ದಾವಣಗೆರೆಯೇ ನನ್ನ ಕುಟುಂಬ, ಗೆಲ್ಲುವ ವಿಶ್ವಾಸವಿದೆ

ದಾವಣಗೆರೆಯೇ ನನ್ನ ಕುಟುಂಬ, ಗೆಲ್ಲುವ ವಿಶ್ವಾಸವಿದೆ

ಬಿಜೆಪಿ ಲೋಕಸಭಾ ಸ್ಥಾನದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

ದಾವಣಗೆರೆ, ಮಾ. 14 – ಇದುವರೆಗೂ ನಾನು ನನ್ನ ಕುಟುಂಬದ ಸೇವೆ ಮಾಡುತ್ತಾ ಬಂದಿದ್ದೆ. ಇನ್ನು ಮಂದೆ ದಾವಣಗೆರೆಯೇ ನನ್ನ ಕುಟುಂಬವಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತೇನೆ ಎಂದು ಬಿಜೆಪಿಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಗಾಯತ್ರಿ ಸಿದ್ದೇಶ್ವರ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಆಯೋಜಿಸಲಾಗಿದ್ದ ವಿಕಸಿತ ಭಾರತ ಸಂಕಲ್ಪ ಪತ್ರ ಸಲಹಾ ಅಭಿಯಾನದಲ್ಲಿ ಅವರು ಮಾತನಾಡಿದರು.

ಮುಂಬರುವ ಚುನಾವಣೆಯಲ್ಲಿ ಕಾರ್ಯಕರ್ತರು ಹಾಗೂ ದಾವಣಗೆರೆ ಜನರ ಬೆಂಬಲ – ಆಶೀರ್ವಾದಿಂದ ಗೆಲ್ಲುವ ವಿಶ್ವಾಸ ಇದೆ. ಜನರ ಆಶೀರ್ವಾದದಿಂದ ತಾವರೆ ಹೂವು ಮುಡಿದು ದೆಹಲಿಗೆ ಹೋಗುತ್ತೇನೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭೆಯಲ್ಲಿ ಏನೇ ಕೆಲಸ ಇದ್ದರು ಸಂಸದರ (ಪತಿ ಜಿ.ಎಂ.ಸಿದ್ದೇಶ್ವರ) ಬಳಿ ಕೇಳಿ ಮಾಡಿ ಕೊಡುತ್ತೇನೆ. ಅವರೂ ಜೊತೆಯಲ್ಲಿ ಇರುತ್ತಾರೆ. ಅವರೆಲ್ಲೂ ಹೋಗುವುದಿಲ್ಲ. ಅವರು ಹೇಳಿದ್ದನ್ನು ನಾನು ಮಾಡುತ್ತೇನೆ ಎಂದು ತಿಳಿಸಿದರು.

ಕಳೆದ 28 ವರ್ಷಗಳಿಂದ ಚುನಾವಣೆಯಲ್ಲಿ ಓಡಾಡಿದ್ದೇನೆ. ಈ ಸಭೆಯಲ್ಲಿರುವವರ ಮುಖ ಪರಿಚಯ ಚೆನ್ನಾಗಿದೆ, ಆದರೆ ಒಬ್ಬರನ್ನು ಬಿಟ್ಟು ಉಳಿದವರ ಹೆಸರು ಸರಿಯಾಗಿ ಗೊತ್ತಿಲ್ಲ ಎಂದೂ ಅವರು ತಿಳಿಸಿದರು.

ಈ ಹಿಂದೆ ಚುನಾವಣಾ ಪ್ರಚಾರದ ಸಮಯದಲ್ಲಿ ಹಳ್ಳಿಗಳಿಗೆ ಹೋಗಿದ್ದು ಬಿಟ್ಟರೆ, ಮತ್ತೆ ಮನೆ ಸೇರಿಕೊಳ್ಳುತ್ತಿದ್ದೆ. ರಾಜಕೀಯವಾಗಿ ನನಗೇನೂ ಗೊತ್ತಿಲ್ಲ. ಮನೆ ವ್ಯವಹಾರ, ತೋಟ, ಇತ್ಯಾದಿ ಜವಾಬ್ದಾರಿ ನೋಡಿಕೊಳ್ಳುತ್ತಿದ್ದೆ ಎಂದೂ ಗಾಯತ್ರಿ ಹೇಳಿದರು.

ಈಗ ರಾಷ್ಟ್ರ ನಾಯಕರು ನನಗೆ ದೇಶ ಸೇವೆಯ ಅವಕಾಶ ನೀಡಿದ್ದಾರೆ. ಇದುವರೆಗೂ ಸಣ್ಣ ಕುಟುಂಬದ ಸೇವೆ ಮಾಡುತ್ತಿದ್ದ ನಾನು, ದಾವಣಗೆರೆ ಎಂಬ ಕುಟುಂಬದ ಸೇವೆ ಸಲ್ಲಿಸುತ್ತೇನೆ. ಪ್ರಧಾನಿ ಮೋದಿ ಅವರಿಗೆ ರಾಷ್ಟ್ರವೇ ಕುಟುಂಬವಾಗಿದ್ದರೆ, ನನಗೆ ದಾವಣ ಗೆರೆ ಕುಟುಂಬವಾಗಿರಲಿದೆ ಎಂದು ಹೇಳಿದರು.

ನಮ್ಮ ಮಾವನವರು 7 ವರ್ಷ ಸಂಸದರಾಗಿದ್ದರು. ಪತಿ ಸಿದ್ದೇಶ್ವರ ಅವರು 20 ವರ್ಷ ಸೇವೆ ಸಲ್ಲಿಸಿದ್ದಾರೆ. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ಕಾರಣ. ಈ ಬಾರಿ ರಾಷ್ಟ್ರ ನಾಯಕರು ಹೆಣ್ಣು ಮಕ್ಕಳಿಗೆ ಅವಕಾಶ ನೀಡಬೇಕು ಎಂಬ ಕಾರಣದಿಂದ ನನಗೆ ಅವಕಾಶ ಕೊಟ್ಟಿದ್ದಾರೆ. ಚಾಚೂ ತಪ್ಪದೆ, ಕಳಂಕ ಬರದಂತೆ ಕಾರ್ಯನಿರ್ವಹಿಸುತ್ತೇನೆ ಎಂದವರು ಭರವಸೆ ನೀಡಿದರು.

error: Content is protected !!