ರೈತ-ಕಾರ್ಮಿಕ ಚಳವಳಿಗೆ ಅವಳಿ ನಗರಗಳ ಕೊಡುಗೆ ಅಪಾರ

ರೈತ-ಕಾರ್ಮಿಕ ಚಳವಳಿಗೆ ಅವಳಿ ನಗರಗಳ ಕೊಡುಗೆ ಅಪಾರ

ಎಂ.ಜಿ. ಈಶ್ವರಪ್ಪ

ಹರಿಹರ, ಮಾ. 19 – ಕಾರ್ಮಿಕ ಮತ್ತು ರೈತ ಚಳವಳಿಗೆ ಮಧ್ಯ ಕರ್ನಾಟಕದ ದಾವಣಗೆರೆ-ಹರಿಹರ ಅವಳಿ ನಗರಗಳ ಕೊಡುಗೆ ಅಪಾರ ಎಂದು ಜಾನಪದ ತಜ್ಞ ಎಂ.ಜಿ.ಈಶ್ವರಪ್ಪ ಹೇಳಿದರು.

ನಗರದ ಸಿದ್ದೇಶ್ವರ ಪ್ಯಾಲೇಸ್‍ನ ಹೆಳವನಕಟ್ಟೆ ಗಿರಿಯಮ್ಮ, ಪ್ರೊ.ಬಿ.ಕೃಷ್ಣಪ್ಪ ವೇದಿಕೆಯಲ್ಲಿ ನಡೆದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮಧ್ಯ ಕರ್ನಾಟಕದ ಚಳವಳಿಯ ಸ್ವರೂಪಗಳು ವಿಷಯ ಕುರಿತ ಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಾವಣಗೆರೆಯ ಹತ್ತಿ ಗಿರಣಿಗಳು, ಹರಿಹರದ ಕಿರ್ಲೋಸ್ಕರ್ ಕಾರ್ಖಾನೆಗಳು ಕಾರ್ಮಿಕ ಚಳವಳಿಗೆ ಹಾಗೂ ರೈತ ಮುಖಂಡ ಪ್ರೊ.ನಂಜುಂಡಸ್ವಾಮಿಯವರ ಅಪಾರ ಅನುಯಾಯಿಗಳಿಂದಾಗಿ ಪ್ರಬಲ ರೈತ ಚಳವಳಿಗೆ ಈ ನಗರಗಳು ಸಾಕ್ಷಿಯಾದವೆಂದರು.

ಈ ಎರಡೂ ಚಳವಳಿಗಳ ಹೊರತಾಗಿ ಸಾಂಸ್ಕೃತಿಕ ಹಿನ್ನೆಲೆಯೂ ಶ್ರೀಮಂತವಾಗಿದೆ. ದಾವಣಗೆರೆಯಲ್ಲಿದ್ದ ಹತ್ತಾರು ನಾಟಕ ಕಂಪನಿಗಳು ಪ್ರಮುಖ ಮನೋರಂಜನೆಯ ಕೇಂದ್ರಗಳಾಗಿದ್ದವು. ಅವುಗಳ ಮೂಲಕ ನೂರಾರು ಕಲಾವಿದರು ತಮ್ಮ ಕಾಯಕ ಕಂಡುಕೊಂಡಿದ್ದರು ಎಂದರು.

ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್ ಮಾತನಾಡಿ, ಒಂದು ಹತ್ತಿ ಗಿರಣಿಯ ಕಾರ್ಮಿಕರಾಗಿದ್ದ ದಿ.ಪಂಪಾಪತಿಯವರನ್ನು ನಗರಸಭಾಧ್ಯಕ್ಷ, ಮೂರು ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದು ದಾವಣಗೆರೆ ಕಾರ್ಮಿಕ ಚಳವಳಿಯ ಬಳುವಳಿಯಾಗಿದೆ ಎಂದು ಹೇಳಿದರು.

