6 ಅಥವಾ 12 ವರ್ಷಕ್ಕೊಮ್ಮೆ ದುಗ್ಗಮ್ಮನ ಜಾತ್ರೆ ನಡೆಯಲಿ…

ಮಾನ್ಯರೇ,

ಕಳೆದ ದುರ್ಗಾಂಬಿಕಾ ಜಾತ್ರೆಯ ವೇಳೆ ಹಲವಾರು ಬಡವರು ಪಡೆದ ಸಾಲವೇ ಇನ್ನೂ ತೀರಿಸಿಲ್ಲ ಮತ್ತೆ ಜಾತ್ರೆ ಬಂದಿದೆ. ಇದರಿಂದ ಬಡವರಿಗೆ ಕಷ್ಟವಾಗುತ್ತಿದೆ. ಐದು ವರ್ಷಕ್ಕೊಮ್ಮೆ ಜಾತ್ರೆ ಆಚರಿಸುವುದು ಸೂಕ್ತ ಎಂದು ಕಾರ್ಮಿಕ ಮುಖಂಡ ಆವರಗೆರೆ ಉಮೇಶ್‌ ಹೇಳಿರುವುದು ಸ್ವಾಗತಾರ್ಹ. ಆದರೆ 6 ವರ್ಷ ಅಥವಾ 12 ವರ್ಷಕ್ಕೊಮ್ಮೆ ಜಾತ್ರೆ ನಡೆಸಲಿ ಎಂದು ನಮ್ಮ ವಿನಂತಿ. 

ಆಹಾರ ಪದ್ದತಿ  ಅವರವರ ವೈಯಕ್ತಿಕ ಆಯ್ಕೆ.   ಆದರೆ ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಕೊಡುವುದು ಸೂಕ್ತವಲ್ಲ. ದೇವರು ಕರುಣಾಮಯಿ. ಯಾವ ದೇವರೂ ರಕ್ತ, ಮಾಂಸ ಬಯಸುವುದಿಲ್ಲ. ದೇವರಿಗೆ ಬೇಕಾಗಿರುವುದು ಬಲಿಯಲ್ಲ; ಭಕ್ತಿ.  ಕಲೆ, ಸಾಹಿತ್ಯ, ಸಂಗೀತ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನರಿಗೆ ಅರಿವು ಮೂಡಿಸಿ ಇನ್ನೂ ವೈಭವಯುತವಾಗಿ ಜಾತ್ರೆ ಮಾಡಬಹುದು. ಅದಕ್ಕೆ ಯಾರ ಆಕ್ಷೇಪವೂ ಬರುವುದಿಲ್ಲ.

ಈ ಹಿಂದೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಮತ್ತು ಬಸವ ಬಳಗದ ಹಲವರು ಸೇರಿ ಸರಳ ಜಾತ್ರೆ ಮಾಡಬೇಕು, ಕೋಣ ಕಡಿಯಬಾರದೆಂದು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಿದ್ದೆವು. ಬಡವರ ಹಿತ ಬಯಸುವ ದುಗ್ಗಮ್ಮ ದೇವಸ್ಥಾನದ ಆಡಳಿತ ಮಂಡಳಿ, ದಾವಣಗೆರೆಯ ಹಿರಿಯರು, ಸ್ವಾಮಿಗಳು, ಮುಖಂಡರು ಆಲೋಚಿಸಿ, ದುಗ್ಗಮ್ಮನ ಜಾತ್ರೆಯನ್ನು 6 ಅಥವಾ 12 ವರ್ಷಕ್ಕೊಮ್ಮೆ ಮಾಡಲು ನಿರ್ಧಾರಕ್ಕೆ ಬರಲೆಂದು ವಿನಂತಿ.


-ಪ್ರೊ. ಎಂ.ಬಸವರಾಜ್, ಲಾಯರ್ ಎಂ. ಸಿದ್ದಯ್ಯ, ಲಾಯರ್ ಭೈರೇಶ್, ಶಿವನಕೆರೆ ಬಸವಲಿಂಗಪ್ಪ

error: Content is protected !!