ಜಿಲ್ಲೆಯಲ್ಲಿ ಇನ್ನೂ ತಣಿಯದ ಬಂಡಾಯ
ದಾವಣಗೆರೆ, ಮಾ. 17 – ಗಾಯತ್ರಿ ಸಿದ್ದೇಶ್ವರ ಅವರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಘೋಷಿಸಿದ ನಂತರ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತದ ಬೆಂಕಿ ಶಮನವಾಗುತ್ತಿಲ್ಲ. ಅಭ್ಯರ್ಥಿ ಬದಲಿಸುವಂತೆ ಬಂಡಾಯ ಮುಖಂಡರು ಗಡುವು ನೀಡಿದ್ದಾರೆ.
ಅತೃಪ್ತರು ಭಾನುವಾರ ಗೌಪ್ಯ ಸಭೆ ನಡೆಸಿದ್ದು, ತಮ್ಮ ನಿಲುವಿಗೆ ಅಂಟಿಕೊಂಡಿ ದ್ದಾರೆ. ಈ ಸಭೆಯಲ್ಲಿ ಮಾಜಿ ಸಚಿವ ಕರುಣಾಕರ ರೆಡ್ಡಿ ಸಹ ಪಾಲ್ಗೊಂಡಿದ್ದರು.
ಮಾಜಿ ಸಚಿವರಾದ ಎಸ್.ಎ. ರವೀಂದ್ರ ನಾಥ್, ಎಂ.ಪಿ. ರೇಣುಕಾ ಚಾರ್ಯ, ಮಾಜಿ ಶಾಸಕ ಬಸವರಾಜ ನಾಯ್ಕ, ಮುಖಂಡರಾದ ಬಿ.ಜಿ. ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ಡಾ. ರವಿಕುಮಾರ್, ಮುಖಂಡ ರಾದ ಮಾಡಾಳ್ ಮಲ್ಲಿಕಾರ್ಜುನ್, ಕಲ್ಲೇಶ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯ ನಂತರ ಮಾತನಾಡಿರುವ ಮಾಜಿ ಸಚಿವ ರವೀಂದ್ರನಾಥ್, ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದೆ. ಆದರೆ, ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ ಸೋಲು ಕಟ್ಟಿಟ್ಟ ಬುತ್ತಿ ಎಂದರು.
ದಾವಣಗೆರೆಯಲ್ಲಿ ಬಿಜೆಪಿ ಸೋಲಬಾರದು ಎಂದರೆ ಬೇರೆಯವರಿಗೆ ಟಿಕೆಟ್ ನೀಡಬೇಕು ಎಂಬುದೇ ನಮ್ಮ ಬೇಡಿಕೆ ಎಂದವರು ಹೇಳಿದರು.
ಈ ಬಗ್ಗೆ ನಾವು ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಯಾರ ಬಳಿಯೂ ಹೋಗುವುದಿಲ್ಲ. ಬಂಡಾಯ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಹಾಗೂ ಹೋರಾಟದ ಬಗ್ಗೆ ದುರ್ಗಾಂಬಿಕಾ ದೇವಿ ಜಾತ್ರೆಯ ಬಳಿಕ ತೀರ್ಮಾನಿಸ ಲಾಗುವುದು ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ, ಬಿಜೆಪಿ ಕಟ್ಟಿ ಬೆಳೆಸಿ ದವರು ನಾವೇ ಎಂದು ಸಂಸದರು ಹೇಳು ತ್ತಿದ್ದಾರೆ. ಹಾಗಾದರೆ ಕಳೆದ ಬಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಏಳು ವಿಧಾನಸಭೆಗಳಲ್ಲಿ ಬಿಜೆಪಿ ಸೋಲಲು ಅವರೇ ಕಾರಣವೇ? ಈ ನೈತಿಕ ಹೊಣೆ ಹೊತ್ತು ಕೊಳ್ಳುತ್ತಾರೆಯೇ? ಎಂದು ಪ್ರಶ್ನಿಸಿದರು.
ಮಹಿಳೆಯೊಬ್ಬರಿಗೆ ಈ ಬಾರಿ ಟಿಕೆಟ್ ನೀಡಬೇಕು ಎನ್ನುವುದಾದರೆ, ಸಾಮಾನ್ಯ ಕಾರ್ಯಕರ್ತೆಗೆ ನೀಡಲಿ. ಯಾವುದೇ ಕಾರ್ಯಕರ್ತನಿಗೆ ಟಿಕೆಟ್ ನೀಡಿದರೂ ನಾವು ತನು, ಮನ, ಧನ ನೀಡಿ ಅವರ ಗೆಲುವಿಗೆ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಮಾಜಿ ಸಚಿವ ಕರುಣಾಕರ ರೆಡ್ಡಿ ಮಾತನಾಡಿ, ಈ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ಮಂಡಲದ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದರು.
ನಿನ್ನೆ ಹರಪನಹಳ್ಳಿಯಲ್ಲಿ ನಡೆದ ಬಿಜೆಪಿ ಪದಗ್ರಹಣ ಸಮಾರಂಭದಲ್ಲಿ ಪೊಲೀಸರನ್ನು ಕರೆಯಿಸಿ ನಿಷ್ಠಾವಂತ ಕಾರ್ಯಕರ್ತರನ್ನು ಹೊರಗೆ ಕಳುಹಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ಸಿದ್ದೇಶ್ವರ ಜೊತೆಯಲ್ಲಿಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು.
ಸಿದ್ದೇಶ್ವರ ಅವರ ವರ್ತನೆಯ ಬಗ್ಗೆ ಕಾರ್ಯಕರ್ತರಲ್ಲಿ ಅಸಮಾಧಾನ ಇದೆ. ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ ಎಂದು ವಿಷಾದಿಸಿದರು.