆ, ಟೆಕ್ ಪಾರ್ಕ್ ಸ್ಥಾಪನೆ ಸೇರಿದಂತೆ ನೂತನ ಕೈಗಾರಿಕಗಳ ಸ್ಥಾಪನೆಗೆ ಆದ್ಯತೆ.

ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿ ಹಾಗೂ ಈ ಹಿಂದೆ ಕೆಲಸ ಕಳೆದುಕೊಂಡ ಕಾರ್ಮಿಕರ ಮತ್ತು ಅವರ ಮಕ್ಕಳ ಪುನಶ್ಚೇತನಕ್ಕಾಗಿ ಕಾರ್ಯಕ್ರಮ.

ಹರಿಹರ ತಾಲ್ಲೂಕಿನ ಭೈರನಪಾದ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸುವುದರ ಮೂಲಕ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಗಳಿಗೂ ನೀರು ತಲುಪಿಸಬೇಕು ಹಾಗೂ ಹರಿಹರ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ನದಿಗೆ ಬ್ಯಾರೇಜ್ ನಿರ್ಮಾಣ ಮಾಡಬೇಕು.

ಶಿಥಿಲಾವಸ್ಥೆಯಲ್ಲಿರುವ ಹರಿಹರ ತಾಲ್ಲೂಕಿನ ಮಲೇಬೆನ್ನೂರಿನ ಬಾಪೂಜಿ ಹಾಲ್ ನವೀಕರಣ.

ಮಧ್ಯ ಕರ್ನಾಟಕ ಭಾಗದಲ್ಲಿ ವಿಶ್ವ ದರ್ಜೆ ಸ್ಥಾನಮಾನದ ಕ್ರೀಡಾಂಗಣ ಸ್ಥಾಪನೆ,

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಾಣ ಮಾಡಬೇಕು ಎಂಬ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಜಿಲ್ಲಾ ಕಸಾಪ ಕೋಶಾಧ್ಯಕ್ಷ ರಾಘವೇಂದ್ರ ನಾಯರಿ ಓದಿದರು.

ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಸಿ.ವಿ. ಪಾಟೀಲ್,  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ. ವಾಮದೇವಪ್ಪ, ಡಿ.ಎಂ. ಮಂಜುನಾಥಯ್ಯ, ಸುಮತಿ ಜಯಪ್ಪ, ಎಲ್.ಜಿ. ಮಧುಕುಮಾರ್, ಡಿ. ಎಂ. ಹಾಲಾರಾಧ್ಯ, ಮುರಿಗೆಪ್ಪ ಗೌಡ, ಬಿ. ದಿಳ್ಳೆಪ್ಪ, ರೇವಣಸಿದ್ದಪ್ಪ ಅಂಗಡಿ, ಜಿಗಳಿ ಪ್ರಕಾಶ್, ಸಿ. ಜಗದೀಶ್, ವೀರೇಶ್ ಪ್ರಸಾದ್, ಇ.ಎಂ. ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.

error: Content is protected !!