8 ಗಂಟೆ ಬದಲು 10 ರಿಂದ 12 ಗಂಟೆ ಗಳ ಅವಧಿವರೆಗೆ ಕಾರ್ಮಿಕರನ್ನು ಹತ್ತಿಯ ಗಿರಣಿಗಳಲ್ಲಿ ದುಡಿಸಿಕೊಳ್ಳುವುದು ಹಾಗೂ ಗಿರಣಿ ಮಾಲೀಕರ ಇತರೆ ಶೋಷಣೆಗಳನ್ನು ಖಂಡಿಸಿ ಆರಂಭಿಸಿದ ಹೋರಾಟಗಳನ್ನು ಹತ್ತಿಕ್ಕಲು ಮಾಲೀಕರು ಗೂಂಡಾಗಳಿಂದ ಕಾರ್ಮಿಕ ಮುಖಂಡರ ಮೇಲೆ ದಾಳಿ ಮಾಡಿ ಸಿದ ಉದಾಹರಣೆಗಳೂ ಇವೆ ಎಂದರು.

ಪ್ರೊ.ನಂಜುಂಡಸ್ವಾಮಿಯವರಿಂದ ಪ್ರಭಾವಿತರಾಗಿದ್ದ ಅಪಾರ ಸಂಖ್ಯೆಯ ರೈತ ಮುಖಂಡರು ಈ ಭಾಗದಲ್ಲಿದ್ದರು. ರಸಗೊಬ್ಬರ ದರ ಏರಿಕೆ ಮಾಡಿದ್ದನ್ನು ಖಂಡಿಸಿ ದಾವಣಗೆರೆಯಿಂದ ಆನಗೋಡಿನವರೆಗೆ ಸೇರಿದ್ದ ಅಪಾರ ಸಂಖ್ಯೆಯ ರೈತರನ್ನು ಚದುರಿಸಲು ನಡೆಸಿದ ಪೊಲೀಸ್ ಗೋಲಿಬಾರ್‌ನಲ್ಲಿ ಹಲವಾರು ರೈತರು ಅಸುನೀಗಿದ್ದರು ಎಂದರು.

ದಾವಣಗೆರೆ ಪ್ರಾಚಾರ್ಯ ಡಾ.ದಾದಾಪೀರ್ ನವಿಲೇಹಾಳ್ ಮಾತನಾಡಿ, ದೇವರಾಜ್ ಅರಸ್ ಅವಧಿಯಲ್ಲಿ ಜಾರಿಯಾದ ಉಳುವವನೇ ಒಡೆಯ, ಉಚಿತ ಹಾಸ್ಟೆಲ್‍ಗಳ ಸ್ಥಾಪನೆ ಹಾಗೂ ಇತರೆ ಸಮಾಜಮುಖಿ ನೀತಿಗಳಿಂದ ಹಾಗೂ ಮಾಜಿ ಸಚಿವ ಬಿ.ಬಸಲಿಂಗಪ್ಪರಂತಹವರ ಪ್ರಗತಿಪರ ಧೋರಣೆಗಳು ಮಧ್ಯ ಕರ್ನಾಟಕ ದಲ್ಲೂ ಪರಿಣಾಮ ಬೀರಿದ್ದವು ಎಂದರು.

ಸಾಹಿತಿ ಡಾ. ಆನಂದ ಋಗ್ವೇದಿ ಕನ್ನಡಪರ ಚಳವಳಿಗಳ ಕುರಿತು ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಸಮ್ಮೇಳನಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲ್, ಹರಿಹರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಾಂಭವಿ ನಾಗರಾಜ್, ಬಿಇಒ ಎಂ.ಹನುಮಂತಪ್ಪ, ಜಿ.ನಿಜಲಿಂಗಪ್ಪ, ಜಿ.ಸಿದ್ದೇಶ್, ಬಿ.ಜಿ.ಚೈತ್ರ, ಎಂ.ಎಸ್.ಜಗದೀಶ್ ಉಪಸ್ಥಿತರಿದ್ದರು.

error: Content is protected !!